ಸರ್ಕಾರಿ ಒಡೆತನದಲ್ಲಿದ್ದಾಗ ಏರ್ ಇಂಡಿಯಾ ಪ್ರತಿ ವರ್ಷ ನಷ್ಟದಲ್ಲೇ ಸಾಗುತ್ತಿತ್ತು. ಅತೀವ ನಷ್ಟದಲ್ಲಿದ್ದ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ಮರಳಿ ಪಡೆದಿತ್ತು. ಬಳಿಕ ಮಹತ್ತರ ಬದಲಾವಣೆಯೊಂದಿಗೆ ಸೇವೆ ಆರಂಭಿಸಿತ್ತು. ಇದರ ಪರಿಣಾಮ ಈ ವರ್ಷ ಏರ್ ಇಂಡಿಯಾ ಆದಾಯದಲ್ಲಿ ಶೇಕಡಾ 11ರಷ್ಟು ಏರಿಕೆಯಾಗಿದೆ.
ನವದೆಹಲಿ(ಜೂ.08) ಸರ್ಕಾರಿ ಸ್ವಾಮ್ಯದಲ್ಲಿದ್ದ ಏರ್ ಇಂಡಿಯಾ ನಷ್ಟ ತಾಳಲಾರದೆ ಕೊನೆಗೆ ಟಾಟಾ ಸಮೂಹಕ್ಕೆ ಮಾರಾಟ ಮಾಡಿತ್ತು. ಅತೀವ ನಷ್ಟದಲ್ಲಿದ್ದರೂ ತಾನು ಆರಂಭಿಸಿದ ವಿಮಾನ ಸೇವೆ ಅನ್ನೋ ಕಾರಣಕ್ಕೆ ಟಾಟಾ ಸಮೂಹ ಏರ್ ಇಂಡಿಯಾ ಖರೀದಿಸಿತ್ತು. ಮಹತ್ತರ ಬದಲಾವಣೆಯೊಂದಿಗೆ ಏರ್ ಇಂಡಿಯಾ ಸೇವೆ ಮುಂದುವರಿಸಿತ್ತು. ಹಲವು ದೂರು ದುಮ್ಮಾನಗಳ ನಡುವೆಯೂ ಏರ್ ಇಂಡಿಯಾ ಉತ್ತಮ ಸೇವೆ ನೀಡಲು ಪ್ರಯತ್ನಿಸಿತ್ತು. ಇದೀಗ 2025ರ ಆರ್ಥಿಕ ವರ್ಷದಲ್ಲಿ ಏರ್ ಇಂಡಿಯಾ ಆದಾಯದಲ್ಲಿ ಶೇಕಡಾ 11ರಷ್ಟು ಹೆಚ್ಚಳವಾಗಿದೆ.ಸರಿಸುಮಾರು 7 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಆದಾಯವನ್ನು ಏರ್ ಇಂಡಿಯಾಗಳಿಸಿದೆ.
ಈ ವರ್ಷ 4.4 ಕೋಟಿ ಮಂದಿ ಪ್ರಯಾಣ
2025ರ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 44 ಮಿಲಿಯನ್ ಪ್ರಯಾಣಿಕರು ಏರ್ ಇಂಡಿಯಾದಲ್ಲಿ ಪ್ರಯಾಣಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆಯಲ್ಲಿ ಶೇಕಡಾ 9.9 ರಷ್ಟು ಏರಿಕೆಯಾಗಿದೆ. ಟಾಟಾ ಮಾಲೀಕತ್ವದ ಏರ್ ಇಂಡಿಯಾ ಮಹತ್ತರ ಬದಲಾವಣೆ ಮಾಡಿಕೊಂಡು ವಿಮಾನ ಸೇವೆ ನೀಡುತ್ತಿದೆ. ಕಾರ್ಯನಿರ್ವಹಣೆಯಲ್ಲಿ ಬದಲಾವಣೆ, ಅನತ್ಯ ಖರ್ಚು ವೆಚ್ಚಕ್ಕೆ ಕಡಿವಾಣ, ವಿಸ್ತಾರ ವಿಮಾನಯಾನ ಜೊತೆ ವಿಲೀನ ಸೇರಿದಂತೆ ಹಲವು ಬದಲಾವಣೆಯನ್ನು ಟಾಟಾ ಮಾಲೀಕತ್ವ ಮಾಡಿದೆ. ಇದರ ಪರಿಣಾಮ ಆದಾಯದಲ್ಲಲಿ ಏರಿಕೆಯಾಗುತ್ತಿದೆ.
ಕಠಿಣ ಪರಿಶ್ರಮದ ಫಲ
ಟಾಟಾ ಏರ್ ಇಂಡಿಯಾ ಬೆಳವಣಿಗೆ ಹಾಗೂ ಆದಾಯ ಹೆಚ್ಚಳ ಕುರಿತು ಏರ್ ಇಂಡಿಯಾ ಸಿಇಒ ಕ್ಯಾಂಬೆಲ್ ವಿಲ್ಸನ್ ಸಂತಸ ವ್ಯಕ್ತಪಡಿಸಿದ್ದಾರೆ. 2022ರಲ್ಲಿ ಸರ್ಕಾರದಿಂದ ಏರ್ ಇಂಡಿಯಾ ವಿಮಾನ ಸಂಸ್ಥೆಯನ್ನು ಟಾಟಾ ಖರೀದಿಸಿತ್ತು. ಬಳಿಕ ಹಲವು ಬದಲಾವಣೆ ಮಾಡಿಕೊಂಡು ಪ್ರಯಾಣಿಕರಿಗೆ ಸೇವೆ ನೀಡಲಾಗಿದೆ. ಇದೀಗ ಹಂತ ಹಂತವಾಗಿ ಏರ್ ಇಂಡಿಯಾ ಬೆಳೆಯುತ್ತಿದೆ. ಸ್ಥಿರವಾಗಿ ಟಾಟಾ ಏರ್ ಇಂಡಿಯಾ ಲಾಭಗಳಿಸುವತ್ತ ಸಾಗುತ್ತಿದೆ. ಈ ವರ್ಷ ಶೇಕಡಾ 11ರಷ್ಟು ಆದಾಯ ಹೆಚ್ಚಳ ಕಳೆದ ಕೆಲ ವರ್ಷಗಳ ಕಠಿಣ ಪರಿಶ್ರಮದ ಫಲವಾಗಿದೆ ಎಂದು ವಿಲ್ಸನ್ ಹೇಳಿದ್ದಾರೆ.
ಟಾಟಾ ಆರಂಭಿಸಿದ್ದ ಏರ್ ಇಂಡಿಯಾ
ಏರ್ ಇಂಡಿಯಾ ಆರಂಭ ಮಾಡಿದ್ದು ಜೆಮ್‌ಶೆಡ್‌ಜಿ ಟಾಟಾ. 1932ರಲ್ಲಿ ಜೆಮ್‌ಶೆಡ್‌ಜಿ ಟಾಟಾ ಟಾಟಾ ಏರ್‌ಲೈನ್ಸ್ ಆರಂಭಿಸಿದ್ದರು. ನಾಗರೀಕ ವಿಮಾನ ಸೇವೆ ನೀಡಲು ಮಹತ್ತರ ಹಾಗೂ ಭಾರತೀಯ ಇತಿಹಾಸದಲ್ಲಿ ಅತ್ಯಂತ ಕ್ರಾಂತಿಕಾರಕ ನಿರ್ಧಾರ ತೆಗೆದುಕೊಂಡಿದ್ದರು. 1946ರಲ್ಲಿ ಜೆಮ್‌ಶೆಡ್‌ಜಿ ಟಾಟಾ ಈ ವಿಮಾನ ಸೇವೆಗೆ ಏರ್ ಇಂಡಿಯಾ ಎಂದು ಹೆಸರಿಟ್ಟಿದ್ದರು. ಸ್ವಾತಂತ್ರ್ಯ ಬಳಿಕ ಸರ್ಕಾರ ಹೊಸ ವಿಮಾನ ಸೇವೆ ಆರಂಭಿಸುವ ಬದಲು ವಿಮಾನ ಸೇವೆಯನ್ನು ಸರ್ಕಾರ ಮಾತ್ರ ನಡೆಸಬೇಕು ಎದು ಏರ್ ಇಂಡಿಯಾ ವಿಮಾನವನ್ನು ತನ್ನ ತಕ್ಕೆಗೆ ತೆಗೆದುಕೊಂಡಿತು. ಅಂದಿನ ಪ್ರಧಾನಿ ಜವಾಹರ್‌ಲಾಲ್ ನೆಹರೂ 1953ರಲ್ಲಿ ಏರ್ ಇಂಡಿಯಾವನ್ನು ಸರ್ಕಾರದ ತೆಕ್ಕೆಗೆ ತೆಗೆದುಕೊಂಡಿತ್ತು.
ಆರಂಭದಲ್ಲಿ ಲಾಭದಲ್ಲಿದ್ದ ಏರ್ ಇಂಡಿಯಾ ವಿಮಾನ ಬಳಿಕ ವರ್ಷದಿಂದ ವರ್ಷಕ್ಕೆ ನಷ್ಟದಲ್ಲೇ ಓಡುತ್ತಿತ್ತು. ಪ್ರತಿ ವರ್ಷ ಸರ್ಕಾರ ಏರ್ ಇಂಡಿಯಾಗೆ ಮರು ಜೀವ ನೀಡಲು ಒಂದಿಷ್ಟು ಹಣವನ್ನು ಬಜೆಟ್‌ನಲ್ಲಿ ಎತ್ತಿಡಬೇಕಾದ ಪರಿಸ್ಥಿತಿ ಬಂದಿತ್ತು. ನಷ್ಟ, ಸಾಲ ತಾಳಲಾರದೆ ಏರ್ ಇಂಡಿಯಾವನ್ನು ಮಾರಾಟ ಮಾಡಲು ಮುಂದಾಗಿತ್ತು. ಟಾಟಾ ಆರಂಭಿಸಿದ್ದ ಏರ್ ಇಂಡಿಯಾವನ್ನು ಮತ್ತೆ ಟಾಟಾ ಸಮೂಹ ಖರೀದಿ ಮಾಡಿತು. ಇದೀಗ ಏರ್ ಇಂಡಿಯಾ ನಷ್ಟದಿಂದ ಲಾಭದತ್ತ ಸಾಗುತ್ತಿದೆ.
