ಸೂರತ್(ಸೆ.14)‌: ಕೊರೋನಾಗೆ ತುತ್ತಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೈದ್ಯರೊಬ್ಬರು, ತನ್ನ ಸಮೀಪದ ಇನ್ನೊಬ್ಬ ಸೋಂಕಿತ ವ್ಯಕ್ತಿಗೆ ತುರ್ತಾಗಿ ವೆಂಟಿಲೇಟರ್‌ ಅಳವಡಿಕೆ ಅಗತ್ಯ ಬಿದ್ದಾಗ ತನ್ನ ಆಕ್ಸಿಜನ್‌ ಮಾಸ್ಕ್‌ ಅನ್ನು ಕಳಚಿಟ್ಟು, ಆ ರೋಗಿಗೆ ವೆಂಟಿಲೇಟರ್‌ ಪೈಪ್‌ ಅಳವಡಿಸಿ ಮಾನವೀಯತೆ ಮೆರೆದಿದ್ದಾರೆ. ಆ ಮೂಲಕ ‘ವೈದ್ಯ ನಾರಾಯಣೋ ಹರಿಃ’ ಎಂಬ ನಾಣ್ಣುಡಿಯನ್ನು ಸತ್ಯವಾಗಿಸಿದ್ದಾರೆ. ಸೂರತ್‌ನ ಅರವಳಿಕೆ ತಜ್ಞರಾದ ಡಾ. ಸಾಕೇತ್‌ ಮೆಹ್ತಾ (37) ಎಂಬವರೇ ಈ ಸಾಹಸಿಗ.

ಆಕ್ಸಿಜನ್‌ ಸಿಲೆಂಡರ್‌ ಕೊರತೆ : ಕೊರೋನಾ ಸೋಂಕಿತರ ಸಾವು

ಕೊರೋನಾದಿಂದಾಗಿ ಉಸಿರಾಟದ ತೊಂದರೆಗೊಳಗಾಗಿದ್ದ ಡಾ. ಮೆಹ್ತಾ ಅವರಿಗೆ ವೆಂಟಿಲೇಟರ್‌ ಅಳವಡಿಸಲಾಗಿತ್ತು. ಆ.9ರ ರಾತ್ರಿ ಕೊರೋನಾಗೆ ತುತ್ತಾಗಿ ಗಂಭೀರ ಸ್ಥಿತಿಯಲ್ಲಿದ್ದ 71 ವರ್ಷದ ವೃದ್ಧರೊಬ್ಬರನ್ನು ಅದೇ ಐಸಿಯುನಲ್ಲಿ ದಾಖಲಿಸಲಾಗಿತ್ತು. ದಾಖಲಾದ ಮೂರು ನಿಮಿಷದಲ್ಲಿ ಅವರಿಗೆ ವೆಂಟಿಲೇಟರ್‌ ಅಳವಡಿಕೆ ಮಾಡದಿದ್ದರೆ ಮೆದುಳು ನಿಷ್ಕಿ್ರೕಯವಾಗುವ ಸಾಧ್ಯತೆ ಇತ್ತು.

‘ಅತಿ ಬುದ್ಧಿವಂತಿಕೆ’: ರೋಗ ಇಲ್ಲದಿದ್ದರೂ ಶ್ರೀಮಂತರಿಂದ ಆಸ್ಪತ್ರೆ ಬೆಡ್‌ ಬುಕ್‌!

ಸಾಮಾನ್ಯವಾಗಿ ವೆಂಟಿಲೇಟರ್‌ ಅಳವಡಿಕೆ ಮಾಡುವುದು ಅರವಳಿಕೆ ತಜ್ಞರ ಕೆಲಸ. ಆ ಆಸ್ಪತ್ರೆಯ ಅರವಳಿಕೆ ತಜ್ಞರು ಪಿಪಿಇ ಕಿಟ್‌ ಧರಿಸಿ ಚಿಕಿತ್ಸೆಗೆ ಅಣಿಯಾಗಲು ಕನಿಷ್ಠ 15-20 ನಿಮಿಷ ಬೇಕಿತ್ತು. ಈ ವೇಳೆ ವೃದ್ಧ ರೋಗಿಯ ಸಮೀಪದ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಾ. ಮೆಹ್ತಾ ತಮ್ಮ ಆಕ್ಸಿಜನ್‌ ಮಾಸ್ಕ್‌ ಕಳಚಿಟ್ಟು, ವೃದ್ಧನಿಗೆ ವೆಂಟಿಲೇಟರ್‌ ಪೈಪ್‌ ಅಳವಡಿಸಲು ನೆರವಾಗಿದ್ದಾರೆ. ಆ ಮೂಲಕ ತಮ್ಮ ಪಾಣವನ್ನು ಒತ್ತೆ ಇಟ್ಟು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಮೆಹ್ತಾ ಅವರ ಸಾಹಸ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

ಸದ್ಯ ಒಬ್ಬರೂ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರ ಆರೋಗ್ಯವೂ ಸ್ಥಿರವಾಗಿದೆ.