ಅಯೋಧ್ಯಾ ರಾಮ ಮಂದಿರಕ್ಕೆ ಸೂರ್ಯ ತಿಲಕ ಯಂತ್ರ ದಾನವಾಗಿ ನೀಡಿದ ಬೆಂಗಳೂರು ಕಂಪನಿ!
ರಾಮಜನ್ಮಭೂಮಿ ಟ್ರಸ್ಟ್‌ನ ಮನವಿಯ ಮೇರೆಗೆ ಎರಡು ಸಾರ್ವಜನಿಕ ಸ್ವಾಮ್ಯದ ಕಂಪನಿ ಮತ್ತು ಬೆಂಗಳೂರು ಮೂಲದ ಕಂಪನಿ 84 ಲಕ್ಷ ರೂಪಾಯಿ ಮೌಲ್ಯದ ಆಪ್ಟಿಕಲ್ ಯಂತ್ರವನ್ನು ರಾಮ ಮಂದಿರಕ್ಕೆ ದಾನವಾಗಿ ನೀಡಿದೆ. ಪ್ರತಿ ವರ್ಷ ರಾಮನವಮಿಯ ಸಂದರ್ಭದಲ್ಲಿ ಈ ಯಂತ್ರದ ಮೂಲಕ ಶ್ರೀರಾಮನ ಹಣೆಯ ಮೇಲೆ ಸೂರ್ಯರಶ್ಮಿ 3-4 ನಿಮಿಷಗಳ ಕಾಲ ತಾಗಲಿದೆ.
ಬೆಂಗಳೂರು (ಜ.12): ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಮನವಿಯ ಮೇರೆಗೆ ಎರಡು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ಹಾಗೂ ಜೈನ ಕುಟುಂಬದ ಮಾಲೀಕತ್ವದಲ್ಲಿರುವ ಬೆಂಗಳೂರು ಮೂಲದ ಕಂಪನಿ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಸೂರ್ಯ ತಿಲಕ ಇಡಲು ನೆರವಾಗುವ ಆಪ್ಟಿಕಲ್ ಯಂತ್ರವನ್ನು ದಾನವಾಗಿ ನೀಡಿದೆ. ಪ್ರತಿ ರಾಮ ನವಮಿಯಂದು ಇದೇ ಯಂತ್ರದ ಸಹಾಯದಿಂದ ಗರ್ಭಗುಡಿಯ ಒಗಿರುವ ಶ್ರೀರಾಮ ವಿಗ್ರಹದ ಹಣೆಯ ಮೇಲೆ ಸೂರ್ಯ ತಿಲಕವನ್ನು ಇಡಲು ಸಾಧ್ಯವಾಗುತ್ತದೆ. ಶ್ರೀರಾಮನ ಜನ್ಮದಿನವೆಂದು ಪ್ರತಿ ವರ್ಷ ಶ್ರೀರಾಮ ನವಮಿಯನ್ನು ಆಚರಣೆ ಮಾಡಲಾಗುತ್ತದೆ. ಅದೇ ದಿನ ಅಂದಾಜು 3-4 ನಿಮಿಷಗಳ ಕಾಲ ಈ ಯಂತ್ರದ ಸಹಾಯದಿಂದ ಸೂರ್ಯ ರಶ್ಮಿಯನ್ನು ವಿಗ್ರಹದ ಹಣೆಗೆ ಇಡಲು ಸಾಧ್ಯವಾಗಲಿದೆ. 84 ಲಕ್ಷ ರೂಪಾಯಿ ವೆಚ್ಚದ ಈ ಯಂತ್ರವನ್ನು ಆಪ್ಟಿಕ್ಸ್ & ಅಲೈಡ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ (ಆಪ್ಟಿಕಾ) ನಿರ್ಮಾಣ ಮಾಡಿದೆ. ಜಿಗಣಿ ಲಿಂಕ್ ರೋಡ್‌ನಲ್ಲಿರುವ ಈ ಕಂಪನಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮತ್ತು ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್‌ಟಿಟ್ಯೂಟ್ (ಸಿಬಿಆರ್‌ಐ) ನಿಂದ ಯಂತ್ರ ನಿರ್ಮಾಣಕ್ಕಾಗಿ ಸಹಾಯ ಪಡೆದುಕೊಂಡಿದೆ.
ಆಪ್ಟಿಕಾ ಮ್ಯಾನೇಜಿಂಗ್ ಡೈರೆಕ್ಟರ್ ರಾಜೇಂದ್ರ ಕೊಟಾರಿಯಾ ಈ ಬಗ್ಗೆ ಮಾತನಾಡಿದ್ದು, ಸದ್ಭಾವನೆಯಿಂದ ಅತ್ಯಂತ ನಿಖರವಾದ ಆಪ್ಟಿಕಲ್ ಯಂತ್ರವನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಂದಾಜು 500 ವರ್ಷದ ಬಳಿಕ ರಾಮ ಲಲ್ಲಾ ವಾಪಾಸ್ ಮಂದಿರಕ್ಕೆ ಬರುತ್ತಿದ್ದಾರೆ. ಪ್ರಧಾನ ಮಂತ್ರಿಗಳ ವಿಷನ್ ಹಾಗೂ ದೇವಸ್ಥಾನದ ಟ್ರಸ್ಟ್ ಹಾಗೂ ನನ್ನ ಸಂಪೂರ್ಣ ತೃಪ್ತಿಯಿಂದ ಈ ಪ್ರಾಜೆಕ್ಟ್‌ಗೆ ಬೆಂಬಲ ನೀಡಿದ್ದೇನೆ ಎಂದು ಕೊಟಾರಿಯಾ ತಿಳಿಸಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಈ ಯಂತ್ರದ ಕೆಲಸ ನಡೆಯುತ್ತಿತ್ತು. ದೇವಸ್ಥಾನದಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಯ ದಿನವೇ ಈ ಯಂತ್ರವೂ ಅನಾವರಣಗೊಳ್ಳಲಿದೆ. ಪೆರಿಸ್ಕೋಪ್ ರೀತಿಯಲ್ಲಿ ಈ ಯಂತ್ರ ಕೆಲಸ ಮಾಡಲಿದ್ದು, ಟಿಟಾನಿಯಂ, ಹಿತ್ತಾಳೆ ಮತ್ತು ಕಂಚು ಬಳಸಿ ನಿರ್ಮಾಣ ಮಾಡಲಾಗಿದೆ. ದೇವಸ್ಥಾನದ ನಿರ್ಮಾಣದಲ್ಲಿ ಕಬ್ಬಿಣ ನಿಷಿದ್ಧವಾಗಿರುವ ಕಾರಣ ಅದನ್ನು ಎಲ್ಲೂ ಬಳಸಲಾಗಿಲ್ಲ ಎಂದಿದ್ದಾರೆ.
“ರಾಮ ನವಮಿಯ ದಿನದಂದು ಸೂರ್ಯನು ಒಂದು ನಿರ್ದಿಷ್ಟ ಕೋನದಲ್ಲಿದ್ದಾಗ ಪೆರಿಸ್ಕೋಪಿಕ್ ವ್ಯವಸ್ಥೆಯಲ್ಲಿ ಮೊದಲ ಕನ್ನಡಿ ಸೂರ್ಯನ ಬೆಳಕನ್ನು ಪಡೆಯಲಿದೆ. ಈ ಯಂತ್ರವು ಸೂರ್ಯನ ಬೆಳಕನ್ನು ಸೆರೆಹಿಡಿಯುವುದು ಮಾತ್ರವಲ್ಲದೇ, ಸ್ವಯಂಚಾಲಿತವಾಗಿ ಹೊಂದಿಕೊಂಡು, ಪ್ರತಿ ರಾಮನವಮಿಯ ದಿನ ರಾಮನ ವಿಗ್ರಹದ ಹಣೆಯ ಮೇಲೆ ನಿಖರವಾಗಿ ಸೂರ್ಯ ತಿಲಕ ಇಡಲು ನಿರ್ಮಿಸಲಾಗಿದೆ" ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಮೂಲಗಳು ತಿಳಿಸಿವೆ.
ಸೂರ್ಯ ತಿಲಕ ಯಂತ್ರವನ್ನು ನಿರ್ಮಿಸಲು ರಾಮಜನ್ಮಭೂಮಿ ದೇವಸ್ಥಾನ ಟ್ರಸ್ಟ್ ಐಐಎಯನ್ನು ಸಂಪರ್ಕ ಮಾಡಿತ್ತು. ಆದರೆ, ದೇವಾಲಯದ ರಾಜಕೀಯ ಮತ್ತು ಧಾರ್ಮಿಕ ಸಿದ್ಧಾಂತವು ವೈಜ್ಞಾನಿಕ ಮನೋಧರ್ಮದ ಸಂಸ್ಥೆಯ ತತ್ವಗಳಿಗೆ ವಿರುದ್ಧವಾಗಿರುವ ಕಾರಣ, ಆಪ್ಟಿಕಲ್ ಯಂತ್ರದ ವಿನ್ಯಾಸದಲ್ಲಿ ಮಾತ್ರವೇ ತಮ್ಮ ಸೇವೆಗಳನ್ನು ನೀಡಬಹುದು ಎಂದು ಐಐಎ, ದೇವಸ್ಥಾನದ ಟ್ರಸ್ಟ್‌ಗೆ ತಿಳಿಸಿತ್ತು. ಆದ್ದರಿಂದ, ಖಾಸಗಿಯವರಿಂದ ಯಂತ್ರವನ್ನು ವಿನ್ಯಾಸಗೊಳಿಸುವ ನಿಟ್ಟಿನಲ್ಲಿ ಉತ್ತರಾಖಂಡದ ರೂರ್ಕಿಯಲ್ಲಿರುವ ಸಿಬಿಆರ್‌ಐನಿಂದ ಸಲಹೆಯನ್ನು ಕೇಳಲಾಗಿತ್ತು. ಈ ಸಂಸ್ಥೆ ಅಯೋಧ್ಯೆಯಲ್ಲಿ ಯಂತ್ರದ ತಯಾರಿಕೆ ಮತ್ತು ಸ್ಥಾಪನೆಗಾಗಿ ಆಪ್ಟಿಕಾವನ್ನು ನೇಮಿಸಿತ್ತು.
212 ಪಿಲ್ಲರ್, 161 ಅಡಿ ಎತ್ತರ; ಕಬ್ಬಿಣ ಬಳಸದೆ ನಾಗರಶೈಲಿಯಲ್ಲಿ ರಾಮ ಮಂದಿರ ನಿರ್ಮಾಣ!
ಜೈನ ಧರ್ಮವು ಹಿಂದುತ್ವದ ಸಿದ್ಧಾಂತದೊಂದಿಗೆ ಹೇಗೆ ಹೊಂದಿಕೆಯಾಗುತ್ತದೆ ಎಂದು ಆಪ್ಟಿಕಾದ ಕೊಟಾರಿಯಾ ಅವರಿಗೆ ಪ್ರಶ್ನೆ ಮಾಡಿದಾಗ, ರಾಮ ಪ್ರತಿಯೊಬ್ಬರಿಗೂ ಸೇರಿದವನು. ರಾಮನ ತತ್ವಗಳು ದಾನವನ್ನು ಆಧರಿಸಿವೆ. ನನ್ನ ಜೈನ ಧರ್ಮದ ಸಿದ್ಧಾಂತವೂ ದಾನದಿಂದ ಪ್ರೇರಿತವಾಗಿದೆ. ಆದ್ದರಿಂದ ಎರಡೂ ಧರ್ಮದ ಮೂಲ ಒಂದೇ ಆಗಿದೆ ಎಂದು ಹೇಳಿದ್ದಾರೆ.
ಇಲ್ಲಿದೆ ಸಾಕ್ಷಿ, ದೇಶದ ಅತಿದೊಡ್ಡ ತೀರ್ಥಕ್ಷೇತ್ರ-ಪ್ರವಾಸಿ ಸ್ಥಳವಾಗುವ ಹಾದಿಯಲ್ಲಿ ಅಯೋಧ್ಯೆ!