Tamil Nadu government airport plan:: ಬೆಂಗಳೂರಿಗೆ ಸಮೀಪವಿರುವ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ತಮಿಳುನಾಡು ಸರ್ಕಾರ ಅಧಿಕೃತವಾಗಿ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದೆ. ತಾಂತ್ರಿಕ ವರದಿಯೊಂದಿಗೆ ಸರ್ಕಾರ ಹೊಸ ಪ್ರಸ್ತಾವನೆ  ಮುಂದಿಟ್ಟಿದೆ.

-ಚೆನ್ನೈ (ನ.16) : ಕರ್ನಾಟಕದ ರಾಜಧಾನಿ ಬೆಂಗಳೂರು ಹೊಂದಿಕೊಂಡಿರುವ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಏರ್ಪೋರ್ಟ್‌ಗೆ ಸೈಟ್‌ ಕ್ಲಿಯರೆನ್ಸ್‌ ಕೋರಿ ಅಧಿಕೃತವಾಗಿ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದೆ.

ಹೊಸ ವಿಮಾನ ನಿಲ್ದಾಣ ಎಲ್ಲಿ?

ಪ್ರಸ್ತಾವಿತ ಹೊಸೂರು ವಿಮಾನ ನಿಲ್ದಾಣವನ್ನು ಶೂಲಗಿರಿ ತಾಲೂಕಿನ ಬೆರಿಗಾಯಿ ಮತ್ತು ಬಾಗಲೂರು ನಡುವೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಏರ್ಪೋರ್ಟ್‌ ವಾರ್ಷಿಕ 30 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ರಕ್ಷಣಾ ಸಚಿವಾಲಯ ಆಕ್ಷೇಪ ಏಕೆ?

ಇದೇ ವೇಳೆ ತಮಿಳುನಾಡು ಸರ್ಕಾರವು ವಿಮಾನ ನಿಲ್ದಾಣ ಸ್ಥಾಪನೆಗೆ ಅಡ್ಡಿಯಾಗುತ್ತಿರುವ ವಾಯುಪ್ರದೇಶ ನಿರ್ಬಂಧಗಳನ್ನೂ ಸಡಿಲಿಸುವಂತೆ ರಕ್ಷಣಾ ಸಚಿವಾಲಯಕ್ಕೆ ಮನವಿ ಮಾಡಿದೆ. ಈ ಹಿಂದೆ ಜೂನ್‌ ತಿಂಗಳಲ್ಲಿ ಈ ಕುರಿತು ಸರ್ಕಾರ ಮನವಿ ಸಲ್ಲಿಸಿತ್ತಾಗಿದ್ದರೂ ಆಗ ರಕ್ಷಣಾ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿತ್ತು. ಎಚ್‌ಎಎಲ್‌, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹೊಸೂರಿನ ತನೇಜಾ ಏರೋಸ್ಪೇಸ್‌ ಆ್ಯಂಡ್‌ ಏವಿಯೇಷನ್‌ ಲಿ.(ತಾಲ್‌) ನಡುವೆ ವಾಯುಪ್ರದೇಶ ಅತಿಕ್ರಮಣದ ಆತಂಕ ವ್ಯಕ್ತಪಡಿಸಿತ್ತು.

ಇದೀಗ ಹೊಸೂರು ವಿಮಾನ ನಿಲ್ದಾಣವು ಇತರೆ ವಿಮಾನ ನಿಲ್ದಾಣಗಳ ಉಪಸ್ಥಿತಿ ನಡುವೆಯೂ ಹೇಗೆ ಸುರಕ್ಷಿತವಾಗಿ ಕಾರ್ಯಾಚರಣೆ ನಡೆಸಬಹುದು ಎಂಬ ಕುರಿತು ವಿಸ್ತೃತ ತಾಂತ್ರಿಕ ಮಾಹಿತಿಯನ್ನೊಳಗೊಂಡ ಪ್ರಸ್ತಾಪವನ್ನು ಸಚಿವಾಲಯಕ್ಕೆ ಸರ್ಕಾರ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳ ಪರಿಶೀಲನೆ ನಡೆಸಿ ಅನುಮೋದಿಸುವ ಕಾರ್ಯಕ್ಕೆ ಕನಿಷ್ಠ ಆರರಿಂದ ಎಂಟು ತಿಂಗಳು ತಗಲುವ ಸಾಧ್ಯತೆ ಇದೆ.