ಕೋವಿಡ್‌ಗೆ ತುತ್ತಾಗಿರುವ ಸಿಎಂ ಸ್ಟಾಲಿನ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಚೆನ್ನೈನಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಚೆನ್ನೈ(ಜು.14): ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಕೋವಿಡ್‌ಗೆ ತುತ್ತಾಗಿದ್ದಾರೆ. ಕೋವಿಡ್ ಕಾರಣ ಅನಾರೋಗ್ಯಕ್ಕೆ ತುತ್ತಾಗಿರುವ ಸ್ಟಾಲಿನ್ ಅವರನ್ನು ಚೆನ್ನೈನ ಅಲ್ವಾರಪೇಟೆಯಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಕಾವೇರಿ ಆಸ್ಪತ್ರೆ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಎಂಕೆ ಸ್ಟಾಲಿನ್‌ ಅವರಲ್ಲಿ ಕೊರೋನಾ ಗುಣಲಕ್ಷಗಳು ಕಾಣಿಸಿಕೊಂಡಿದೆ. ಹೀಗಾಗಿ ಸ್ಟಾಲಿನ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಾವೇರಿ ಆಸ್ಪತ್ರೆ ನಿರ್ದೇಶಕ ಹಾಗೂ ವೈದ್ಯ ಅರವಿಂದ ಸೆಲ್ವರಾಜ್ ಹೇಳಿದ್ದಾರೆ. ಎಂಕೆ ಸ್ಟಾಲಿನ್‌ಗೆ ಕಳೆದೆರಡು ದಿನದಿಂದ ಕೊರೋನಾ ಸೋಂಕಿನ ಲಕ್ಷಣ ಕಾಣಿಸಿಕೊಂಡಿತ್ತು. ಹೀಗಾಗಿ ಕೋವಿಡ್ ಪರೀಕ್ಷೆ ಮಾಡಿಸಿದ ಎಂಕೆ ಸ್ಟಾಲಿನ್‌ಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಇಂದು ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳವಾರ(ಜುಲೈ 12) ರಂದು ಸ್ವತಃ ಎಂಕೆ ಸ್ಟಾಲಿನ್ ತಾವು ಕೋವಿಡ್‌ಗೆ ತುತ್ತಾಗಿದ್ದು ಹೋಮ್ ಐಸೋಲೇಶನ್‌ಗೆ ಒಳಗಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಎಲ್ಲರೂ ಮಾಸ್ಕ್ ಹಾಗೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಮನವಿ ಮಾಡಿದ್ದರು. 

ಕೋವಿಡ್ ಕಾಣಿಸಿಕೊಂಡ ಬೆನ್ನಲ್ಲೇ ಎಂಕೆ ಸ್ಟಾಲಿನ್(Tamil Nadu Chief Minister) ಆರೋಗ್ಯ ಕೊಂಚ ಕ್ಷೀಣಿಸಿತ್ತು. ಜುಲೈ 12 ರಿಂದ 3 ದಿನ ವಿಶ್ರಾಂತಿ ಪಡೆದ ಎಂಕೆ ಸ್ಟಾಲಿನ್ ಚೇತರಿಸಿಕೊಂಡಿಲ್ಲ. ಹೀಗಾಗಿ ಇಂದು ಕಾವೇರಿ ಆಸ್ಪತ್ರೆಗೆ(Kauvery Hospital chennai) ದಾಖಲಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್​​.ಡಿ ಕುಮಾರಸ್ವಾಮಿಗೆ ಕೋವಿಡ್​ ಪಾಸಿಟಿವ್!

ಜುಲೈ 11 ಹಾಗೂ 12 ರಂದು ಎಂಕೆ ಸ್ಟಾಲಿನ್ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಮಾಸ್ಕ್ ಹಾಕದೇ ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ದ್ರಾವಿಡ ಕಳಗಂ ನಾಯಕ ಕೆ ವೀರಮಣಿಯನ್ನು ಭೇಟಿಯಾಗಿದ್ದರು. ಬಳಿಕ ಚೆನ್ನೈನಲ್ಲಿ ನಡೆದ ಆಪ್ತರ ಮದುವೆ ಕಾರ್ಯಕ್ರಮದಲ್ಲೂ ಸ್ಟಾಲಿನ್ ಭಾಗಿಯಾಗಿದ್ದರು. ಆದರೆ ಯಾವುದೇ ಕಾರ್ಯಕ್ರಮಗಳಲ್ಲಿ ಸ್ಟಾಲಿನ್ ಮಾಸ್ಕ್ ಹಾಕಿರಲಿಲ್ಲ. ಈ ಕುರಿತು ಸ್ಟಾಲಿನ್ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಆದರೆ ಈ ಕಾರ್ಯಕ್ರಮಗಳಲ್ಲಿ, ಭೇಟಿ ಹಾಗೂ ಸಭೆಗಳಲ್ಲಿ ಯಾರೂ ಮಾಸ್ಕ್ ಹಾಕಿರಲಿಲ್ಲ.

ಚೆನ್ನೈ ಹಾಗೂ ತಮಿಳುನಾಡಿನಲ್ಲಿ ಕಳೆದ ವಾರ ಭಾರಿ ಏರಿಕೆ ಕಂಡಿದ್ದ ಕೊರೋನಾ(Covid 19) ಪ್ರಕರಣ ಇದೀಗ ಇಳಿಮುಖದತ್ತ ಸಾಗಿದೆ. ಬುಧವಾರ(ಜು.13) ತಮಿಳುನಾಡಿನಲ್ಲಿ 2,269 ಕೋವಿಡ್ ಪ್ರಕರಣ ದಾಖಲಾಗಿತ್ತು. ಈ ಮೂಲಕ ಸಕ್ರೀಯ ಪ್ರಕರಣಗಳ ಸಂಖ್ಯೆ 18,282ಕ್ಕೆ ಏರಿಕೆಯಾಗಿದೆ. ಚೆನ್ನೈನಲ್ಲಿ 729 ಕೋವಿಡ್ ಪ್ರಕರಣ ವರದಿಯಾಗಿದೆ. ನಿನ್ನೆ ಪಟ್ಟಲಿ ಮಕ್ಕಳ್ ಕಚ್ಚಿ (PMK) ಸಂಸ್ಥಾಪಕ ಡಾ. ರಾಮಾದೋಸ್‌ಗೆ ಕೋವಿಡ್‌ ಕಾಣಿಸಿಕೊಂಡಿದ್ದು, ಐಸೋಲೇಶನ್‌ಗೆ ಒಳಗಾಗಿದ್ದಾರೆ.

ಜುಲೈ 15 ರಿಂದ 18 ವರ್ಷ ಮೇಲ್ಪಟ್ಟವರಿಗೂ ಉಚಿತ ಬೂಸ್ಟರ್‌ ಡೋಸ್‌!

ಹಲವು ನಾಯಕರು ಇತ್ತೀಚೆಗೆ ಕೋವಿಡ್ ಕಾಣಿಸಿಕೊಂಡು ಐಸೋಲೇಶನ್‌ಗೆ ಒಳಗಾಗಿದ್ದಾರೆ. ಕರ್ನಾಟಕ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಗೆ ಮತ್ತೆ ಕೋವಿಡ್ ಕಾಣಿಸಿಕೊಂಡಿದೆ. ವೈದ್ಯರ ಸೂಚನೆಯಂತೆ ಹೆಚ್‌ಡಿಕೆ 10 ದಿನಗಳ ಕಾಲ ಐಸೋಲೇಶನ್‌ಗೆ ಒಳಾಗಾಗುವುದಾಗಿ ಹೇಳಿದ್ದಾರೆ. ಇದೇ ವೇಳೆ ಕೋವಿಡ್‌ನಿಂದ ಚೇತರಿಸಿಕೊಳ್ಳುವವರಗೆ ಯಾರೂ ಸಂಪರ್ಕಿಸದಂತೆ, ಭೇಟಿ ಮಾಡದಂತೆ ಮನವಿ ಮಾಡಿದ್ದಾರೆ. ಕರ್ನಾಟಕದಲ್ಲೂ ಕೋವಿಡ್ ಪ್ರಕರಣ ಸಂಖ್ಯೆ ಏರಿಕೆಯಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಮತ್ತೆ ಹೊಸ ಕೊರೋನಾ ಪ್ರಕರಣ ಸಂಖ್ಯೆ 1,000 ದಾಡಿದೆ.