ವಾಷಿಂಗ್ಟನ್‌: ವಿಶ್ವದ 200ಕ್ಕೂ ಹೆಚ್ಚು ದೇಶಗಳಲ್ಲಿ ತಲ್ಲಣ ಸೃಷ್ಟಿಸಿರುವ ಮಾರಕ ಕೊರೋನಾ ಸೋಂಕು ಇದೀಗ ಒಟ್ಟಾರೆ 25 ಲಕ್ಷಕ್ಕೂ ಹೆಚ್ಚು ಜನರಿಗೆ ವ್ಯಾಪಿಸಿದೆ. ಜೊತೆಗೆ, ವಿಶ್ವ ವೈರಸ್‌ಗೆ ಬಲಿಯಾದವರ ಸಂಖ್ಯೆ 1.72 ಲಕ್ಷಕ್ಕೆ ತಲುಪಿದೆ. ಈ ಪೈಕಿ ವಿಶ್ವದಲ್ಲೇ ಅತಿ ಹೆಚ್ಚು ಸೋಂಕು ಮತ್ತು ಸಾವು ದಾಖಲಾಗಿರುವ ಅಮೆರಿಕದ ಪಾಲು ಬಹು ದೊಡ್ಡದಿದೆ. ಒಟ್ಟಾರೆ ಸೋಂಕಲ್ಲಿ ಅಮೆರಿಕದ ಪಾಲು ಶೇ.31ರಷ್ಟುಮತ್ತು ಸಾವಿನಲ್ಲಿ ಅಮೆರಿಕ ಪಾಲು ಶೇ.25ರಷ್ಟಿದೆ.

ಮೊದಲ ಪ್ರಕರಣ ಬೆಳಕಿಗೆ ಬಂದ ಕೇವಲ 5 ತಿಂಗಳ ಅವಧಿಯಲ್ಲಿ ಬಹುತೇಕ ಇಡೀ ವಿಶ್ವವನ್ನು ಆವರಿಸಿಕೊಂಡ ಸೋಂಕು, ಈ ಅವಧಿಯಲ್ಲಿ 25 ಲಕ್ಷ ಜನರಿಗೆ ಹರಡುವ ಮೂಲಕ ತನ್ನ ತೀವ್ರತೆಯನ್ನು ಜಗತ್ತಿಗೆ ಪರಿಚಯಿಸಿದೆ.

ಇನ್ನು ಮೊದಲಿಗೆ ಚೀನಾದಲ್ಲಿ ಕಾಣಿಸಿಕೊಂಡು ಬಳಿಕ ಯುರೋಪ್‌ ದೇಶಗಳನ್ನು ಬಹುವಾಗಿ ಕಾಡಿದ ಕೊರೋನ ಸೋಂಕು, ಅಲ್ಲಿ ಭಾರೀ ಅನಾಹುತ ಸೃಷ್ಟಿಸಿದೆ. ಯುರೋಪ್‌ ದೇಶಗಳಲ್ಲಿ ಒಟ್ಟಾರೆ 1132000 ಸೋಂಕಿತರಿದ್ದು, 42365 ಜನ ಸಾವನ್ನಪ್ಪಿದ್ದಾರೆ.

ಅತಿ ಹೆಚ್ಚು ಸೋಂಕಿತರು ಮತ್ತು ದಾವು ದಾಖಲಾದ ದೇಶಗಳೆಂದರೆ ಅಮೆರಿಕ (8 ಲಕ್ಷ ಸೋಂಕು, 42531 ಸಾವು), ಇಟಲಿ (1.81 ಲಕ್ಷ ಸೋಂಕು, 24115 ಸಾವು), ಸ್ಪೇನ್‌ (2.04 ಲಕ್ಷ ಸೋಂಕು, 21282 ಸಾವು), ಫ್ರಾನ್ಸ್‌ (1.55 ಲಕ್ಷ ಸೋಂಕು, 20265 ಸಾವು) ಮತ್ತು ಬ್ರಿಟನ್‌ (1.24 ಲಕ್ಷ ಸೋಂಕು, 16509 ಸಾವು).

ಇನ್ನು ಕೊರೋನಾ ಲಾಕ್‌ಡೌನ್‌ ಪರಿಣಾಮ ಜಗತ್ತಿನಾದ್ಯಂತ ಎಲ್ಲ ಮೂಲಭೂತ ಸೌಕರ್ಯಗಳನ್ನು ಹೊರತುಪಡಿಸಿ, ಮನರಂಜನೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಹೀಗಾಗಿ, 450 ಕೋಟಿಗೂ ಹೆಚ್ಚು ಮಂದಿ ಕೆಲಸ-ಕಾರ್ಯವಿಲ್ಲದೆ ಮನೆಯಲ್ಲೇ ಉಳಿದುಕೊಳ್ಳುವಂತಾಗಿದೆ. ಈವರೆಗೆ ವಿವಿಧ ದೇಶಗಳಲ್ಲಿ ಸೋಂಕಿನಿಂದ 6.6 ಲಕ್ಷ ಜನ ಚೇತರಿಸಿಕೊಂಡಿದ್ದಾರೆ.

ಸೋಂಕಿನ ಹಾದಿ

2019 ನ.17 ಮೊದಲ ಪ್ರಕರಣ

2020 ಮಾ.5: 1 ಲಕ್ಷ

2020 ಮಾ.26: 5 ಲಕ್ಷ

2020 ಏ.2: 10 ಲಕ್ಷ

2020 ಏ.9: 15 ಲಕ್ಷ

2020 ಏ.15: 20 ಲಕ್ಷ

ಏಪ್ರಿಲ್‌ 20: 25 ಲಕ್ಷ

ಸಾವಿನ ಹಾದಿ

2020 ಜ.9: ಮೊದಲ ಬಲಿ

2020 ಮಾ. 19: 10,000

2020 ಮಾ.25: 20,000

2020 ಏ.2: 50,000

2020 ಏ.11: 1 ಲಕ್ಷ ಸಾವು

2020 ಏ.17: 1.50 ಲಕ್ಷ ಸಾವು

2020 ಏ.21: 1.72 ಲಕ್ಷ ಸಾವು