ತಮಿಳ್ನಾಡಲ್ಲಿ ಒಂದೇ ದಿನ ಭಾರೀ ಮಳೆ : 14 ಜನ ಬಲಿ, ಮನೆಗಳು ನಾಶ
- ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನಾದ್ಯಂತ ಕಳೆದ 5 ದಿನಗಳಿಂದ ಸುರಿಯುತ್ತಿರುವ ಮಳೆ
- 5 ದಿನಗಳಿಂದ ಸುರಿಯುತ್ತಿರುವ ಮಳೆ ಗುರುವಾರ ಮತ್ತಷ್ಟುತೀವ್ರಗೊಂಡಿದ್ದು, ಜನಜೀವನವನ್ನು ಅಸ್ತವ್ಯಸ್ತ
ಚೆನ್ನೈ (ನ.12): ಅರಬ್ಬಿ ಸಮುದ್ರದಲ್ಲಿ ( Arebian Sea) ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನಾದ್ಯಂತ (Tamilnadu) ಕಳೆದ 5 ದಿನಗಳಿಂದ ಸುರಿಯುತ್ತಿರುವ ಮಳೆ ಗುರುವಾರ ಮತ್ತಷ್ಟು ತೀವ್ರಗೊಂಡಿದ್ದು, ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
"
ವಾಯುಭಾರ ಕುಸಿತವು ಗುರುವಾರ ಸಂಜೆ ವೇಳೆಗೆ ಚೆನ್ನೈ (Chennai) ಹೊರವಲಯವನ್ನು ಹಾದುಹೋಗಿದ್ದು, ಚೆನ್ನೈ ಸೇರಿದಂತೆ ರಾಜ್ಯದಾದ್ಯಂತ ಭಾರೀ ಮಳೆ ಸುರಿಸಿದೆ. ಕಳೆದ 24 ಗಂಟೆಯ ಅವಧಿಯಲ್ಲಿ ಚೆಂಗಲ್ ಪೇಟ್ ಜಿಲ್ಲೆಯ ತಮ್ ಬರಂನಲ್ಲಿ 23.29 ಸೆ.ಮೀ,, ಚೋಲಾವರಂನಲ್ಲಿ 22 ಸೆ.ಮೀ., ಎನ್ನೋರ್‌ನಲ್ಲಿ 20.5 ಸೆ.ಮೀ. ಮತ್ತು ಚೆನ್ನೈನಲ್ಲಿ 15.8 ಸೆ.ಮೀ.ನಷ್ಟು ಮಳೆ ಸುರಿದಿದೆ.
ಪ್ರಜ್ಜೆ ತಪ್ಪಿದ್ದ ವ್ಯಕ್ತಿಯನ್ನು ಹೊತ್ತೊಯ್ದು ರಕ್ಷಿಸಿದ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್
"
ಭಾರೀ ಮಳೆಯಿಂದಾಗಿ ಚೆನ್ನೈ ನಗರವೊಂದರಲ್ಲೇ 500ಕ್ಕೂ ಹೆಚ್ಚು ಬೀದಿಗಳು ಸಂಪೂರ್ಣ ಜಲಾವೃತವಾಗಿದ್ದು, ಸಂಚಾರ ಮತ್ತು ಜನಜೀವನ ಪೂರ್ಣ ಅಸ್ತವ್ಯಸ್ತಗೊಳಿಸಿದೆ. ಇದೇ ಪರಿಸ್ಥಿತಿ ರಾಜ್ಯದ ಹಲವು ಜಿಲ್ಲೆಗಳಲ್ಲೂ ಕಾಣಿಸಿಕೊಂಡಿದ್ದು, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (MK stalin) ಎಲ್ಲಾ ಬೆಳವಣಿಗೆಗಳ ಮೇಲೆ ನೇರ ನಿಗಾ ವಹಿಸಿದ್ದಾರೆ. ಮಳೆ ಮತ್ತು ಪ್ರವಾಹ (Flood) ಪೀಡಿತ ಪ್ರದೇಶಗಳ ಜನರ ರಕ್ಷಣೆಗೆ ಮತ್ತು ಪುನಾವಸತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ಟಾಲಿನ್ ಸೂಚಿಸಿದ್ದಾರೆ. ಅಲ್ಲದೆ ಬೆಳೆ ನಷ್ಟಅಂದಾಜಿಸಲು ಸಹಕಾರ ಸಚಿವರ ನೇತೃತ್ವದಲ್ಲಿ 6 ಸಚಿವರ ಸಮಿತಿಯೊಂದನ್ನು ರಚಿಸಿದ್ದಾರೆ.
ಮೃತರ ಸಂಖ್ಯೆ 14ಕ್ಕೆ ಏರಿಕೆ:
ಕಳೆದ 5 ದಿನಗಳಿಂದ ರಾಜ್ಯದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಬಲಿಯಾದವರ ಸಂಖ್ಯೆ 14ಕ್ಕೆ ತಲುಪಿದೆ. ಜೊತೆಗೆ 1000ಕ್ಕೂ ಹೆಚ್ಚು ಮನೆ ಮತ್ತು ಗುಡಿಸಲು ಹಾನಿಗೊಳಗಾಗಿದೆ. ಸಾವಿರಾರು ಮರಗಳು ಬುಡಮೇಲಾಗಿದ್ದು, ಹಲವೆಡೆ ರಸ್ತೆ, ಸೇತುವೆಗಳು ಭಾರೀ ಮಳೆ ಮತ್ತು ಪ್ರವಾಹಕ್ಕೆ ಕೊಚ್ಚಿಹೋಗಿವೆ. ಜೊತೆಗೆ ಲಕ್ಷಾಂತರ ಎಕರೆಯಲ್ಲಿ ಬೆಳೆದಿದ್ದ ಭತ್ತ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ಮುಳುಗಿದ್ದು, ಭಾರೀ ನಷ್ಟದ ಭೀತಿ ಹುಟ್ಟುಹಾಕಿದೆ.
ವಿಮಾನ ಸಂಚಾರ ವ್ಯತ್ಯಯ:
ರಾಜಧಾನಿ ಚೆನ್ನೈನಲ್ಲಿ ಗುರುವಾರ ಬೆಳಗ್ಗೆಯಿಂದಲೇ ಭಾರೀ ಗಾಳಿ ಬೀಸುತ್ತಿದ್ದು, ಪ್ರತಿಕೂಲ ವಾತಾವರಣ ಇದ್ದ ಕಾರಣ, ಹೊರಗಿನಿಂದ ಚೆನ್ನೆಗೆ ಬರುವ ಎಲ್ಲಾ ವಿಮಾನಗಳ ಸಂಚಾರವನ್ನು (Flight Service) ಸಂಜೆ 6 ಗಂಟೆಯವರೆಗೂ ನಿಷೇಧಿಸಲಾಗಿತ್ತು. ಕೇವಲ ಇಲ್ಲಿಂದ ಹೊರಡುವ ವಿಮಾನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ಈ ನಡುವೆ ಚೆನ್ನೈ ಸೇರಿದಂತೆ 8 ಜಿಲ್ಲೆಗಳಿಗೆ ನೀಡಲಾಗಿದ್ದ ರೆಡ್ ಅಲರ್ಟ್ (Red alert) ಅನ್ನು ಹವಾಮಾನ ಇಲಾಖೆ ಹಿಂದಕ್ಕೆ ಪಡೆದಿದೆ. ಆದರೆ ಈ ಜಿಲ್ಲೆಗಳಲ್ಲಿ ಭಾರೀ ಬಿರುಗಾಳಿ ಸಹಿತ ಮಳೆಯ ಮುನ್ನೆಚ್ಚರಿಕೆಯನ್ನು ಮುಂದುವರೆಸಲಾಗಿದೆ.
ಆಂಧ್ರದಲ್ಲೂ ಭಾರೀ ಮಳೆ:
ವಾಯುಭಾರ ಕುಸಿತದ ಪರಿಣಾಮ ಆಂಧ್ರಪ್ರದೇಶದ ಹಲವು ಜಿಲ್ಲೆಗಳಲ್ಲೂ ಗುರುವಾರ ಬೆಳಗ್ಗೆಯಿಂದಲೇ ಸಾಮಾನ್ಯದಿಂದ ಭಾರೀ ಮಳೆ ಸುರಿಯುತ್ತಿದೆ.
ಮಳೆಗೆ ಸಿಲುಕಿ ಚೆನ್ನೈನಲ್ಲಿ ಎಚ್ಚರ ತಪ್ಪಿ ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸ್ ಇನ್ಸ್‌ಪೆಕ್ಟರ್ ರಾಜೇಶ್ವರಿ ಎಂಬುವರು ಹೆಗಲ ಮೇಲೆ ಹೊತ್ತು ಆಟೋದಲ್ಲಿ ಆಸ್ಪತ್ರೆಗೆ ಕಳುಹಿಸಿದರು. ಈ ವಿಡಿಯೋ ಭಾರಿ ವೈರಲ್ ಆಗಿದೆ.
ಕರ್ನಾಟಕದಲ್ಲೂ 3 ದಿನ ಭಾರೀ ಮಳೆ?
ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪ್ರಭಾವದಿಂದ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇನ್ನೂ ಮೂರ್ನಾಲ್ಕು ದಿನ ಹೆಚ್ಚು ಮಳೆಯಾಗಲಿದೆ. ಮಳೆಯಿಂದಾಗಿ ಮೋಡ ಕವಿದ ಮತ್ತು ಚಳಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕೋಲಾರ, ತುಮಕೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.