ಮಹಾರಾ‍ಷ್ಟ್ರ(ಜೂ.09): ಕೊರೋನಾ ಮಧ್ಯೆ ದೇಶದ ಪರಿಸ್ಥಿತಿ ಬಹಳ ವಿಷಮಗೊಂಡಿದೆ. ಮೊದಲನೇ ಅಲೆಯಿಂದ ಚೇತರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಏಕಾಏಕಿ ದಾಳಿ ಇಟ್ಟ ಎರಡನೇ ಅಲೆ ಇಡೀ ದೇಶವನ್ನು ತತ್ತರಿಸುವಂತೆ ಮಾಡಿದೆ. ದೇಶವಿಡೀ ಈ ಸೋಂಕಿನಿಂದ ಪಾರಾಗೋದು ಹೇಗೆ ಎಂಬ ಬಗ್ಗೆ ಯೋಚಿಸುತ್ತಿದೆ. ಹೀಗಿರುವಾಗ ಮಹಾರಾಷ್ಟ್ರದ ಚಹಾ ವ್ಯಾಪಾರಿಯೊಬ್ಬ ಪ್ರಧಾನ ಮಂತಯ್ರಿ ಮೋದಿಗೆ ಗಡ್ಡ ಬೋಳಿಸಲು ನೂರು ರೂಪಾಯಿ ಮನಿ ಆರ್ಡರ್‌ ಮಾಡಿದ್ದಾರೆ. ಜೊತೆಗೊಂದು ಪತ್ರವನ್ನೂ ಕಳುಹಿಸಿದ್ದಾರೆ.

ಹೌದು ಮಹಾರಾಷ್ಟ್ರದ ಬಾರಾಮತಿಯ ಚಾಯ್‌ವಾಲಾ ಸದ್ಯ ಸುದ್ದಿಯಲ್ಲಿದ್ದಾರೆ. ಇಂದಾಪುರ್‌ನ ಆಸ್ಪತ್ರೆ ಎದುರು ಚಹಾ ವ್ಯಾಪಾರ ನಡೆಸುತ್ತಿರುವ ಅನಿಲ್ ಮೋರೆ ಎಂಬವರೇ ಪ್ರಧಾನಿ ಮೋದಿಗೆ ಗಡ್ಡ ಬೋಳಿಸಲು ಹಣ ಕಳುಹಿಸಿದ ವ್ಯಕ್ತಿ. ಆದರೆ ಈತ ಹೀಗೆ ಮಾಡಿರುವ ಹಿಂದೆ ಕಾರಣವೂ ಇದೆ. ಕಳೆದ ಒಂದೂವರೆ ವರ್ಷದಿಂದ ಕೊರೋನಾ ತಡೆಡಯಲು ಹೇರಲಾಗಿರುವ ಲಾಕ್‌ಡೌನ್ ಹಾಗೂ ಕಠಿಣ ನಿಯಮಗಳಿಂದ ಅಸಂಘಟಿತ ವಲಯಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಇದರಿಂದ ಬೇಸತ್ತು ಅವರು ಇಂತಹುದ್ದೊಂದು ಹೆಜ್ಜೆ ಇರಿಸಿದ್ದಾರೆನ್ನಲಾಗಿದೆ.

ಯಾರೂ ಮಾಡದ ಸಾಧನೆ ಪ್ರಧಾನಿ ಮಾಡಿದ್ದಾರೆ : ಮಾಜಿ ಸಚಿವ ಕೃಷ್ಣ ಬೈರೇಗೌಡ ಲೇವಡಿ

ಪ್ರಧಾನಿ ಮೋದಿ ಈ ಲಾಕ್‌ಡೌನ್ ಸಂದರ್ಭದಲ್ಲಿ ಗಡ್ಡ ಬೆಳೆಸಿದ್ದಾರೆ. ಆದರೆ ನಿಜಕ್ಕೂ ಅವರು ದೇಶದ ಜನರಿಗೆ ಉದ್ಯೋಗಾವಕಾಶ ಹೆಚ್ಚಿಸಬೇಕು, ಲಸಿಕೆ ಅಭಿಯಾನ ಮತ್ತಷ್ಟು ವೇಗವಾಗಿ ನಡೆಯುವಂತೆ ಕ್ರಮ ವಹಿಸಬೇಕು, ವೈದ್ಯಕೀಯ ಸೌಲಭ್ಯ ಹೆಚ್ಚಿಸುವ ಕಡೆ ಗಮನಹರಿಸಬೇಕು. ಅಲ್ಲದೇ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಜನರ ಕಷ್ಟ ನಿವಾರಣೆಯಾಗುವ ಹಾಗೆ ನೋಡಿಕೊಳ್ಳಬೇಕು ಎಂದು ಅನಿಲ್ ಮೋರೆ ಹೇಳಿದ್ದಾರೆ,

ಪ್ರಧಾನ ಮಂತ್ರಿಯ ಸ್ಥಾನ ಈ ದೇಶದಲ್ಲಿ ಉನ್ನತವಾದದ್ದು ಎಂದಿರುವ ಅನಿಲ್ ಮೋರೆ 'ನಮ್ಮ ಪ್ರಧಾನ ಮಂತ್ರಿಯ ಬಗ್ಗೆ ನನಗೆ ಅತ್ಯಂತ ಗೌರವ ಮತ್ತು ಮೆಚ್ಚುಗೆ ಇದೆ. ನಾನು ನ್ನನ ಉಳಿತಾಯದ ನೂರು ರೂಪಾಯಿಯನ್ನು ಪ್ರಧಾನ ಮಂತ್ರಿ ಮೋದಿಗೆ ಕಳುಹಿಸುತ್ತಿದ್ದು, ಇದರಿಂದ ಅವರ ಕ್ಷೌರ ಮಾಡಿಕೊಳ್ಳಲಿ. ಅವರು ಸರ್ವೋಚ್ಚ ನಾಯಕ ಮತ್ತು ಅವರಿಗೆ ನೋಯಿಸುವ ಉದ್ದೇಶ ನನಗಿಲ್ಲ. ಆದರೆ ಕೊರೋನಾದಿಂದಾಗಿ ಯಾವ ರೀತಿ ಬಡವರ ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತಿವೆಯೋ, ಈ ಬಗ್ಗೆ ಅವರ ಗಮನಸೆಳೆಯಲು ಇದೊಂದೇ ಸೂಕ್ತ ಹಾದಿ' ಎಂದಿದ್ದಾರೆ ಮೋರೆ.

ವ್ಯರ್ಥ ಮಾಡಿದವರಿಗೆ ಲಸಿಕೆ ಪ್ರಮಾಣ ಕಡಿತ: ಕೇಂದ್ರದ ಎಚ್ಚರಿಕೆ

ಇನ್ನು ಪ್ರಧಾನ ಮಂತ್ರಿ ಮೋದಿಗೆ ಬರೆದಿರುವ ಪತ್ರದಲ್ಲಿ ಅನಿಲ್ ಮೋರೆ 'ಕೊರೋನಾದಿಂದ ಸಾವನ್ನಪ್ಪಿದ ಕುಟುಂಬಗಳಿಗೆ ತಲಾ 5 ಲಕ್ಷ ರೂ ಹಾಗೂ ಇದರಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ 30,000 ರೂ. ಆರ್ಥಿಕ ನೆರವು ನೀಡಿ' ಎಂದು ಒತ್ತಾಯಿಸಿದ್ದಾರೆ.