ರಾಯಚೂರು:(ಜ.02): ಗಡಿ ಖ್ಯಾತೆ ದೇಶದ ಬಹುತೇಕ ರಾಜ್ಯಗಳನ್ನು ಕಾಡುತ್ತಿರುವ ಜಟಿಲ ಸಮಸ್ಯೆ. ಒಂದು ನಿರ್ದಿಷ್ಟ ಪ್ರದೇಶ ತನಗೆ ಸೇರಬೇಕು ಎಂದು ಆ ಪ್ರದೇಶದೊಂದಿಗೆ ಗಡಿ ಹಂಚಿಕೊಂಡ ಎರಡು ರಾಜ್ಯಗಳು ಸದಾ ಕಿತ್ತಾಡುತ್ತಿರುತ್ತವೆ.  

ಇದಕ್ಕೆ ಉತ್ತಮ ನಿದರ್ಶನ ಬೆಳಗಾವಿ ಗಡಿ ಖ್ಯಾತೆ. ಬೆಳಗಾವಿ ನಮ್ಮದು ಎಂದು ಪದೇ ಪದೇ ಮಹಾರಾಷ್ಟ್ರ ಸರ್ಕಾರ ಖ್ಯಾತೆ ತೆಗೆಯುವುದು ನಮ್ಮೆಲ್ಲಿಗೂ ಗೊತ್ತಿರುವ ಸಂಗತಿ.

ಆದರೆ ನೆರೆಯ ಆಂಧ್ರಪ್ರದೇಶದ ಟಿಡಿಪಿ ನಾಯಕರೋರ್ವರು ಮಾತ್ರ ಇದಕ್ಕೆ ತದ್ವಿರುದ್ಧ. ಆಂಧ್ರಪ್ರದೇಶದ ಭಾಗವಾಗಿರುವ ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸುವಂತೆ ಟಿಡಿಪಿ ಮಾಜಿ ಶಾಸಕ ತಿಕ್ಕಾರೆಡ್ಡಿ ಆಗ್ರಹಿಸಿದ್ದಾರೆ. 

ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಮಾಡಲು ಹೊರಟಿದ್ದಾರೆ. ಇದಕ್ಕೆ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ಜನರ ವಿರೋಧವಿದೆ ಎಂದು ತಿಕ್ಕಾರೆಡ್ಡಿ ಹರಿಹಾಯ್ದಿದ್ದಾರೆ.

ವಿಶಾಖಪಟ್ಟಣಂ ಅನ್ನು ರಾಜಧಾನಿ ಮಾಡುವುದಾದರೆ, ನಮ್ಮನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಿ ಬಿಡಿ ಎಂದು ತಿಕ್ಕಾರೆಡ್ಡಿಒತ್ತಾಯಿಸಿದ್ದಾರೆ. ನಮಗೆ ವಿಶಾಖಪಟ್ಟಣಂಗಿಂತ ಬೆಂಗಳೂರೇ ಹತ್ತಿರ ಎಂದು ಅವರು ಹೇಳಿದ್ದಾರೆ. 

'ಆಂಧ್ರಪ್ರದೇಶದ ಸಹವಾಸವೇ ಬೇಡ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ'

ಅಲ್ಲದೇ ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಸಹ ನೆಲೆಸಿದ್ದು, ಇಡೀ ಮಂತ್ರಾಲಯ ಕ್ಷೇತ್ರವನ್ನು ಕರ್ನಾಟಕಕ್ಕೆ ಸೇರಿಸಿದರೆ ಒಳಿತು ಎಂದು ತಿಕ್ಕಾರೆಡ್ಡಿ ಆಗ್ರಹಿಸಿದ್ದಾರೆ.