ವಿಮಾನ ಪ್ರಯಾಣಿಕರು ಇನ್ಮುಂದೆ ಈ ವಸ್ತು ಇಟ್ಟುಕೊಳ್ಳುವಂತಿಲ್ಲ, ಶೀಘ್ರದಲ್ಲೇ ಹೊಸ ರೂಲ್ಸ್ ಜಾರಿಯಾಗುತ್ತಿದೆ. DGCA ಈ ಕುರಿತು ಮಹತ್ವದ ಸಭೆ ನಡೆಸಿದೆ. ಇತ್ತೀಚೆಗೆ ನಡೆದ ಘಟನಯೇ ಈ ಬದಲಾವಣೆಗೆ ಕಾರಣ. ಅಷ್ಟಕ್ಕೂ ವಿಮಾನ ಪ್ರಯಾಣದ ವೇಳೆ ಬ್ಯಾನ್ ಮಾಡಲಿರುವ ವಸ್ತು ಯಾವುದು?

ನವದೆಹಲಿ (ಅ.23) ವಿಮಾನ ಪ್ರಯಾಣ, ರೈಲು ಪ್ರಯಾಣ, ಸಾರಿಗೆ ಬಸ್ ಹೀಗೆ ಪ್ರಯಾಣದ ವೇಳೆ ಕೆಲ ವಸ್ತುಗಳನ್ನು ನಿರ್ಬಂಧಿಸಲಾಗಿದೆ. ಇದೀಗ ಈ ಪಟ್ಟಿಗೆ ಮತ್ತೊಂದು ವಸ್ತು ಸೇರಿಕೊಳ್ಳುತ್ತಿದೆ. ಪ್ರಮುಖವಾಗಿ ವಿಮಾನ ಪ್ರಯಾಣದ ನಿಯಮದಲ್ಲಿ ಕೆಲ ಬದಲಾವಣೆ ಮಾಡಲು ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಶನ್ (DGCA) ಮುಂದಾಗಿದೆ. ಈ ಕುರಿತು ವಿಮಾನಯಾನ ಸಂಸ್ಥೆ, ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದೆ. ಹೌದು, ಇನ್ನುಮುಂದೆ ವಿಮಾನ ಪ್ರಯಾಣದಲ್ಲಿ ಪವರ್ ಬ್ಯಾಂಕ್ ಒಯ್ಯುವುದು ನಿಷೇಧಗೊಳ್ಳುವ ಸಾಧ್ಯತೆ ಇದೆ. ಈ ಕುರಿತು ಬಹುತೇಕ ವಿಮಾನಯಾನ ಸಂಸ್ಥೆಗಳು ಒತ್ತಾಯ ಮಾಡಿದೆ.

ಇಂಡಿಗೋ ವಿಮಾನದಲ್ಲಿ ನಡೆದ ಘಟನೆಯಿಂದ ಆಗ್ರಹ

ಕಳೆದ ವಾರ ದೆಹಲಿಯಲ್ಲಿ ಇಂಡಿಗೋ ವಿಮಾನದಲ್ಲಿ ನಡೆದ ಘಟನೆ ಈ ಚರ್ಚೆಗೆ ಕಾರಣವಾಗಿದೆ. ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರನ್ನು ಬೋರ್ಡಿಂಗ್ ಮಾಡಿ, ರನ್‌ವೇಯತ್ತ ಹೊರಟಿತ್ತು. ಈ ವೇಳೆ ಪ್ರಯಾಣಿಕನ ಪವರ್ ಬ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಏಕಾಏಕಿ ಪವರ್ ಬ್ಯಾಂಕ್ ಸಣ್ಣದಾಗಿ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ವಿಮಾನದ ಸಿಬ್ಬಂದಿಗಳು ಅಗ್ನಿಶಾಮಕ ಕಿಟ್ ಮೂಲಕ ಬೆಂಕಿ ನಂದಿಸಿದ್ದಾರೆ. ಅದೃಷ್ಛವಶಾತ್ ಈ ಘಟನೆಯಲ್ಲಿ ಯಾರಿಗೂ ಹಾನಿಯಾಗಲ್ಲ. ಆದರೆ ಪ್ರೊಟೋಕಾಲ್ ಪ್ರಕಾರ ವಿಮಾನ ಮತ್ತೆ ನಿಲ್ದಾಣಕ್ಕೆ ಮರಳಿತ್ತು. ತಾಂತ್ರಿಕ ಸಿಬ್ಬಂದಿಗಳು ಸೇರಿದಂತೆ ಅಧಿಕಾರಿಗಳ ತಂಡ ವಿಮಾನ ತಪಾಸಣೆ ನಡೆಸಿದ ಬಳಿಕ ಹಾರಾಟ ಮುಂದುವರಿಸಿತ್ತು. ಆದರೆ ಈ ಘಟನೆಯಿಂದ 40 ನಿಮಿಷಕ್ಕೂ ಹೆಚ್ಚು ಕಾಲ ಪ್ರಯಾಣ ವಿಳಂಬವಾಗಿತ್ತು.

ರಿವೀವ್ಯೂ ಮೀಟಿಂಗ್ ನಡೆಸಿದ DGCA

ಈ ಘಟನೆ ಬಳಿಕ DGCA ಮಹತ್ವದ ಸಭೆ ನಡೆಸಿತ್ತು. ವಿಮಾನಯಾನ ಸಂಸ್ಥೆ ಪ್ರಮುಖರು, ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರೆ. ಈ ವೇಳೆ ಹಲವು ಅಭಿಪ್ರಾಯಗಳು ವ್ಯಕ್ತವಾಗಿದೆ. ಹಲವರು ಪವರ್ ಬ್ಯಾಂಕ್ ಸಂಪೂರ್ಣವಾಗಿ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದ್ದರೆ. ಅಧಿಕಾರಿಗಳು ಸೇರಿದಂತೆ ಕೆಲ ವಿಮಾನಯಾನ ಸಂಸ್ಥೆ ಪ್ರಮುಖರು ನಿರ್ದಿಷ್ಟ ಪವರ್ ಕೆಪಾಸಿಟಿಗಿಂತ ಹೆಚ್ಚಿನ ಪವರ್ ಬ್ಯಾಂಕ್ ಬ್ಯಾನ್ ಮಾಡಬೇಕು. ಮೊಬೈಲ್ ಚಾರ್ಜ್ ಮಾಡುವಂತ ಸಣ್ಣ ಪವರ್ ಬ್ಯಾಂಕ್ ಅನುಮತಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಹೊಸ ಸುರಕ್ಷತಾ ನೀತಿಗೆ DGCA ತಯಾರಿ

ಪವರ್ ಬ್ಯಾಂಕ್ ಹೊತ್ತಿಕೊಂಡ ಘಟನೆಯಿಂದ DGCA ಇದೀಗ ಹೊಸ ಸುರಕ್ಷತಾ ನೀತಿ ಜಾರಿಗೊಳಿಸಲು ಮುಂದಾಗಿದೆ. ಪ್ರಮುಖವಾಗಿ ಅಹಮ್ಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಸುರಕ್ಷತೆ ಕುರಿತು ಹಲವು ಪ್ರಶ್ನೆಗಳು ಎದ್ದಿದೆ. ಇಷ್ಟೇ ಅಲ್ಲ ಈ ಘಟನೆ ಬಳಿಕ ಹಲವು ಆತಂಕಕಾರಿ ಘಟನೆಗಳು ನಡೆದಿದೆ. ವಿಮಾನ ಪ್ರಯಾಣದಲ್ಲಿ ತಾಂತ್ರಿಕ ಸಮಸ್ಯೆಗಳು ದೊಡ್ಡ ಸವಾಲಾಗಿ ಪರಿಣಿಮಿಸುತ್ತಿದೆ. ಹೀಗಾಗಿ ಸುರಕ್ಷತೆಗೆ ಮೊದಲ ಆದ್ಯತೆ ನೀಡಲು DGCA ಸೂಚಿಸಿದೆ.