ಚೆನ್ನೈ(ಮೇ.28): ಮಹತ್ವದ ಆದೇಶವೊಂದರಲ್ಲಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ 900 ಕೋಟಿ ರು. ಮೌಲ್ಯದ ಆಸ್ತಿಗೆ ಅವರ ಬಂಧುಗಳಾದ ಜೆ. ದೀಪಾ ಹಾಗೂ ಜೆ. ದೀಪಕ್‌ ಅವರನ್ನು ‘ವಾರಸುದಾರರು’ ಎಂದು ಮದ್ರಾಸ್‌ ಹೈಕೋರ್ಟ್‌ ಪರಿಗಣಿಸಿದೆ. ಇವರನ್ನು ‘ಕ್ಲಾಸ್‌-2 ಕಾನೂನುಬದ್ಧ ವಾರಸುದಾರರು’ ಎಂದು ಹೈಕೋರ್ಟ್‌ ಬಣ್ಣಿಸಿದೆ. ಜೆ. ದೀಪಾ ಅವರು ಜಯಲಲಿತಾ ಅವರ ಸೋದರ ಸೊಸೆ ಹಾಗೂ ಜೆ. ದೀಪಕ್‌ ಅವರು ಸೋದರಳಿಯ.

ಜಯಾ ಸಾವಿನ ಬಳಿಕ ಅವರ ಆಸ್ತಿಯನ್ನು ಗೆಳತಿ ಶಶಿಕಲಾ ಅನುಭವಿಸುತ್ತಿದ್ದರು. ಇದನ್ನು ಪ್ರಶ್ನಿಸಿ ‘ಜಯಾ ಅವರ ಆಸ್ತಿಯಲ್ಲಿ ನಮಗೂ ಹಕ್ಕು ಇದೆ’ ಎಂದು ದೀಪಕ್‌ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ದೀಪಾ ಅವನ್ನೂ ಇದರಲ್ಲಿ ಪ್ರತಿವಾದಿ ಮಾಡಿದ್ದರು. ಇದರ ವಿಚಾರಣೆ ನಡೆಸಿದ ನ್ಯಾ| ಎನ್‌. ಕಿರುಬಾಕರನ್‌ ಹಾಗೂ ನ್ಯಾ| ಅಬ್ದುಲ್‌ ಖುದ್ದೂಸ್‌ ಅವರ ಪೀಠ, ದೀಪಕ್‌ ಹಾಗೂ ಅವರ ಸೋದರಿ ದೀಪಾ ಅವರಿಗೆ ಆಸ್ತಿ ಮೇಲೆ ಹಕ್ಕು ಇದೆ ಎಂದು ಹೇಳಿ ಅರ್ಜಿ ಮಾನ್ಯ ಮಾಡಿತು. ಇವರಿಗೆ 913,42,68,179 ರು. (ಸುಮಾರು 913 ಕೋಟಿ ರು.) ಮೌಲ್ಯದ ಆಸ್ತಿ ಇವರಿಗೆ ದೊರಕಬಹುದು ಎಂದು ತೀರ್ಪಿನಲ್ಲಿ ಕೋರ್ಟ್‌ ಮೌಲ್ಯಮಾಪನ ಮಾಡಿತು.

ಜಯಲಲಿತಾ ಪೊಲಿಟಿಕಲ್ ಸೀಕ್ರೆಟ್ ಬಿಚ್ಚಿಟ್ಟ ಜನಾರ್ದನ ರೆಡ್ಡಿ

ಸ್ಮಾರಕ ಬೇಡ:

ಜಯಾ ಅವರ ಪೋಯೆಸ್‌ ಗಾರ್ಡನ್‌ನ ‘ವೇದ ನಿಲಯಂ’ ಇಡೀ ನಿವಾಸವನ್ನು ಸ್ಮಾರಕ ಎಂದು ಪರಿವರ್ತಿಸದೇ ಮುಖ್ಯಮಂತ್ರಿಗಳ ಅಧಿಕೃತ ಕಚೇರಿ ಅಥವಾ ನಿವಾಸ ಎಂದು ಪರಿಗಣಿಸಬಹುದು. ಸಣ್ಣ ಭಾಗವನ್ನು ಮಾತ್ರ ಸ್ಮಾರಕ ಮಾಡಬಹುದು ಎಂದು ಸರ್ಕಾರಕ್ಕೆ ಇದೇ ವೇಳೆ ಕೋರ್ಟ್‌ ಸಲಹೆ ಮಾಡಿತು.

‘ಸಾರ್ವಜನಿಕರ ಹಣವನ್ನು ಸ್ಮಾರಕವನ್ನಾಗಿ ಪರಿವರ್ತಿಸಲು ಸುಮ್ಮನೇ ವ್ಯಯಿಸಬಾರದು. ಮುಖಂಡರ ತತ್ವಾದರ್ಶಗಳನ್ನು ಅನುಸರಿಸಿ ಅವರ ಸ್ಮರಣೆ ಮಾಡುವುದು, ಜನಾನುರಾಗಿ ಕೆಲಸ, ಅಭಿವೃದ್ಧಿ ಕೆಲಸ ಮಾಡುವುದೇ ನಿಜವಾದ ಶ್ರದ್ಧಾಂಜಲಿ. ಜಯಾ ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡಲು ಸರ್ಕಾರ ಇಚ್ಛಿಸಿದರೆ ಇಂಥದ್ದಕ್ಕೆ ಕೊನೆಯೇ ಇರಲ್ಲ’ ಎಂದು ನ್ಯಾಯಪೀಠ ಹೇಳಿತು.

ಜಯಾ ಪಕ್ಕ ಇರೋದು ನಿರ್ಮಲಾ ಸೀತರಾಮನ್ ಆ?

ದೀಪಾ ಹಾಗೂ ದೀಪಕ್‌ ಅವರು ಜಯಾ ಹೆಸರಿನಲ್ಲಿ ಟ್ರಸ್ಟ್‌ ಆರಂಭಿಸಿ ಜನಕಲ್ಯಾಣ ಯೋಜನೆ ನಡೆಸುವ ಸಿದ್ಧತೆ ನಡೆಸಿದ್ದಾರೆ. ಇವರಿಗೆ ಸರ್ಕಾರ ಅವರ ಖರ್ಚಿನಲ್ಲೇ ಭದ್ರತೆ ನೀಡಬೇಕು ಎಂದು ಕೋರ್ಟ್‌ ಸೂಚಿಸಿತು.