ಪಕ್ಷದಲ್ಲಿ ಅಧಿಕಾರ ಹಸ್ತಾಂತರಕ್ಕೆ ಮುನ್ನುಡಿ ಬರೆದಿರುವ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ಅಧ್ಯಕ್ಷ ಶರದ್‌ ಪವಾರ್‌, ಪಕ್ಷದ ನೂತನ ಕಾರ್ಯಾಧ್ಯಕ್ಷರನ್ನಾಗಿ ಪಕ್ಷದ ಹಿರಿಯ ನಾಯಕ ಪ್ರಫುಲ್‌ ಪಟೇಲ್‌ ಮತ್ತು ತಮ್ಮ ಪುತ್ರಿ ಸುಪ್ರಿಯಾ ಸುಳೆ ಅವರನ್ನು ನೇಮಕ ಮಾಡಿದ್ದಾರೆ.

ನವದೆಹಲಿ: ಪಕ್ಷದಲ್ಲಿ ಅಧಿಕಾರ ಹಸ್ತಾಂತರಕ್ಕೆ ಮುನ್ನುಡಿ ಬರೆದಿರುವ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ಅಧ್ಯಕ್ಷ ಶರದ್‌ ಪವಾರ್‌, ಪಕ್ಷದ ನೂತನ ಕಾರ್ಯಾಧ್ಯಕ್ಷರನ್ನಾಗಿ ಪಕ್ಷದ ಹಿರಿಯ ನಾಯಕ ಪ್ರಫುಲ್‌ ಪಟೇಲ್‌ ಮತ್ತು ತಮ್ಮ ಪುತ್ರಿ ಸುಪ್ರಿಯಾ ಸುಳೆ ಅವರನ್ನು ನೇಮಕ ಮಾಡಿದ್ದಾರೆ. ಇದೇ ವೇಳೆ, ಚುನಾ​ವ​ಣೆಗೆ ಅಭ್ಯ​ರ್ಥಿ​ಗಳ ಆಯ್ಕೆ ಅಂತಿ​ಮ​ಗೊ​ಳಿ​ಸುವ ಪಕ್ಷದ ಕೇಂದ್ರೀಯ ಚುನಾ​ವಣಾ ಸಮಿ​ತಿಗೆ ಸುಪ್ರಿ​ಯಾ​ರನ್ನು ಮುಖ್ಯಸ್ಥೆ ಎಂದು ನೇಮಿ​ಸಿ​, ಇನ್ನೂ ಕೆಲವು ಹೆಚ್ಚು​ವರಿ ಹೊಣೆ​ಗಾ​ರಿಕೆ ದಯ​ಪಾ​ಲಿ​ಸಿದ್ದಾ​ರೆ. ಈ ಮೂಲಕ ಪಕ್ಷದ ಚುಕ್ಕಾಣಿ ಹಿಡಿಯುವ ಬಹುದೊಡ್ಡ ಆಸೆ ಹೊಂದಿದ್ದ ತಮ್ಮ ಸೋದರ ಸಂಬಂಧಿ, ಪ್ರಭಾವಿ ನಾಯಕ ಅಜಿತ್‌ ಪವಾರ್‌ಗೆ (Ajit Pawar) ಶಾಕ್‌ ನೀಡಿದ್ದಾರೆ.

ಕಳೆದ ತಿಂಗಳು ದಿಢೀರನೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದ ಪವಾರ್‌ ಕಾರ್ಯಕರ್ತರಲ್ಲಿ ತಲ್ಲಣ ಮೂಡಿಸಿದ್ದರು. ಆದರೆ ಬಳಿಕ ಪಕ್ಷದ ನಾಯಕರು, ಕಾರ್ಯಕರ್ತರ ಆಗ್ರಹಕ್ಕೆ ಮಣಿದು ತಮ್ಮ ನಿರ್ಧಾರ ಹಿಂದಕ್ಕೆ ಪಡೆದಿದ್ದರು. ಅದರ ಬೆನ್ನಲ್ಲೇ ಶನಿವಾರ ನಡೆದ ಪಕ್ಷದ 24ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಇಬ್ಬರು ಕಾರ್ಯಾಧ್ಯಕ್ಷರ ನೇಮಕ ಘೋಷಣೆ ಮೂಲಕ ಹೊಸ ತಲೆಮಾರಿಗೆ ಪಕ್ಷದ ಚುಕ್ಕಾಣಿಯನ್ನು ಹಸ್ತಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

ಶರದ್‌ ಪವಾರ್‌ಗೆ ಬಿಜೆಪಿ ಕಾರ್ಯಕರ್ತನಿಂದ್ಲೇ ಜೀವ ಬೆದರಿಕೆ: ಅಜಿತ್ ಪವಾರ್ ಸ್ಫೋಟಕ ಹೇಳಿಕೆ

ಸಭೆ​ಯಲ್ಲೇ ಈ ಮಾಹಿತಿ ನೀಡಿದ ಪವಾರ್‌, ‘ಪ್ರಫುಲ್‌ ಪಟೇಲ್‌, ಎನ್‌ಸಿಪಿಯ ನೂತನ ಕಾರ್ಯಾಧ್ಯಕ್ಷರಾಗಿ ಹೊಣೆ ವಹಿಸಿಕೊಳ್ಳಲಿದ್ದಾರೆ. ಸುಪ್ರಿಯಾ ಸುಳೆ (Supriya sule) ಕೂಡಾ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಅಜಿತ್‌ ಪವಾರ್‌, ಛಗನ್‌ ಭುಜ್‌ಬಲ್‌, ಸುನಿಲ್‌ ತತ್ಕರೆ ಮೊದಲಾದವರ ಸಮ್ಮುಖದಲ್ಲಿ ಘೋಷಿಸಿದರು.

ಸುಪ್ರಿ​ಯಾಗೆ ಹೆಚ್ಚು ಹೊಣೆ:

ಇದೇ ವೇಳೆ ಪುತ್ರಿ ಸುಪ್ರಿಯಾಗೆ ಮಹಾರಾಷ್ಟ್ರ, ಹರ್ಯಾಣ, ಪಂಜಾಬ್‌ ರಾಜ್ಯಗಳ ಉಸ್ತುವಾರಿ ಜೊತೆಗೆ ಮಹಿಳೆಯರು, ಯುವ, ವಿದ್ಯಾರ್ಥಿ ಮತ್ತು ಲೋಕಸಭೆಯ ಉಸ್ತುವಾರಿ ವಹಿಸುವ ಮೂಲಕ, ರಾಜ್ಯದಲ್ಲಿ ಎನ್‌ಸಿಪಿಗೆ ತಮ್ಮ ಬಳಿಕ ತಮ್ಮ ಪುತ್ರಿ ಸುಪ್ರಿಯಾ ನಾಯಕಿ ಎಂಬ ಸಂದೇಶವನ್ನು ಅಜಿತ್‌ ಪವಾರ್‌ಗೆ ಶರದ್‌ ರವಾನಿಸಿದ್ದಾರೆ.

ನಾಲ್ಕೇ ದಿನದಲ್ಲಿ ಶರದ್‌ ಪವಾರ್‌ ಯು-ಟರ್ನ್‌, ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಸಲ್ಲಿಸಿದ್ದ ರಾಜೀನಾಮೆ ವಾಪಸ್‌!

ಅಜಿತ್‌ ಪವಾರ ಅಸ​ಮಾ​ಧಾ​ನ?:

ಈ ದಿಢೀರ್‌ ಘೋಷಣೆಯಿಂದ ತೀವ್ರ ಅಸಮಾಧಾನಗೊಂಡಂತೆ ಕಂಡುಬಂದ ಅಜಿತ್‌ ಪವಾರ್‌, ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡದೇ ಹಾಗೆಯೇ ತೆರಳಿದರು. ಆದರೆ, ಬಳಿಕ ನೇಮಕದ ಕುರಿತು ಟ್ವೀಟ್‌ ಮಾಡಿದ ಅಜಿತ್‌ ಪವಾರ್‌ ‘ಶರದ್‌ ಪವಾರ್‌ ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಎನ್‌ಸಿಪಿ ತನ್ನ ಸಂಸ್ಥಾಪನಾ ದಿನದ ಬೆಳ್ಳಿಹಬ್ಬದ ವರ್ಷದತ್ತ ಕಾಲಿಡುತ್ತಿದೆ. ಈ ಹಂತದಲ್ಲಿ ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಮೌಲ್ಯಯುತ ಕಾಣಿಕೆ ನೀಡಲು ಸಿದ್ಧ. ಪಕ್ಷದ ಪ್ರತಿ ಕಾರ್ಯಕರ್ತ ಮತ್ತು ಪದಾಧಿಕಾರಿಗಳು, ಈ ಗುರಿಯನ್ನು ಮುಟ್ಟುವಲ್ಲಿ ಕಾರ್ಯನಿರ್ವಹಿಸುವ ನಂಬಿಕೆ ಇದೆ. ಹೊಸದಾಗಿ ನೇಮಕಗೊಂಡ ಪದಾಧಿಕಾರಿಗಳಿಗೆ ಮತ್ತೊಮ್ಮೆ ಶುಭಹಾರೈಕೆಗಳು’ ಎಂದು ಪ್ರತಿಕ್ರಿಯಿಸಿದ್ದಾರೆ.

ಪಕ್ಷದ ಹಿನ್ನೆಲೆ:

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi)ಅವರ ವಿದೇಶಿ ಮೂಲ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಶರದ್‌ ಪವಾರ್‌ (Sharad Pawar), ತಾರಿಖ್‌ ಅನ್ವರ್‌ ಮತ್ತು ಪಿ.ಎ.ಸಂಗ್ಮಾ (PA Sangma) ಅವರನ್ನು ಪಕ್ಷದಿಂದ ಹೊರಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಮೂವರು ಸೇರಿ 1999ರಲ್ಲಿ ಎನ್‌ಸಿಪಿ ಸ್ಥಾಪಿಸಿದ್ದರು. ಆದರೂ ಅದೇ ವರ್ಷ ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆಗೂಡಿ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದ್ದರು. 5 ವರ್ಷದ ಬಳಿಕ ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬಂದಾಗ ಪವಾರ್‌ ಮತ್ತು ಪ್ರಫುಲ್‌ ಕೇಂದ್ರ ಸಚಿವರಾಗಿ ನಿಯುಕ್ತಿಗೊಂಡಿದ್ದರು. ಬಳಿಕ ಹಲವು ರಾಜ್ಯಗಳಲ್ಲಿ ಎನ್‌ಸಿಪಿ ತನ್ನ ಬೇರು ಬಿಡುವಲ್ಲಿ ಯಶಸ್ವಿಯಾಗಿತ್ತು. ಆದರೆ 2014ರ ಬಳಿಕ ಪಕ್ಷದ ಹಂತಹಂತವಾಗಿ ತನ್ನ ಪ್ರಾಬಲ್ಯ ಕಳೆದುಕೊಳ್ಳುತ್ತಾ ಬಂದಿತ್ತು. ಜೊತೆಗೆ ಕಳೆದ ಏಪ್ರಿಲ್‌ನಲ್ಲಷ್ಟೇ ಪಕ್ಷ ತನ್ನ ರಾಷ್ಟ್ರೀಯ ಸ್ಥಾನಮಾನವನ್ನೂ ಕಳೆದುಕೊಂಡಿತ್ತು. ಆದಾಗ್ಯೂ ಮಹಾ​ರಾ​ಷ್ಟ್ರ​ದಲ್ಲಿ ಪಕ್ಷ ಈಗಲೂ ನಿರ್ಣಾ​ಯಕ ಪಾತ್ರ ವಹಿ​ಸು​ತ್ತಿದೆ. ಬಿಜೆ​ಪಿ-ಶಿವ​ಸೇನೆ (BJP and Shiv Sena) ನಡುವೆ ಮೈತ್ರಿ​ಭಂಗ ಮಾಡಿ ಶಿವ​ಸೇನೆ ಜತೆ ಎನ್‌​ಸಿಪಿ ಸರ್ಕಾರ ರಚಿ​ಸು​ವಲ್ಲಿ ಪವಾರ್‌ ಪಾತ್ರ ಪ್ರಮು​ಖ​ವಾ​ಗಿ​ತ್ತು.

1999ರಿಂದಲೂ ಪವಾರ್‌ ಅವರ ಜೊತೆ ಕಾರ್ಯನಿರ್ವಹಿಸಿಕೊಂಡೇ ಬಂದಿದ್ದೇನೆ. ಹೀಗಾಗಿ ಇದೇನು ನನಗೆ ಹೊಸದಲ್ಲ. ಆದರೂ, ಕಾರ್ಯಾಧ್ಯಕ್ಷರಾಗಿ ಪದೋನ್ನತಿ ನೀಡಿದ್ದಕ್ಕೆ ಹರ್ಷವಾಗಿದೆ. ಪಕ್ಷವನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನ ಮಾಡುವೆ ಎಂದು ಎನ್‌ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್‌ ಪಟೇಲ್‌ (Praful Patel)ಹೇಳಿದ್ದಾರೆ.

ಕಾರ್ಯ​ಕ​ರ್ತ​ರಿಂದ ನಾನು ಈಲ್ಲಿ​ಯ​ವ​ರೆಗೆ ಬೆಳೆದು ಬಂದಿ​ದ್ದೇನೆ. ಪಕ್ಷ ಬಲ​ಪ​ಡಿ​ಸಲು ನಾನು ಇನ್ನು ಮುಂದೆ ನಿಮ್ಮ ಜತೆ ಜತೆ ಸೇರಿ ಇನ್ನಷ್ಟು ಕೆಲಸ ಮಾಡುವೆ. ಜನ​ಹಿ​ತ​ಕ್ಕಾಗಿ ಎಲ್ಲರ ಜತೆ ಸೇರಿ ದೇಶ ಸೇವೆ ಮಾಡುವೆ. ನನಗೆ ಈ ಹುದ್ದೆ ನೀಡಿದ್ದಕ್ಕೆ ಪವಾರ್‌ ಸಾಹೇ​ಬ​ರಿಗೆ ಆಭಾ​ರಿ​ ಎಂದು ಎನ್‌​ಸಿಪಿ ಕಾರ್ಯಾ​ಧ್ಯ​ಕ್ಷೆ ಸುಪ್ರಿಯಾ ಸುಳೆ ಹೇಳಿದ್ದಾರೆ.