ಚೆನ್ನೈ(ಜ.05): ತಮಿಳುನಾಡಿನ ಸಿನಿಮಾ ಮಂದಿರಗಳಲ್ಲಿ ಶೇ.100ರಷ್ಟುಸೀಟು ಭರ್ತಿಯೊಂದಿಗೆ ಚಿತ್ರಗಳನ್ನು ಪ್ರದರ್ಶಿಸಬಹುದು ಎಂದು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಇದರೊಂದಿಗೆ ಕೊರೋನಾ ಲಾಕ್‌ಡೌನ್‌ ಅಂತ್ಯದ ನಂತರ ಥಿಯೇಟರ್‌ಗಳ ಸಂಪೂರ್ಣ ಹೌಸ್‌ಫುಲ್‌ಗೆ ಅವಕಾಶ ನೀಡಿದ ದೇಶದ ಮೊದಲ ರಾಜ್ಯ ಎನ್ನಿಸಿಕೊಂಡಿದೆ.

ಕೊರೋನಾ ಸೋಂಕು ದೇಶದಲ್ಲಿ ವ್ಯಾಪಿಸಿದ ನಂತರ ಮಾಚ್‌ರ್‍ನಿಂದಲೇ ಥಿಯೇಟರ್‌ಗಳು ಬಂದ್‌ ಆಗಿದ್ದವು. ಆದರೆ ನ.10ರಂದು ಶೇ.50ರಷ್ಟುಸೀಟು ಭರ್ತಿಯೊಂದಿಗೆ ಚಿತ್ರಮಂದಿರಗಳ ಕಾರ್ಯಾರಂಭಕ್ಕೆ ತಮಿಳುನಾಡು ಸರ್ಕಾರ ಅವಕಾಶ ನೀಡಿತ್ತು.

ಕೇವಲ ಅರ್ಧ ಭರ್ತಿ ಆದ ಚಿತ್ರಮಂದಿರಗಳಿಂದ ಆದಾಯ ಅಷ್ಟಾಗಿ ಹರಿದುಬರುತ್ತಿರಲಿಲ್ಲ. ಈ ಕಾರಣಕ್ಕೇ ಬಿಗ್‌ ಬಜೆಟ್‌ ಚಿತ್ರಗಳು ಬಿಡುಗಡೆ ಆಗಿರಲಿಲ್ಲ. ಈ ನಡುವೆ ಜ.14ರ ಪೊಂಗಲ್‌ ಹಬ್ಬ ಸಮೀಪಿಸುತ್ತಿದ್ದು ಬಿಗ್‌ ಬಜೆಟ್‌ ಚಿತ್ರಗಳ ಬಿಡುಗಡೆಗೆ ಅನೇಕ ನಿರ್ಮಾಪಕರು ತವಕದಲ್ಲಿದ್ದಾರೆ. ಈ ನಿರ್ಮಾಪಕರು ಹಾಗೂ ನಟ ವಿಜಯ್‌ ಅವರು ಇತ್ತೀಚೆಗೆ ಶೇ.100 ಸೀಟು ಭರ್ತಿಗೆ ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರಿಗೆ ಕೋರಿದ್ದರು.

ಇದನ್ನು ಮನ್ನಿಸಿ ಸಂಪೂರ್ಣ ಸೀಟು ಭರ್ತಿಗೆ ಅನುಮತಿ ನೀಡಿರುವ ಸರ್ಕಾರ, ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಹಾಗೂ ಚಿತ್ರ ಪ್ರದರ್ಶನದ ವೇಳೆ ಕೊರೋನಾ ಜಾಗೃತಿ ಸಂದೇಶಗಳನ್ನು ಪ್ರದರ್ಶಿಸಬೇಕು ಎಂಬ ಷರತ್ತುಗಳನ್ನು ವಿಧಿಸಿದೆ.