ಚೆನ್ನೈ(ಆ.10): ಸೋಶಿಯಲ್ ಮೀಡಿಯಾದಲ್ಲಿ ಮೂರು ಗಟ್ಟಿಗಿತ್ತಿಯರಾದ ಸೆಂಥಮೀಜ್ ಸೆಲ್ವಿ(38), ಮುಥಮಲ್(34) ಹಾಗೂ ಅನಂತವಲ್ಲೀ(34) ಭಾರೀ ಸೌಂಡ್ ಮಾಡುತ್ತಿದ್ದಾರೆ. ಇವರ ಸಾಹಸಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ. ತಮಿಳುನಾಡಿನ ಕೊಟ್ಟಾರೈ ಅಣೆಕಟ್ಟಿನ ಬಳಿ ನಾಲ್ವರು ಯುವಕರು ಮುಳುಗುತ್ತಿರುವುದನ್ನು ಕಂಡ ಈ ಮಹಿಳೆಯರು ತಾವು ಧರಿಸಿದ್ದ ಸೀರೆಯನ್ನೇ ಬಿಚ್ಚಿ ಇಬ್ಬರು ಯುವಕರನ್ನು ಕಾಪಾಡಿದ್ದಾರೆ.

ನರಗುಂದ: ಬೆಣ್ಣಿಹಳ್ಳದ ಪ್ರವಾಹಕ್ಕೆ ಕೊಚ್ಚಿ ಹೋದ ಮುಂಗಾರು ಬೆಳೆ, ಸಂಕಷ್ಟದಲ್ಲಿ ರೈತರು

ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯನ್ವಯ ಈ ಘಟನೆ ಆಗಸ್ಟ್ 6 ರಂದು ನಡೆದಿದೆ. ಇಲ್ಲಿನ ಸಿರುವಚ್ಚೂರ್ ಹಳ್ಳಿಯ 12 ಯುವಕರು ಕೊಟ್ಟಾರೈ ಹಳ್ಳಿಗೆ ಕ್ರಿಕೆಟ್ ಆಡಲು ತೆರಳಿದ್ದರು. ಆಟ ಮುಗಿದ ಬಳಿಕ ಎಲ್ಲರೂ ಅಣೆಕಟ್ಟಿಗೆ ಸ್ನಾನ ಮಾಡಲು ತೆರಳಿದ್ದರು. ಆದರೆ ಕಳೆದ ವಾರ ಸುರಿದ ಭಾರೀ ಮಳೆಯಿಂದ ಅಣೆಕಟ್ಟಿನ ನೀರು 15 ರಿಂದ 20 ಅಡಿಗೇರಿತ್ತು. ಇನ್ನು ಇಲ್ಲಿ 108 ಕೋಟಿ ಮೊತ್ತದ ಮರುದೈಯಾರು ನದಿಗೆ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ ಎಂಬುವುದು ಉಲ್ಲೇಖನೀಯ.

ಎಚ್ಚರಿಕೆ ಕೊಟ್ಟಿದ್ದರೂ ಸ್ನಾನಕ್ಕಿಳಿದ ಯುವಕರು

ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಸೆಂಥಮೀಜ್ ಸೆಲ್ವಿ ಯುವಕರು ಅಲ್ಲಿ ತಲುಪಿದಾಗ ನಾವು ಮನೆಗೆ ತೆರಳುತ್ತಿದ್ದೆವು. ಅವರು ಅಣೆಕಟ್ಟಿನ ಸುತ್ತಲೂ ಕಣ್ಣು ಹಾಯಿಸಿದರು ಬಳಿಕ ನಮ್ಮ ಬಳಿ ಅಲ್ಲಿ ಸ್ನಾನ ಮಾಡಬಹುದೇ ಎಂದು ಕೆಳಿದರು. ಆದರೆ ನೀರು ಬಹಳ ಆಳವಾಗಿದೆ ಎಂದು ನಾವು ಎಚ್ಚರಿಸಿದೆವು. ಆದರೆ ಅಷ್ಟರಲ್ಲೇ ನಾಲ್ವರು ಕಾಲು ಜಾರಿ ನೀರಿನೊಳಗೆ ಬಿದ್ದರು. ಹೀಗಿರುವಾಗ ಏನು ಮಾಡಬೇಕೆಂದು ತಿಳಿಯಲಿಲ್ಲ. ಕೂಡಲೇ ಸೀರೆ ಬಿಚ್ಚಿ ನೀರಿಗೆಸೆದೆವು. ಇದರಿಂದ ಇಬ್ಬರು ಯುವಕರನ್ನು ಕಾಪಾಡುವಲ್ಲಿ ಯಶಸ್ವಿಯಾದೆವು. ಆದರೆ ದುರಾದೃಷ್ಟವಶಾತ್ ಇನ್ನಿಬ್ಬರನ್ನು ಕಾಪಾಡಲು ಆಗಲಿಲ್ಲ. ಅವರು ಅಲ್ಲೇ ಇದ್ದರು ಆದರೆ ಸೀರೆ ಅವರಿಗೆ ಸಿಗಲಿಲ್ಲ ಎಂದಿದ್ದಾರೆ.

ಪ್ರವಾಹ, ಭೂಕುಸಿತಕ್ಕೆ ಪ್ರಸಕ್ತ ಋುತುವಿನಲ್ಲಿ 900ಕ್ಕೂ ಹೆಚ್ಚು ಸಾವು

ಇನ್ನು ಈ ಮಹಿಳೆಯರು ಕಾಪಾಡಿದ ಯುವಕರನ್ನು ಕಾರ್ತಿಕ್ ಹಾಗೂ ಸೆಂಥಿಲ್‌ವೇಲನ್ ಎಂದು ಗುರುತಿಸಲಾಗಿದೆ. ಇನ್ನು ಮೃತರಲ್ಲಿ ಒಬ್ಬಾತ 17 ವರ್ಷದ ಪವಿತ್ರನ್ ಹಾಗೂ ಮತ್ತೊಬ್ಬಾತ 25 ವರ್ಷದ ಟ್ರೇನಿ ಡಾಕ್ಟರ್ ರಂಜೀತ್ ಎಂದು ಗುರುತಿಸಲಾಗಿದೆ. ಈ ಮಾಹಿತಿ ಸಿಕ್ಕ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.