ಚೆನ್ನೈ(ಡಿ.17): ತಮಿಳುನಾಡಿನ ಎಸ್‌.ಎನ್‌. ಲಕ್ಷ್ಮೇ ಸಾಯಿ ಶ್ರೀ ಎಂಬ ಬಾಲಕಿ ಕೇವಲ 58 ನಿಮಿಷದಲ್ಲಿ 46 ವಿಧದ ಅಡುಗೆ ತಯಾರಿಸುವ ಮೂಲಕ ವಿಶ್ವ ದಾಖಲೆ ಬರೆದಿದ್ದಾಳೆ. ಆಕೆಯ ಸಾಧನೆ ಯುನಿಕೋ ಬುಕ್‌ ಆಫ್‌ ವಲ್ಡ್‌ರ್‍ ರೆಕಾರ್ಡ್‌ (ಯುಎನ್‌ಐಸಿಒ)ಗೆ ಸೇರ್ಪಡೆಯಾಗಿದೆ.

ಮಂಗಳವಾರ ದಾಖಲೆ ನಿರ್ಮಿಸಿದ ಬಳಿಕ ಮಾತನಾಡಿದ ಲಕ್ಷ್ಮೇ ಸಾಯಿ, ‘ಅಡುಗೆ ಮಾಡುವ ಕಲೆಯನ್ನು ತಾಯಿಯಿಂದ ಕಲಿತೆ. ನಾನು ಈ ಮೈಲಿಗಲ್ಲು ಸಾಧಿಸಿರುವುದು ಖುಷಿಯ ವಿಚಾರ’ ಎಂದು ಹೇಳಿದ್ದಾರೆ.

ಮಗಳು ವಿಶ್ವದಾಖಲೆ ಸೃಷ್ಟಿಸಿದ ಖುಷಿ ಹಂಚಿಕೊಂಡ ಎನ್‌.ಕಲೈಮಗಳ್‌, ‘ನಾನು ತಮಿಳುನಾಡಿನ ವಿಶೇಷ ಖಾದ್ಯಗಳನ್ನು ಆಗಾಗ ಮಾಡುತ್ತಿರುತ್ತೇನೆ. ಆದರೆ ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ಮಗಳೂ ಅಡುಗೆ ಮನೆಯಲ್ಲಿ ನನ್ನೊಂದಿಗೆ ಸಮಯ ಕಳೆಯುತ್ತಿದ್ದಳು. ಅವಳ ಆಸಕ್ತಿಯನ್ನು ಗಮನಿಸಿ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಸಲಹೆ ನೀಡಿದೆವು’ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಕೇರಳದ ಸಾನ್ವಿ ಎಂಬ 10 ವರ್ಷದ ಹುಡುಗಿ 30 ವಿಧದ ಖಾದ್ಯ ತಯಾರಿಸಿ ವಿಶ್ವ ದಾಖಲೆ ಬರೆದಿದ್ದಳು.