ದೇಶದಲ್ಲಿ 46951 ಕೇಸ್‌, 212 ಸಾವು!| ಸತತ 12ನೇ ದಿನವೂ ಸೋಂಕು ಅಬ್ಬರ| 2 ದಿನದಲ್ಲಿ 90000 ಕೇಸ್‌| 130 ದಿನದಲ್ಲೇ ಗರಿಷ್ಠ ಸೋಂಕು, 72 ದಿನದಲ್ಲೇ ಅತ್ಯಧಿಕ ಸಾವು| ಮಹಾರಾಷ್ಟ್ರ, ಕರ್ನಾಟಕ ಸೇರಿ 5 ರಾಜ್ಯದಲ್ಲೇ 80.5% ಪ್ರಕರಣ

ನವದೆಹಲಿ(ಮಾ.23): ದೇಶದಲ್ಲಿ ಕೊರೋನಾ ವೈರಸ್‌ನ ಅಬ್ಬರ ಸತತ 12ನೇ ದಿನವೂ ಮುಂದುವರಿದಿದ್ದು, ಸೋಮವಾರ ಬೆಳಗ್ಗೆ 8ರವರೆಗಿನ 24 ತಾಸುಗಳ ಅವಧಿಯಲ್ಲಿ ಬರೋಬ್ಬರಿ 46,951 ಪ್ರಕರಣಗಳು ಕಂಡುಬಂದಿವೆ. 212 ಮಂದಿ ಸಾವಿಗೀಡಾಗಿದ್ದಾರೆ. ಭಾನುವಾರ 43846 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಇದರಿಂದಾಗಿ ಎರಡೇ ದಿನಗಳ ಅಂತರದಲ್ಲಿ ದೇಶದಲ್ಲಿ ಬರೋಬ್ಬರಿ 90 ಸಾವಿರ ಮಂದಿಗೆ ಹೊಸದಾಗಿ ಸೋಂಕು ಹಬ್ಬಿದಂತಾಗಿದೆ.

ಹೊಸ ಸೋಂಕಿತರ ಪೈಕಿ ಮಹಾರಾಷ್ಟ್ರ, ಪಂಜಾಬ್‌, ಕರ್ನಾಟಕ, ಗುಜರಾತ್‌ ಹಾಗೂ ಮಧ್ಯಪ್ರದೇಶದಂತಹ ಐದು ರಾಜ್ಯಗಳಲ್ಲೇ ಶೇ.80.5 ಮಂದಿ ಕಂಡು ಬಂದಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ನವೆಂಬರ್‌ 12ರಂದು 47905 ಮಂದಿ ಸೋಂಕುಪೀಡಿತರಾಗಿದ್ದರು. ಅದಾದ ನಂತರ ಸೋಮವಾರ 46951 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಇದು 130 ದಿನದಲ್ಲೇ ಗರಿಷ್ಠ ಪ್ರಮಾಣವಾಗಿದೆ. ಮತ್ತೊಂದೆಡೆ, 24 ತಾಸುಗಳ ಅವಧಿಯಲ್ಲಿ ಸೋಂಕಿಗೆ 212 ಮಂದಿ ಸಾವಿಗೀಡಾಗಿರುವುದು 72 ದಿನಗಳಲ್ಲೇ ಗರಿಷ್ಠವಾಗಿದೆ.

ಹೊಸ ಸೋಂಕಿತರ ಸಂಖ್ಯೆಯೊಂದಿಗೆ ದೇಶದಲ್ಲಿ ಒಟ್ಟಾರೆ ಕೊರೋನಾಪೀಡಿತರ ಸಂಖ್ಯೆ 1,16,46,081ಕ್ಕೆ ಏರಿಕೆಯಾಗಿದೆ. ಈ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,34,646ಕ್ಕೆ ಏರಿದೆ. ಮೃತರ ಸಂಖ್ಯೆ 1,59,967ಕ್ಕೆ ಹೆಚ್ಚಳವಾಗಿದೆ. ಶೇ.98ರವರೆಗೂ ಇರುತ್ತಿದ್ದ ಚೇತರಿಕೆ ಪ್ರಮಾಣ ಶೇ.95.75ಕ್ಕೆ ಇಳಿಮುಖವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ.