Car stuck on Kannur flyover: ಕೇರಳದ ಕಣ್ಣೂರಿನಲ್ಲಿ, ಕಂಠಪೂರ್ತಿ ಕುಡಿದ ಚಾಲಕನೊಬ್ಬ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಮೇಲೆ ಕಾರು ಚಲಾಯಿಸಿದ್ದಾನೆ. ಪರಿಣಾಮವಾಗಿ, ಕಾರು ಎರಡು ಕಂಬಗಳ ನಡುವೆ ಸಿಲುಕಿ ತಲೆಕೆಳಗಾಗಿ ನೇತಾಡಿದ್ದು, ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಿರ್ಮಾಣ ಹಂತದ ಮೇಲ್ಸೇತುವೆ ಮೇಲೆ ಚಲಿಸಿದ ಕಾರು
ಕಾರು ಚಾಲಕನೋರ್ವ ಕಂಠಪೂರ್ತಿ ಕುಡಿದು ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯ ಮೇಲೆ ಕಾರು ಓಡಿಸಿದ್ದಾನೆ. ಪರಿಣಾಮ ಕಾರು ಮೇಲ್ಸೇತುವೆಯ ಎರಡು ಕಂಬಗಳ ಮಧ್ಯೆ ಇದ್ದ ಜಾಗದಲ್ಲಿ ಸಿಲುಕಿಕೊಂಡು ತಲೆಕೆಳಗಾಗಿ ನೇತಾಡಿದೆ. ಕೇರಳದ ಕಣ್ಣೂರಿನಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎರಡು ಕಂಬಗಳ ಮಧ್ಯೆ ತಲೆಕೆಳಗಾಗಿ ನಿಂತು ಕಾರು
ರಾಷ್ಟ್ರೀಯ ಹೆದ್ದಾರಿ 66ರ ಬಳಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಮೇಲೆ ಈ ಘಟನೆ ನಡೆದಿದೆ. ಎರಡು ಕಂಬಗಳ ನಡುವಿನ ಸಣ್ಣ ಗ್ಯಾಪ್‌ನಲ್ಲಿ ಕೆಳಗೆ ಇಳಿದ ಸ್ವಿಫ್ಟ್ ಡಿಜೈರ್ ಕಾರು ಅಲ್ಲೇ ಸಿಲುಕಿಕೊಂಡಿದ್ದರಿಂದ ಕಾರು ಚಾಲಕನ ಜೀವ ಉಳಿದಿದೆ. ಕಾರು ಮೇಲಿನಿಂದ ಕೆಳಗೆ ಬಿದ್ದಿದ್ದರೆ ದೊಡ್ಡ ಅನಾಹುತ ಸಂಭವಿಸುವುದರಲ್ಲಿತ್ತು. ಆದರೆ ಚಾಲಕನ ಅದೃಷ್ಟ ಚೆನ್ನಾಗಿತ್ತು ನೋಡಿ ಆತ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದರಿಂದ, ಕಾರು ಕೆಳಗೆ ಉರುಳಿದರು ಎರಡು ಕಂಬಗಳ ಮಧ್ಯೆ ಸಿಲುಕಿದ್ದರಿಂದ ಆತನ ಜೀವ ಉಳಿದಿದೆ.
ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ನವೆಂಬರ್ 16ರಂದು ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಕಾರು ಥಲಸ್ಸೇರಿಯಿಂದ ಕಣ್ಣೂರ್ ಕಡೆಗೆ ಬರುತ್ತಿತ್ತು. ಈ ವೇಳೆ ಕಾರು ಚಾಲಕ ವೇಗವಾಗಿ ಬಂದು ಅರಿವಿಲ್ಲದೇ ಇನ್ನೂ ಕಾಮಗಾರಿ ಪೂರ್ಣಗೊಳ್ಳದೇ ಇದ್ದ ಮೇಲ್ಸೇತುವೆ ಮೇಲೆ ಏರಿದ್ದು, ಪರಿಣಾಮ ಮೇಲ್ಸುತುವೆಯ ಎರಡು ಕಂಬಗಳ ಮಧ್ಯೆ ಸಿಲುಕಿಕೊಂಡು ತಲೆಕೆಳಗಾಗಿ ನೇತಾಡಿದೆ. ಘಟನೆಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದು, ಕಾರು ಚಾಲಕ ಬಂದು ಎಚ್ಚರಿಕೆಯ ಬ್ಯಾರಿಕೇಡ್ ಅನ್ನು ನಿರ್ಲಕ್ಷಿಸಿ ಮುಂದೆ ಸಾಗಿದ್ದಾನೆ. ಚಾಲಕನಿಗೆ ಕಾರು ಮುಂದಕ್ಕೆ ವಾಲುತ್ತಿದ್ದಂತೆ ತಕ್ಷಣವೇ ಅಪಾಯದ ಅರಿವಾಯಿತು ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ಅದೃಷ್ಟವಶಾತ್, ಕಾರು ಮತ್ತಷ್ಟು ಜಾರಿಬೀಳುವ ಮೊದಲು ಯಾವುದೇ ದೊಡ್ಡ ಗಾಯಗಳಿಲ್ಲದೆ ಅವನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
ಈ ಆಘಾತಕಾರಿ ದೃಶ್ಯ ವೈರಲ್ ಆಗಿದ್ದು, ವೀಡಿಯೋ ನೋಡಿ ಹಾಗೂ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕೂಡಲೇ ಸ್ಥಳೀಯ ನಿವಾಸಿಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಕ್ರೇನ್ ಬಳಸಿ ಕಾರಿಗೆ ಯಾವುದೇ ಹಾನಿಯಾಗದಂತೆ ಮೇಲೆತ್ತಲಾಯ್ತು. ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕ ಮಲಪ್ಪುರಂ ಜಿಲ್ಲೆಯ ಲಾಸಿಮ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ವಿದೇಶಿ ನೆಲದಲ್ಲಿ ಸೀರೆಯುಟ್ಟು ಟ್ರೆಂಡ್ ಉಲ್ಟಾ ಮಾಡಿದ ಭಾರತೀಯ ನಾರಿ: ಸೆಲ್ಪಿಕೇಳಿದ ಫಾರಿನರ್ಸ್
ಇದನ್ನೂ ಓದಿ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಚಳಿಯೋ ಚಳಿ


