ತಮಿಳುನಾಡು ಸರ್ಕಾರವು ನವಜಾತ ಶಿಶುಗಳಿಗೆ 1 ಗ್ರಾಂ ಚಿನ್ನದ ಉಂಗುರ ನೀಡುವ ಯೋಜನೆಯ ಷರತ್ತುಗಳನ್ನು ಸಡಿಲಿಸಿದೆ. ಮದುವೆಯಾಗಿ ಬೇರೆ ರಾಜ್ಯದಲ್ಲಿ ನೆಲೆಸಿರುವ ಮಹಿಳೆಯರು ತಮಿಳುನಾಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದರೆ ಈ ಲಾಭ ಪಡೆಯಬಹುದು. ಆದರೆ, ಮಗುವಿನ ಅಜ್ಜ-ಅಜ್ಜಿ ತಮಿಳುನಾಡಿನ ಶಾಶ್ವತ ನಿವಾಸಿಗಳಾಗಿರಬೇಕು ಎಂಬ ಹೊಸ ನಿಯಮ ವಿಧಿಸಲಾಗಿದೆ.
ಚೆನ್ನೈ: ತಮಿಳುನಾಡಿನಲ್ಲಿ ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರ ಜಾರಿಗೊಳಿಸಿದ್ದ ನವಜಾತ ಶಿಶುಗಳಿಗೆ 1 ಗ್ರಾಂ ಚಿನ್ನದುಂಗುರ ನೀಡುವ ‘ಸೋದರಮಾವನ ಚಿನ್ನದ ಉಂಗುರ ಯೋಜನೆ’ಯ ಕೆಲ ಷರತ್ತು ಸಡಿಲಿಸಲಾಗಿದೆ. ‘ತಾಯಿ ತಮಿಳುನಾಡಿನ ಶಾಶ್ವತ ನಿವಾಸಿಯಾಗಿರಬೇಕು’ ಎಂಬ ನಿಯಮ ಸಡಿಲಿಸಿದ್ದು, ಮದುವೆಯಾದ ಬಳಿಕ ಬೇರೆ ರಾಜ್ಯಕ್ಕೆ ಸ್ಥಳಾಂತರಗೊಂಡಿದ್ದರೂ ಯೋಜನೆಯ ಲಾಭ ಸಿಗಲಿದೆ. ಆದರೆ, ‘ಮಗುವಿನ ಅಜ್ಜ, ಅಜ್ಜಿ ತಮಿಳುನಾಡು ಶಾಶ್ವತ ನಿವಾಸಿಗಳಾಗಿರಬೇಕು‘ ಎನ್ನುವ ಷರತ್ತು ವಿಧಿಸಿದೆ.
ಅರ್ಥಾತ್, ತಮಿಳುನಾಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಮಗುವಿನ ತಾಯಿ ಮದುವೆ ಆಗಿ ಬೇರೆ ರಾಜ್ಯದಲ್ಲಿ ನೆಲೆಸಿದ್ದರೂ ಅವರು ಈ ಯೋಜನೆಗೆ ಅರ್ಹರು. ಆದರೆ ಅದಕ್ಕೆ ಮಗುವಿನ ತಾಯಿಯ ಪೋಷಕರು ತಮಿಳುನಾಡಿನ ಶಾಶ್ವತ ನಿವಾಸಿಗಳು ಎನ್ನುವುದಕ್ಕೆ ಅಗತ್ಯ ದಾಖಲೆಗಳನ್ನು ನೀಡಬೇಕು. ಈ ವರ್ಷದ ಜೂ. 22ರ ಬಳಿಕ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಮಕ್ಕಳು ಈ ಯೋಜನೆಗೆ ಅರ್ಹರು. ಸೆಪ್ಟೆಂಬರ್ 28 ರಂದು ಈ ಯೋಜನೆ ಅಧಿಕೃತವಾಗಿ ಚಾಲನೆಗೆ ತರಲಾಗಿತ್ತು.
ಆರಂಭಿಕ ಮಾರ್ಗಸೂಚಿಗಳ ಪ್ರಕಾರ, ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗುವ ಮಗುವಿನ ತಾಯಿಯು ತಮಿಳುನಾಡಿನ ಶಾಶ್ವತ ನಿವಾಸಿಯಾಗಿರುವುದು ಕಡ್ಡಾಯವಾಗಿತ್ತು. ಇದರಿಂದಾಗಿ ತಮಿಳುನಾಡಿನಲ್ಲೇ ಹುಟ್ಟಿ ಬೆಳೆದು, ಮದುವೆಯ ನಂತರ ನೆರೆ ರಾಜ್ಯಗಳಿಗೆ ವಲಸೆ ಹೋಗಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಇತ್ಯಾದಿ ಕಡೆಗಳಲ್ಲಿ ನೆಲೆಸಿದ ಹೆಣ್ಣುಮಕ್ಕಳು, ಹೆರಿಗೆಗಾಗಿ ತಾಯ್ನಾಡಿಗೆ ಬಂದಾಗ ಈ ಯೋಜನೆಯ ಲಾಭದಿಂದ ವಂಚಿತರಾಗುತ್ತಿದ್ದರು. ಈ ಕುರಿತು ವ್ಯಾಪಕ ಮನವಿಗಳು ಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ನಿಯಮ ತಿದ್ದುಪಡಿಗೆ ಮುಂದಾಗಿದೆ.
ಪರಿಷ್ಕೃತ ನಿಯಮಗಳಲ್ಲೇನಿದೆ?
ತಮಿಳುನಾಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಗಳ ಪ್ರಕಾರ, ಮದುವೆಯಾಗಿ ಹೊರರಾಜ್ಯದಲ್ಲಿ ನೆಲೆಸಿರುವ ಮಹಿಳೆ ತಮಿಳುನಾಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದರೂ ಸಹ, ಮಗುವಿಗೆ 1 ಗ್ರಾಂ ಉಚಿತ ಚಿನ್ನದ ಉಂಗುರ ದೊರೆಯಲಿದೆ.
ಅಜ್ಜಿ-ಅಜ್ಜಿಯಂದಿರ ದಾಖಲೆ ಕಡ್ಡಾಯ: ಮಗುವಿನ ತಾಯಿ ಹೊರರಾಜ್ಯದಲ್ಲಿದ್ದರೂ, ಮಗುವಿನ ತಾಯಿಯ ಕಡೆಯ ಅಜ್ಜಿ ಮತ್ತು ಅಜ್ಜ (ಮಗುವಿನ ಪೋಷಕರು) ತಮಿಳುನಾಡಿನ ಶಾಶ್ವತ ನಿವಾಸಿಗಳಾಗಿದ್ದರೆ ಈ ಯೋಜನೆಗೆ ಅರ್ಹತೆ ಸಿಗಲಿದೆ.
ದಾಖಲೆಗಳ ಸಲ್ಲಿಕೆ: ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಬಯಸುವ ಕುಟುಂಬಗಳು, ತಾಯಿಯ ಹೆತ್ತವರು (ಅಜ್ಜ-ಅಜ್ಜಿ) ತಮಿಳುನಾಡಿನ ಖಾಯಂ ನಿವಾಸಿಗಳು ಎಂಬುದನ್ನು ದೃಢೀಕರಿಸುವ ಮಾನ್ಯ ಆಧಾರ/ನಿವಾಸ ಪ್ರಮಾಣಪತ್ರಗಳನ್ನು ಆಸ್ಪತ್ರೆಗೆ ಹಾಜರುಪಡಿಸುವುದು ಕಡ್ಡಾಯವಾಗಿದೆ. ಸರ್ಕಾರದ ಈ ಜನಪರ ನಿರ್ಧಾರದಿಂದಾಗಿ ತಮಿಳುನಾಡು ಮೂಲದ ಸಾವಿರಾರು ಹೆಣ್ಣುಮಕ್ಕಳಿಗೆ ಹೆರಿಗೆ ಸಮಯದಲ್ಲಿ ನಿರಾಳತೆ ಸಿಕ್ಕಂತಾಗಿದೆ.


