ಇಲ್ಲಿದೆ ಸಾಕ್ಷಿ, ದೇಶದ ಅತಿದೊಡ್ಡ ತೀರ್ಥಕ್ಷೇತ್ರ-ಪ್ರವಾಸಿ ಸ್ಥಳವಾಗುವ ಹಾದಿಯಲ್ಲಿ ಅಯೋಧ್ಯೆ!
ಮನುಕುಲದ ಮೊದಲ ರಾಜಧಾನಿ, ಮರ್ಯಾದಾ ಪುರುಷೋತ್ತಮ ಶ್ರೀರಾಮ ಬಾಳಿ ಬದುಕಿದ ನಗರವಾದ ಅಯೋಧ್ಯೆಗೆ ಮತ್ತೆ ಜೀವಕಳೆ ಬಂದಿದೆ. 500 ವರ್ಷಗಳ ಕಾಲ ತನ್ನ ಮಂದಿರದಿಂದಲೇ ಹೊರಗಿದ್ದ ಬಾಲರಾಮ ಇನ್ನು ಕೆಲವೇ ದಿನಗಳಲ್ಲಿ ವೈಭವೋಪೇತ ಮಂದಿರದಲ್ಲಿ ವಿರಾಜಮಾನನಾಗಲಿದ್ದಾನೆ
ಅಯೋಧ್ಯೆ ಅಂತಿಂಥ ಭೂಮಿಯಲ್ಲ. ಮನುಕುಲದ ಮೊದಲ ರಾಜಧಾನಿ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆಡಳಿತ ಕಂಡಂಥ ನಗರಿ.
ಕಳೆದ 500 ವರ್ಷಗಳಿಂದ ತಾನು ಕಟ್ಟಿ ಬೆಳೆಸಿದಿ ಅಯೋಧ್ಯೆ ನಗರದ ಶ್ರೀರಾಮ ಮಂದಿರದಿಂದಲೇ ಹೊರಗುಳಿದಿದ್ದ ಬಾಲರಾಮ ಈಗ ಮತ್ತೆ ಮಂದಿರ ಸೇರುತ್ತಿದ್ದಾನೆ.
ಜನವರಿ 22 ರಂದು ಅಯೋಧ್ಯೆಯ ವೈಭವೋಪೇತ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ಅದರೊಂದಿಗೆ ದೇಶದ ಸಕಲ ಹಿಂದುಗಳ ಆರಾಧ್ಯಭೂಮಿಯಾಗಿ ಅಯೋಧ್ಯೆ ಬದಲಾಗಲಿದೆ.
ದಕ್ಷಿಣ ಭಾರತದಲ್ಲಿ ವೆಂಕಟೇಶ್ವರನಿಗೆ ತಿರುಪತಿ ದೇವಸ್ಥಾನವಿದ್ದ ಹಾಗೆ, ಉತ್ತರದಲ್ಲಿ ಶ್ರೀರಾಮನಿಗಾಗಿ ನಿರ್ಮಾಣವಾಗುತ್ತಿರುವ ಮಂದಿರ ದೇಶದ ಸಕಲ ಹಿಂದುಗಳ ಹೆಮ್ಮೆಯ ಕ್ಷೇತ್ರವಾಗಲಿದೆ.
ಮೂಲಗಳ ಪ್ರಕಾರ, ಮುಂದಿನ ದಿನಗಳಲ್ಲಿ ಅಯೋಧ್ಯೆ ಭಾರತೀಯರಿಗೆ ದೇಶದ ಅತೀದೊಡ್ಡ ತೀರ್ಥಕ್ಷೇತ್ರ ಹಾಗೂ ಪ್ರವಾಸಿ ತಾಣವಾಗುವ ಎಲ್ಲಾ ಸೂಚನೆಗಳು ಈಗಾಗಲೇ ಸಿಕ್ಕಿವೆ.
ಓಯೋ ರೂಮ್ಸ್‌ಗಳ ಸಂಸ್ಥಾಪಕ ರಿತೇಶ್ ಅಗರ್ವಾಲ್ ಈ ಕುರಿತಾಗಿ ಮಾಡಿರುವ ಟ್ವೀಟ್, ಮುಂಬರುವ ದಿನಗಳಲ್ಲಿ ಅಯೋಧ್ಯೆ ಎಂಥಾ ಮಹತ್ವದ ಸ್ಥಾನವನ್ನು ಹಿಂದುಗಳ ಹೃದಯದಲ್ಲಿ ಪಡೆಯಲಿದೆ ಎನ್ನುವ ಸೂಚನೆ ಸಿಕ್ಕಿದೆ.
ಈ ಕುರಿತಾಗಿ ಹೊಸ ವರ್ಷದ ಸಂಭ್ರಮದಲ್ಲಿ ಟ್ವೀಟ್ ಮಾಡಿರುವ ರಿತೇಶ್ ಅಗರ್ವಾಲ್, ಈ ಬಾರಿ ಜನರು ಯಾವುದೇ ಹಿಲ್ ಸ್ಟೇಷನ್‌ಗಳಿಗಾಗಲಿ, ಬೀಚ್‌ಗಳಿಗಾಗಲಿ ಹೋಗುವ ಆಸಕ್ತಿ ತೋರಿಲ್ಲ ಎಂದು ಹೇಳಿದ್ದಾರೆ.
ಓಯೋ ರೂಮ್ಸ್ ವೆಬ್‌ಸೈಟ್‌ನಲ್ಲಿ ದೇಶದ ಶೆ. 80ಕ್ಕಿಂತ ಅಧಿಕ ಜನರು ಅಯೋಧ್ಯೆಯಲ್ಲಿ ವಾಸ್ತವ್ಯ ಮಾಡುವ ನಿಟ್ಟಿನಲ್ಲಿ ತಮ್ಮ ಸರ್ಚ್ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಒಂದೇ ಪ್ರದೇಶದ ಕುರಿತಾಗಿ ಜನರು ಇಷ್ಟು ಬಾರಿ ಸರ್ಚ್ ಮಾಡಿರುವುದು ಇದೇ ಮೊದಲು ಎಂದು ರಿತೇಶ್ ಅಗರ್ವಾಲ್ ಬರೆದಿದ್ದಾರೆ.
ರಿತೇಶ್ ಅಗರ್ವಾಲ್ ಈ ಟ್ವೀಟ್ ಮಾಡಿದ ಬೆನ್ನಲ್ಲಿಯೇ, ಅಯೋಧ್ಯೆ ಪ್ರವಾಸಿಗರಿಗೆ ಹಾಗೂ ತೀರ್ಥಯಾತ್ರಿಗಳಿಗೆ ದೊಡ್ಡ ಕ್ಷೇತ್ರವಾಗಲಿದೆ ಎನ್ನುವುದು ನಿಚ್ಚಳವಾಗಿದೆ.
ಇನ್ನು ಶ್ರೀರಾಮ ಮಂದಿರ ನಿರ್ಮಾಣದ ಅಂತಿಮ ಹಂತದ ಕಾರ್ಯಗಳು ಭರದಿಂದ ಸಾಗುತ್ತಿದೆ.ಅಯೋಧ್ಯೆ ದೇವಸ್ಥಾನ ನಿರ್ಮಾಣ ಕಾಮಗಾರಿಯ ವಿವರಗಳನ್ನು ಟ್ರಸ್ಟ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಇತ್ತೀಚಿನ ಚಿತ್ರಗಳಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಮುಂದೆ ನಿರ್ಮಾಣವಾಗಲಿರುವ ಭಗವಾನ್ ಹನುಮಾನ್, ಗರುಡ, ಸಿಂಹ ಹಾಗೂ ಆನೆಯ ಕಲ್ಲಿನ ಪ್ರತಿಮೆಗಳನ್ನು ಪೋಸ್ಟ್ ಮಾಡಿತ್ತು.
ಅಯೋಧ್ಯೆಯ ತಟದಲ್ಲಿರುವ ಸರಯೂ ನದಿಯ ದಂಡೆಯ ಮೇಲೆ ವಿಶ್ವದ ಅತಿದೊಡ್ಡ ಶ್ರೀರಾಮನ ಪ್ರತಿಮೆಯನ್ನು ಸ್ಥಾಪನೆ ಮಾಡುವುದಾಗಿ ಉತ್ತರ ಪ್ರದೇಶ ಸರ್ಕಾರ ಘೋಷಣೆ ಮಾಡಿದೆ.
ಅದರೊಂದಿಗೆ ಅಯೋಧ್ಯೆ ಎನ್ನುವ ಪ್ರದೇಶವನ್ನು ಸಂಪೂರ್ಣವಾಗಿ ಬದಲಾಯಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹೊಂದಿದ್ದು ಕಂಡಿದೆ.
ಈಗಾಗಲೇ ಅಯೋಧ್ಯೆಯ ವಿಮಾನನಿಲ್ದಾಣದ ಉದ್ಘಾಟನೆ ನಡೆದಿದ್ದು, ದೇಶದ ಪ್ರಮುಖ ನಗರಗಳಿಂದ ಈಗಾಗಲೇ ಸಂಪರ್ಕ ಕಲ್ಪಿಸಲಾಗಿದೆ.
ಅಯೋಧ್ಯಾಧಾಮ ಜಂಕ್ಷನ್ ಎಂದು ರೈಲ್ವೆ ನಿಲ್ದಾಣಕ್ಕೆ ಮರು ನಾಮಕರಣ ಮಾಡಲಾಗಿದೆ. ರಾಮಮಂದಿರಕ್ಕೆ ಹೋಗುವ ಮಾರ್ಗಗಳ ನವೀಕರಣ ಕಾರ್ಯಗಳು ಸಾಗಿವೆ.
ಅಯೋಧ್ಯೆ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ನಡೆದರೂ, ಮಂದಿರದ ಹೊರ ಆವರಣದಲ್ಲಿ ಕೆಲವೊಂದು ಕಾರ್ಯಗಳು ಮುಂದಿನ ದಿನಗಳಲ್ಲಿ ನಡೆಯಲಿವೆ.
ಇಡೀ ಅಯೋಧ್ಯೆಯಲ್ಲಿ ಹಸಿರಿನಿಂದ ಮುಚ್ಚಿರುವಂತೆ ಮಾಡಲು ಉತ್ತರ ಪ್ರದೇಶ ಸರ್ಕಾರ ಪಣ ತೊಟ್ಟಿದೆ. ಆ ನಿಟ್ಟಿನಲ್ಲಿ ಕೆಲಸಗಳು ಇನ್ನಷ್ಟೇ ಆರಂಭವಾಗಬೇಕಿದೆ.
ಅಯೋಧ್ಯೆಯ ಶ್ರೀರಾಮ ಮಂದಿರದ ಸಂಕೀರ್ಣದಲ್ಲಿ ಶ್ರೀರಾಮ ಮಂದಿರ ಮಾತ್ರವಲ್ಲದೆ, ಇನ್ನೂ ಕೆಲವು ದೇವಸ್ಥಾನಗಳು ಕೂಡ ಇರಲಿದೆ. ಅದರ ಕಾರ್ಯಗಳು ಕೂಡ ಈಗಾಗಲೇ ಆರಂಭವಾಗಿದೆ.