ಪುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು ತಿರುಚ್ಚಿಗೆ ತೆರಳಿದ್ದ ನಾಲ್ವರು ಬಾಲಕಿಯರು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ತಮಿಳುನಾಡಿನ ಕರೂರು ಜಿಲ್ಲೆಯ ಮಾಯನೂರು ಬ್ಯಾರೇಜ್ ಬಳಿ ನಡೆದಿದೆ.

ಕರೂರ್: ಪುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು ತಿರುಚ್ಚಿಗೆ ತೆರಳಿದ್ದ ನಾಲ್ವರು ಬಾಲಕಿಯರು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ತಮಿಳುನಾಡಿನ ಕರೂರು ಜಿಲ್ಲೆಯ ಮಾಯನೂರು ಬ್ಯಾರೇಜ್ ಬಳಿ ನಡೆದಿದೆ. ತಮಿಳುನಾಡಿದ ಪುದುಕೊಟ್ಟೈನ ವಿರಾಲಿಮಲೈ ಸರ್ಕಾರಿ ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಬುಧವಾರ ಪುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು ತಿರುಚ್ಚಿಗೆ ಹೊರಟಿದ್ದರು. 

ಮೂಲಗಳ ಪ್ರಕಾರ, ಪಿಲಿಪಟ್ಟಿ ಗ್ರಾಮದಲ್ಲಿ ಇರುವ ಈ ಶಾಲೆಯ ಶಿಕ್ಷಕರಾದ ಜಯ ಸಕಪಿಯುನ್ (Jaya Sakapiyun) ಮತ್ತು ತಿಲಕಾವತಿ (Thilakavathi) ಅವರು ತಿರುಚ್ಚಿ(Tiruchy) ಜಿಲ್ಲೆಯ ಎಜೂರ್ಪಟ್ಟಿಯಲ್ಲಿರುವ (Ezhurpatti) ಕೊಂಗುನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು 6, 7 ಹಾಗೂ 8ನೇ ತರಗತಿಯ 15 ವಿದ್ಯಾರ್ಥಿಗಳನ್ನು ವ್ಯಾನ್‌ ಮಾಡಿಕೊಂಡು ಕರೆದುಕೊಂಡು ಹೋಗಿದ್ದರು. ದಾರಿ ಮಧ್ಯೆ ಕಾವೇರಿ ನದಿ ಬ್ಯಾರೇಜ್ ಸಿಕ್ಕಿದ್ದರಿಂದ ಇವರು ಬೆಳಗ್ಗೆ 10 ಗಂಟೆಗೆ ನದಿಯಲ್ಲಿ ಸ್ನಾನ ಮಾಡಲು ನಿರ್ಧರಿಸಿ ಎಲ್ಲರೂ ನೀರಿಗಿಳಿದಾಗ ಈ ದುರಂತ ಸಂಭವಿಸಿದೆ. 

Uttara Kannada: ಈಜಲು ಹೋಗಿದ್ದ ಟಿಬೇಟಿಯನ್‌ ವಿದ್ಯಾರ್ಥಿಗಳು ನೀರುಪಾಲು

ಶಿಕ್ಷಕರು ಮತ್ತು ಎಲ್ಲಾ 15 ಹುಡುಗಿಯರು ನೀರಿನಲ್ಲಿ ಸಾಗಿ ನದಿಯ ಮಧ್ಯಭಾಗವನ್ನು ತಲುಪಿದ್ದಾರೆ. ಈ ವೇಳೆ ಇದ್ದಕ್ಕಿದಂತೆಯೇ ಮಕ್ಕಳು ನೀರಿನಲ್ಲಿ ಮುಳುಗಲಾರಂಭಿಸಿದ್ದಾರೆ. ಕೂಡಲೇ ಜೊತೆಗಿದ್ದ ಮಕ್ಕಳು ಕಿರುಚಿಕೊಂಡಿದ್ದನ್ನು ಕೇಳಿ ಆ ಸ್ಥಳಕ್ಕೆ ಓಡಿ ಬಂದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. 
ಸ್ಥಳಕ್ಕೆ ಆಗಮಿಸಿದ ತಿರುಚ್ಚಿ ಜಿಲ್ಲೆಯ ಕರೂರ್ ಮತ್ತು ಮುಸಿರಿಯಿ ಅಗ್ನಿಶಾಮಕ ದಳದ ಸಿಬ್ಬಂದಿ ಮುಳುಗಿದ ಮಕ್ಕಳಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಅಲ್ಲದೇ ಕೆಲವು ಸ್ಥಳೀಯ ಈಜುಗಾರರು ಕೂಡ ಶೋಧ ನಡೆಸಿದರು. 

ಕೆಲವು ಗಂಟೆಗಳ ನಂತರ, ನಾಲ್ವರ ಮಕ್ಕಳ ಮೃತ ದೇಹಗಳನ್ನು ನದಿಯಿಂದ ಹೊರತೆಗೆಯಲಾಯಿತು ಎಂದು ಮೂಲಗಳು ತಿಳಿಸಿವೆ. 8 ನೇ ತರಗತಿಯ ತಮಿಳರಸಿ (Tamilarasi), 7 ನೇ ತರಗತಿಯ ಸೋಫಿಯಾ (Sophia) ಮತ್ತು 6 ನೇ ತರಗತಿಯ ಇಲಕ್ಕಿ (Ilakkiya) ಮತ್ತು ಲಾವಣ್ಯ (Lavanya) ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ವಿದ್ಯಾರ್ಥಿನಿಯರು. 

ಘಟನಾ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದ ಕರೂರ್ ಜಿಲ್ಲಾಧಿಕಾರಿ ಡಾ.ಟಿ.ಪ್ರಭುಶಂಕರ್ (Dr T Prabhushankar) ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸುಂದರವತನಂ (Sundaravathanam) ಮಾತನಾಡಿ, ನದಿ ಆಳವಿದ್ದು, ದೂರ ಹೋಗದಂತೆ ಜನರಿಗೆ ಸೂಚಿಸುವ ಪಿಡಬ್ಲ್ಯುಡಿ ಎಚ್ಚರಿಕೆ ನಾಮಫಲಕವನ್ನು ನಿರ್ಲಕ್ಷಿಸಿ ವಿದ್ಯಾರ್ಥಿಗಳು ನದಿ ನೀರಿಗೆ ಇಳಿದಿದ್ದಾರೆ. 15 ಜನರಲ್ಲಿ 11 ಜನ ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದ್ದು, ಅವರು ಸುರಕ್ಷಿತರಾಗಿದ್ದಾರೆ. 

Hassan: ಆಣೆ-ಪ್ರಮಾಣ ಮಾಡಲು ಹೋದ ಇಬ್ಬರು ಸ್ನೇಹಿತರು ನೀರುಪಾಲು

ಜಿಲ್ಲಾಡಳಿತವು ಅವರನ್ನು ಸುರಕ್ಷಿತವಾಗಿ ಅವರ ಮನೆಗೆ ಕಳುಹಿಸಲು ಕ್ರಮ ಕೈಗೊಂಡಿದೆ. ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕರೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತ ವಿದ್ಯಾರ್ಥಿಗಳ ದೇಹಗಳನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin) ಅವರು ಸಂತ್ರಸ್ತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯ ಪೋತುಮಣಿ (Potumani) ಹಾಗೂ ಬಾಲಕಿಯರ ಜೊತೆಗಿದ್ದ ಇಬ್ಬರು ಶಿಕ್ಷಕರನ್ನು ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ. ಈ ಮಧ್ಯೆ ಬಾಲಕಿಯರ ಪೋಷಕರು ಮತ್ತು ಸಂಬಂಧಿಕರು ಶವಗಳನ್ನು ಸ್ವೀಕರಿಸಲು ನಿರಾಕರಿಸಿ ಪುದುಕ್ಕೊಟ್ಟೈನಲ್ಲಿ (Pudukkottai)ಪ್ರತಿಭಟನೆ ನಡೆಸಿದರು. ಮಕ್ಕಳ ಶವಪರೀಕ್ಷೆ ನಡೆಸುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಯಾರೂ ನಮ್ಮ ಅನುಮತಿಯನ್ನು ಕೇಳಿಲ್ಲ ಎಂದು ಅವರು ದೂರಿದ್ದಾರೆ. ಮಾಯನೂರು ಪೊಲೀಸರು (Mayanur police) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.