ಮತ ಎಣಿಕೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ, ಸ್ಟ್ರಾಂಗ್ ರೂಮ್‌ಗಳ ಬಳಿ ಉದ್ದೇಶಪೂರ್ವಕವಾಗಿ ವಿದ್ಯುತ್ ಕಡಿತಗೊಳಿಸಿ, ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಲಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.

ಕೋಲ್ಕತ್ತಾ (ಮೇ.4): ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ರಾಜಕೀಯ ಹೈಡ್ರಾಮಾ ಶುರುವಾಗಿದೆ. ರಾಜ್ಯದ ಹಲವೆಡೆ ಉದ್ದೇಶಪೂರ್ವಕವಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಮತಾ ಬ್ಯಾನರ್ಜಿ ಮಾಡಿದ ಆರೋಪಗಳೇನು?

ಸಾಮಾಜಿಕ ಜಾಲತಾಣ 'X' ನಲ್ಲಿ ಪೋಸ್ಟ್ ಮಾಡಿರುವ ಮಮತಾ, ಹೂಗ್ಲಿಯ ಶ್ರೀರಾಮಪುರ, ನಾಡಿಯಾದ ಕೃಷ್ಣನಗರ, ಬರ್ಧಮಾನ್‌ನ ಔಸ್‌ಗ್ರಾಮ್ ಮತ್ತು ಕೋಲ್ಕತ್ತಾದ ಕ್ಷುದಿರಾಮ್ ಅನುಶೀಲನ್ ಕೇಂದ್ರ ಸೇರಿದಂತೆ ಹಲವೆಡೆ ಹಂತ ಹಂತವಾಗಿ ವಿದ್ಯುತ್ ಕಡಿತ (Load-Shedding) ಮಾಡಲಾಗುತ್ತಿದೆ ಎಂದು ದೂರಿದ್ದಾರೆ. ಸ್ಟ್ರಾಂಗ್ ರೂಮ್‌ಗಳ ಬಳಿ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಲಾಗಿದೆ ಎಂಬ ವರದಿಗಳು ಬರುತ್ತಿವೆ. ಸ್ಟ್ರಾಂಗ್ ರೂಮ್ ಆವರಣದೊಳಗೆ ಅನುಮಾನಾಸ್ಪದವಾಗಿ ವಾಹನಗಳು ಓಡಾಡುತ್ತಿವೆ ಎಂದು ಹೇಳಿದ್ದು, ಇವೆಲ್ಲವೂ ಬಿಜೆಪಿಯ ಸೂಚನೆಯ ಮೇರೆಗೇ ನಡೆಯುತ್ತಿದೆ ಎಂದು ಮಮತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿರುವ ಅವರು, "ಇಡೀ ರಾತ್ರಿ ಜಾಗರೂಕರಾಗಿರಿ, ಸ್ಟ್ರಾಂಗ್ ರೂಮ್‌ಗಳನ್ನು ಕಾವಲು ಕಾಯಿರಿ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಕೂಡಲೇ ದೂರು ನೀಡಿ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸುವಂತೆ ಒತ್ತಾಯಿಸಿ" ಎಂದು ಸೂಚಿಸಿದ್ದಾರೆ.

ಭವಾನಿಪುರದಲ್ಲಿ ಗೆಲುವಿನ ವಿಶ್ವಾಸ

ಇದೇ ವೇಳೆ, ತಾವು ಸ್ಪರ್ಧಿಸಿರುವ ಭವಾನಿಪುರ ಕ್ಷೇತ್ರದ ಮತ ಎಣಿಕೆ ಏಜೆಂಟ್‌ಗಳೊಂದಿಗೆ ಮಮತಾ ಬ್ಯಾನರ್ಜಿ ಮಹತ್ವದ ಸಭೆ ನಡೆಸಿದ್ದಾರೆ. ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಮಾತನಾಡಿ, "ಮಮತಾ ಬ್ಯಾನರ್ಜಿ ಭಾರಿ ಅಂತರದಿಂದ ಗೆಲ್ಲಲಿದ್ದಾರೆ. ಅವರು ಸತತ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಆಯೋಗದ ಸಿದ್ಧತೆ ಮತ್ತು ಕಟ್ಟುನಿಟ್ಟಿನ ಕ್ರಮ

ಪಾರದರ್ಶಕ ಮತ ಎಣಿಕೆಗಾಗಿ ಚುನಾವಣಾ ಆಯೋಗವು 432 ಕೌಂಟಿಂಗ್ ಅಬ್ಸರ್ವರ್‌ಗಳನ್ನು ನೇಮಿಸಿದೆ. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಮೊದಲು ಅಂಚೆ ಮತಪತ್ರಗಳನ್ನು (Postal Ballots) ಎಣಿಕೆ ಮಾಡಲಾಗುತ್ತದೆ. ಅನಧಿಕೃತ ವ್ಯಕ್ತಿಗಳ ಪ್ರವೇಶ ತಡೆಯಲು ಈ ಬಾರಿ ಮೊದಲ ಬಾರಿಗೆ 'QR ಕೋಡ್' ಆಧಾರಿತ ಫೋಟೋ ಗುರುತಿನ ಚೀಟಿ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. 77 ಕೇಂದ್ರಗಳಲ್ಲಿ ಮೂರು ಹಂತದ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಸಿಹಿ ತಿನಿಸುಗಳಲ್ಲೂ ಚುನಾವಣಾ ರಂಗು!

ಬಂಗಾಳದ ಈ ರೋಚಕ ಕದನಕ್ಕೆ ಸಿಹಿ ತಿನಿಸುಗಳೂ ಸಾಕ್ಷಿಯಾಗಿವೆ. ಮಾರುಕಟ್ಟೆಯಲ್ಲಿ 'ಮೋದಿಶ್ರೀ' ಮತ್ತು 'ಜೋಯ್ ಬಾಂಗ್ಲಾ' ಹೆಸರಿನ ಸಿಹಿ ತಿನಿಸುಗಳು ಸದ್ದು ಮಾಡುತ್ತಿವೆ. ರಾಜಕೀಯ ಪಕ್ಷಗಳ ಬಣ್ಣ ಮತ್ತು ಚಿಹ್ನೆಗಳನ್ನು ಹೋಲುವ ಈ ಮಿಠಾಯಿಗಳು ಫಲಿತಾಂಶದ ದಿನದ ಸಡಗರವನ್ನು ಹೆಚ್ಚಿಸಿವೆ.