ನವದೆಹಲಿ(ಆ.28): ವಿಶ್ವವಿದ್ಯಾಲಯಗಳ ಅಂತಿಮ ವರ್ಷ/ಸೆಮಿಸ್ಟರ್‌ ಪರೀಕ್ಷೆಗಳನ್ನು ನಡೆಸಬೇಕು, ಸುಮ್ಮನ್ನೇ ಅವರನ್ನು ಪ್ರಮೋಟ್ ಮಾಡಬಾರದು ಎಂದು ಯುಜಿಸಿ ನೀಡಿದ್ದ ಅದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ನ್ಯಾ ಅಶೋಕ್‌ ಭೂಷಣ್‌ ಅವರ ನೇತೃತ್ವದ ತ್ರಿಸದಸ್ಯ ಪೀಠ ಇಂದು ತೀರ್ಪನ್ನು ಪ್ರಕಟಿಸಿದ್ದು, ಸೆ.30ರ ಒಳಗಾಗಿ ದೇಶದೆಲ್ಲೆಡೆ ಅಂತಿಮ ವರ್ಷದ ಪರೀಕ್ಷೆಯನ್ನು ನಡೆಸುವಂತೆ ಯುಜಿಸಿ ಜು.6ರಂದು ಎಲ್ಲಾ ವಿಶ್ವವಿದ್ಯಾಲಯಗಳಿಗೆ ಸೂಚನೆಯನ್ನು ಅನುಮೋದಿಸಿದೆ.  ಆದರೆ ರಾಜ್ಯಗಳು ಕೊರೋನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸೆಪ್ಟೆಂಬರ್ 30ರೊಳಗಾಗಿ ಯಾವಾಗ ಬೇಕಾದರೂ ಪರೀಕ್ಷೆ ನಡೆಸುವ ಸ್ವಾತಂತ್ರವನ್ನು ಈ ತ್ರಿಸದಸ್ಯ ಪೀಠ ಆದೇಶ ನೀಡಿದೆ. 

ರಾಜ್ಯಗಳು ವಿದ್ಯಾರ್ಥಿಗಳ ಈ ಹಿಂದಿನ ಅಂಕಗಳು ಅಥವಾ ಇಂಟರ್ನಲ್ ಅಂಕಗಳನ್ನು ಆಧರಿಸಿ ಅವರನ್ನು ಪ್ರಮೋಟ್ ಮಾಡಬಾರದು. ಆದರೆ ಸೆಪ್ಟೆಂಬರ್ 30ರ ನಂತರ ಪರೀಕ್ಷೆ ನಡೆಸುವುದಾದರೆ ಯುಜಿಪಿಯ ಜತೆ ಮಾತುಕತೆ ನಡೆಸಬೇಕು ಎಂದು ದೇಶದ ಸರ್ವೊಚ್ಚ ನ್ಯಾಯಾಲಯ ಸೂಚಿಸಿದೆ.

JEE-NEET ವಿಚಾರದಲ್ಲೂ ರಾಜಕೀಯ ಮಾಡುತ್ತಿರುವವರು ಯಾರು? ಮೋದಿಗೆ ಬಂದ ಪತ್ರ

ಸೆ.30ರ ಒಳಗಾಗಿ ದೇಶದೆಲ್ಲೆಡೆ ಅಂತಿಮ ವರ್ಷದ ಪರೀಕ್ಷೆಯನ್ನು ನಡೆಸುವಂತೆ ಯುಜಿಸಿ ಜು.6ರಂದು ಎಲ್ಲಾ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿತ್ತು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಒಂದು ವೇಳೆ ಪರೀಕ್ಷೆಗಳು ನಡೆಯದೇ ಹೋದರೆ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ತನ್ನ ನಡೆಯನ್ನು ಯುಜಿಸಿ ಸಮರ್ಥಿಸಿಕೊಂಡಿತ್ತು. 

ಇದರ ವಿರುದ್ಧ ಹಲವರು ಸುಪ್ರೀಂಕೋರ್ಟ್‌ ಕದ ಬಡಿದಿದ್ದರು.ಕೊರೋನಾ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ನಡೆಸಲು ವಿರೋಧ ವ್ಯಕ್ತಪಡಿಸಿರುವ ದೆಹಲಿ, ಮಹಾರಾಷ್ಟ್ರ, ಒಡಿಶಾ, ಪಂಜಾಬ್‌, ಹರ್ಯಾಣ ಮತ್ತು ಮಧ್ಯ ಪ್ರದೇಶ ರಾಜ್ಯಗಳು ವಿಶ್ವವಿದ್ಯಾಲಯಗಳ ಅಂತಿಮ ವರ್ಷದ ಪರೀಕ್ಷೆಗಳು ಸೇರಿದಂತೆ ಎಲ್ಲಾ ಪರೀಕ್ಷೆಗಳನ್ನು ರದ್ದುಗೊಳಿಸಿವೆ. ಇದು ವಿದ್ಯಾರ್ಥಿಗಳ ಗೊಂದಲಕ್ಕೆ ಕಾರಣವಾಗಿದೆ.