ತಮಿಳುನಾಡಿನಲ್ಲಿ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡದ ರಾಜ್ಯಪಾಲರ ನಡೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಖಂಡಿಸಿದ್ದಾರೆ. ಮತ್ತೊಂದೆಡೆ, ಮೈತ್ರಿ ಮುರಿದು ವಿಜಯ್‌ಗೆ ಬೆಂಬಲ ನೀಡಿದ ಕಾಂಗ್ರೆಸ್ ವಿರುದ್ಧ ಡಿಎಂಕೆ, 'ಬೆನ್ನಿಗೆ ಚೂರಿ ಹಾಕಿದೆ' ಎಂದು ತೀವ್ರ ಅಸಮಾಧಾನ.

ಚೆನ್ನೈ (ಮೇ.8): ತಮಿಳುನಾಡಿನಲ್ಲಿ ಅತಂತ್ರ ಫಲಿತಾಂಶ ಬಳಿಕ ಮೈತ್ರಿ ಕಡಿದುಕೊಂಡು ವಿಜಯ್‌ರ ಟಿವಿಕೆ ಬೆಂಬಲಿಸಿದ ಕಾಂಗ್ರೆಸ್‌ ವಿರುದ್ಧ ಡಿಎಂಕೆ ಕಿಡಿಕಾರಿದೆ. ‘ ಕಾಂಗ್ರೆಸ್‌ ಹಿಂದಿನಿಂದ ಚೂರಿ ಹಾಕಿ ದ್ರೋಹ ಮಾಡಿದೆ’ ಎಂದು ವಾಗ್ದಾಳಿ ನಡೆಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿರ್ಗಮಿತ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷ ಸ್ಟಾಲಿನ್‌ ನೇತೃತ್ವದಲ್ಲಿ ನೂತನ ಶಾಸಕರ ಸಭೆ ನಡೆದಿದೆ. ಈ ವೇಳೆ ಒಂದು ಕಾಲದ ಮಿತ್ರ ಕಾಂಗ್ರೆಸ್ ವಿರುದ್ಧ ಡಿಎಂಕೆ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ. ‘ ಬಿಜೆಪಿ ಹಲವು ರಾಜ್ಯಗಳಲ್ಲಿ ಮಾಡಿದಂತೆ ಕಾಂಗ್ರೆಸ್‌ ನಮಗೆ ತಮಿಳುನಾಡಿನಲ್ಲಿ ಮಾಡಿದೆ. ಡಿಎಂಕೆ ಜೊತೆ ನಿಶ್ಚಿತಾರ್ಥ, ಟಿವಿಕೆ ಜೊತೆಗೆ ಮದುವೆ. ಇದು ಕಾಂಗ್ರೆಸ್‌ನ ಅವಕಾಶವಾದಿ ರಾಜಕಾರಣ. ತನ್ನ ಹಳೆಯ ಬುದ್ಧಿಯನ್ನು ಇದು ಬಿಟ್ಟಿಲ್ಲ ಎಂದು ತೋರಿಸುತ್ತದೆ. ನಮ್ಮ ಪಕ್ಷದ ನಾಯಕನ ಬೆನ್ನಿಗೆ ಚೂರಿಯಿಂದ ಇರಿದ ಕಾಂಗ್ರೆಸ್ ದೊಡ್ಡ ದ್ರೋಹ ಮಾಡಿದೆ. ಗೆಲುವಿಗೆ ಧನ್ಯವಾದ ಹೇಳಲು ಸಹ ಖುದ್ದಾಗಿ ಬರಲಿಲ್ಲ’ ಎಂದು ಕಿಡಿಕಾರಿದರು.

ವಿಜಯ್ ಸರ್ಕಾರ ರಚನೆ ರಾಜ್ಯಪಾಲರು ಅಡ್ಡಿ ಮಾಡೋದು ಸರಿಯಲ್ಲ: ಡಿಕೆಶಿ

ಬೆಂಗಳೂರು (ಮೇ.8): ತಮಿಳುನಾಡಿನಲ್ಲಿ ವಿಜಯ್‌ ಅವರಿಗೆ ಸರ್ಕಾರ ರಚನೆ ಮಾಡಿ ಬಹುಮತ ಸಾಬೀತುಪಡಿಸುವುದನ್ನು ತಡೆದಿರುವ ರಾಜ್ಯಪಾಲರ ನಡೆ ಸರಿಯಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ರಾಜ್ಯಪಾಲರು ವಿಜಯ್‌ ಅವರಿಗೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು. ಕರ್ನಾಟಕದಲ್ಲಿ ಈ ಹಿಂದೆ ಯಡಿಯೂರಪ್ಪ ಅವರಿಗೆ ರಾಜ್ಯಪಾಲರು ಅನುಮತಿ ನೀಡಿದ್ದರು. ಹೆಚ್ಚು ಸ್ಥಾನ ಗಳಿಸಿದ ಪಕ್ಷಗಳಿಗೆ ಸರ್ಕಾರ ರಚಿಸಲು ಹಿಂದೆಯೂ ಹಲವೆಡೆ ಅನುಮತಿಸಲಾಗಿತ್ತು. ರಾಷ್ಟ್ರಪತಿಗಳಾದ ನಾರಾಯಣನ್‌, ಅಬ್ದುಲ್‌ ಕಲಾಂ ಅವರೂ ಈ ರೀತಿ ಮಾಡಿದ್ದರು.

ವಾಜಪೇಯಿ ಅವರಿಗೂ ಇದೇ ರೀತಿ ಸರ್ಕಾರ ರಚಿಸಲು ಅನುಮತಿಸಿ, ಸದನದಲ್ಲಿ ಬಹುಮತ ಸಾಬೀತಿಗೆ ಅವಕಾಶ ನೀಡಲಾಗಿತ್ತು. ಆದರೆ, ಈಗ ಟಿವಿಕೆಗೆ ಅವಕಾಶ ನೀಡದಿರುವುದು ತಪ್ಪು ಎಂದರು.

ಮೊದಲು ಬಹುಮತ ಸಾಬೀತಿಗೆ ಅವಕಾಶ ನೀಡಬೇಕು. ರಾಜ್ಯದ ಜನರ ಭಾವನೆಗಳಿಗೆ ಬೆಲೆ ಕೊಡಬೇಕು. ಇದು ಪ್ರಜಾಪ್ರಭುತ್ವ. ಒಂದು ಮತದಿಂದ ಬಹುಮತ ಬರಬಹುದು ಅಥವಾ ಕಳೆದುಕೊಳ್ಳಬಹುದು. ವಾಜಪೇಯಿ ಅವರಿಗೆ ಇದೇ ರೀತಿ ಆಗಲಿಲ್ಲವೇ? ಬಹುಮತ ಸಾಬೀತಾಗದಿದ್ದರೆ ಮುಂದಿನ ಆಯ್ಕೆ ನೋಡಬಹುದು ಎಂದು ತಿಳಿಸಿದರು.