ನವದೆಹಲಿ (ಏ. 22): ಭಾರತ ಮಾತ್ರವೇ ಅಲ್ಲದೆ ಏಷ್ಯಾ ಖಂಡದ ಹಲವು ದೇಶಗಳಿಗೆ ತಬ್ಲೀಘಿಗಳಿಂದ ಕೊರೋನಾ ಸೋಂಕು ಹರಡಿ, ಕ್ಲಸ್ಟರ್‌ಗಳು ಸೃಷ್ಟಿಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ದೇಶದಲ್ಲಿ ಕೊರೋನಾ ಸೋಂಕು ಹಠಾತ್ತನೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲು ದೆಹಲಿಯ ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ ನಡೆದ ತಬ್ಲೀಘಿ ಜಮಾತ್‌ ಕಾರಣ ಎಂಬುದು ಈಗಾಗಲೇ ಸಾಬೀತಾಗಿದೆ.

ಈ ತಬ್ಲೀಘಿಗಳು ದೆಹಲಿಯಲ್ಲಿ ನಡೆಸಿದಂತಹುದೇ ಸಭೆಯನ್ನು ಏಷ್ಯಾದ ವಿವಿಧೆಡೆ ಆಯೋಜಿಸಿದ್ದರು. ಆ ಸಭೆಗಳಿಂದಾಗಿ ಪಾಕಿಸ್ತಾನ, ಮಲೇಷ್ಯಾ, ಸಿಂಗಾಪುರ ಹಾಗೂ ಬ್ರುನೈನಲ್ಲೂ ಸಾಕಷ್ಟುಪ್ರಮಾಣದಲ್ಲಿ ಸೋಂಕು ಕಂಡುಬಂದಿದೆ.

ಲಾಕ್‌ಡೌನ್ ಬಳಿಕ ವಿಮಾನ ಪ್ರಯಾಣ ಬಲು ಕಷ್ಟ: ಹೊಸ ನಿಯಮ!

ಮಾಚ್‌ರ್‍ ಮಧ್ಯಭಾಗದಲ್ಲಿ ಪಾಕಿಸ್ತಾನದ ಲಾಹೋರ್‌ನ ರಾಯ್‌ವಿಂಡ್‌ನಲ್ಲಿ ಐದು ದಿನಗಳ ತಬ್ಲೀಘಿ ಸಮಾವೇಶ ನಡೆದಿತ್ತು. ಸುಮಾರು 70 ಸಾವಿರ ಮಂದಿ ಭಾಗವಹಿಸಿದ್ದರು. ಆ ಸಮಾವೇಶದಲ್ಲಿ ಭಾಗಿಯಾದ 2258 ಮಂದಿಯಲ್ಲಿ ಸೋಂಕು ಕಂಡುಬಂದಿದೆ. ಪಾಕಿಸ್ತಾನದಲ್ಲಿ ಈವರೆಗೆ 8418 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, 176 ಸಾವುಗಳು ಸಂಭವಿಸಿವೆ. ಸೋಂಕಿತರಲ್ಲಿ ಶೇ.25ರಷ್ಟುಮಂದಿ ತಬ್ಲೀಘಿಗಳಾಗಿದ್ದಾರೆ.

ಇನ್ನು ಮಲೇಷ್ಯಾದಲ್ಲೂ ಫೆ.27ರಿಂದ ಮಾ.11ರವರೆಗೆ ತಬ್ಲೀಘಿ ಸಮಾವೇಶ ನಡೆದು, 16 ಸಾವಿರ ಮಂದಿ ಭಾಗಿಯಾಗಿದ್ದರು. ಮಲೇಷ್ಯಾದಲ್ಲಿ ಈವರೆಗೆ 5425 ಸೋಂಕಿತರು ಪತ್ತೆಯಾಗಿದ್ದು, ಆ ಪೈಕಿ 1946 ಮಂದಿ ತಬ್ಲೀಘಿಗಳಾಗಿದ್ದಾರೆ. ಮಲೇಷ್ಯಾದಲ್ಲಿ ಕೊರೋನಾ ಕ್ಲಸ್ಟರ್‌ಗಳು ಬೆಳಕಿಗೆ ಬಂದಿವೆ. ಅಲ್ಲಿನ ಸಮಾವೇಶದಿಂದಾಗಿ ಸಿಂಗಾಪುರ, ಬ್ರುನೈನಲ್ಲೂ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ ಎಂದು ವರದಿಗಳು ತಿಳಿಸಿವೆ.

ವಿಶ್ವದಲ್ಲಿ 25 ಲಕ್ಷ ಸೋಂಕು: 1.7 ಲಕ್ಷಕ್ಕೂ ಹೆಚ್ಚು ಸಾವು!

ತಬ್ಲೀಘಿ ಜಮಾತ್‌ ಎಂಬುದು ವಿಶ್ವದ ಅತಿದೊಡ್ಡ ಧಾರ್ಮಿಕ ಚಳವಳಿಗಳಲ್ಲಿ ಒಂದಾಗಿದ್ದು, 150 ದೇಶಗಳಲ್ಲಿ ಅಸ್ತಿತ್ವ ಹೊಂದಿದೆ. ಈ ಸಂಘಟನೆಯಲ್ಲಿ ಅಧಿಕೃತ ಸದಸ್ಯತ್ವ ಎಂಬುದು ಇಲ್ಲ. ಏನಿಲ್ಲವೆಂದರೂ 1.2 ಕೋಟಿಯಿಂದ 8 ಕೋಟಿ ಜನರನ್ನು ಈ ಸಂಘಟನೆ ಹೊಂದಿರಬಹುದು.

ಮುಸ್ಲಿಮರನ್ನು ಸಂಪರ್ಕಿಸಿ, ನಿತ್ಯ ಕಟ್ಟುನಿಟ್ಟಾಗಿ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮನವೊಲಿಸುವ ಕೆಲಸವನ್ನು ಈ ಸಂಘಟನೆ ಮಾಡುತ್ತದೆ ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ.