ಬಾಬಾ ರಾಮ್‌ದೇವ್ ಕ್ಷಮೆ ಒಪ್ಪಿಕೊಳ್ಳಲು ನಿರಾಕರಿಸಿದ ಸುಪ್ರೀಂ, ಮತ್ತೊಂದು ಸಮನ್ಸ್ ಜಾರಿ!
ದಿಕ್ಕುತಪ್ಪಿಸುವಂಥ ಜಾಹೀರಾತು ಪ್ರಕಟಿಸಿದ್ದ ಯೋಗ ಗುರು ಬಾಬಾ ರಾಮ್‌ದೇವ್ ಕೇಳಿದ್ದ ಕ್ಷಮೆಯನ್ನು ಒಪ್ಪಿಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅದರೊಂದಿಗೆ ಅವರಿಗೆ ಇನ್ನೊಂದು ಸಮನ್ಸ್ ಜಾರಿ ಮಾಡಿದೆ.
ನವದೆಹಲಿ (ಏಪ್ರಿಲ್ 2): ಸುಪ್ರೀಂ ಕೋರ್ಟ್ ಮತ್ತೊಮ್ಮೆ ಯೋಗ ಗುರು ಬಾಬಾ ರಾಮ್‌ದೇವ್ ಮೇಲೆ ಪ್ರಹಾರ ಮಾಡಿದೆ. ದಿಕ್ಕುತಪ್ಪಿಸುವಂಥ ಜಾಹೀರಾತು ಪ್ರಕಟಿಸಿದ ಪ್ರಕರಣದಲ್ಲಿ ಖುದ್ದಾಗಿ ಕೋರ್ಟ್‌ನಲ್ಲಿ ಹಾಜರಿರಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಆದರೆ, ಈ ಸೂಚನೆಯನ್ನು ಪಾಲಿಸಲು ಬಾಬಾ ರಾಮ್‌ದೇವ್ ನಿರಾಕರಿಸಿದ್ದಾರೆ. ರಾಮ್‌ದೇವ್ ಮತ್ತು ಪತಂಜಲಿ ಆಯುರ್ವೇದ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರ ವಿರುದ್ಧ ಯಾಕೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಬಾರದು ಎಂದು ಪ್ರಶ್ನಿಸಿ ಕಳಿಸಲಾಗಿದ್ದ ಶೋಕಾಸ್ ನೋಟಿಸ್‌ಗೆ ಸಂಬಂಧಪಟ್ಟಂತೆ ಇವರಿಬ್ಬರೂ ಸುಪ್ರೀಂ ಕೋರ್ಟ್‌ಗೆ ಹಾಜರಾಗಿದ್ದರು. ಈ ಹಂತದಲ್ಲಿ ರಾಮ್‌ದೇವ್, ಪತಂಜಲಿ ಆಯುರ್ವೇದ ತನ್ನ ಕ್ರಮವನ್ನು ವಿವರಿಸಲು ನ್ಯಾಯಾಲಯವು ಒಂದು ಅಂತಿಮ ಅವಕಾಶವನ್ನು ನೀಡಿದೆ. "ಕೆಲವೊಮ್ಮೆ ವಿಷಯಗಳು ತಾರ್ಕಿಕ ಅಂತ್ಯ ತಲುಪಬೇಕು" ಎಂದು ನ್ಯಾಯಾಲಯವು ಈ ಪ್ರಕರಣದಲ್ಲಿ ಹೊಸ ಅಫಿಡವಿಟ್ ಸಲ್ಲಿಸಲು ಹೆಚ್ಚಿನ ಸಮಯವನ್ನು ನೀಡುವಂತೆ ಪತಂಜಲಿಯ ಮನವಿಗೆ ಪ್ರತಿಕ್ರಿಯಿಸಿತು.
ತನ್ನ ಆದೇಶಗಳನ್ನು ಸಾರಾಸಗಟಾಗಿ ಧಿಕ್ಕರಿಸಿದ್ದ ಬಾಬಾ ರಾಮ್‌ದೇವ್, ಇದಕ್ಕೆ ಅರ್ಧಪುಟದ ಕ್ಷಮಾಪಣೆಯನ್ನೂ ಕೇಳಿದ್ದರು. ಇದನ್ನು ಒಪ್ಪಿಕೊಳ್ಳಲು ಕೋರ್ಟ್ ನಿರಾಕಸಿದೆ. ಬಾಬಾ ರಾಮ್‌ದೇವ್ ಅವರು ಸಲ್ಲಿಕೆ ಮಾಡಿರುವ ಕ್ಷಮಾಪಣೆಯನ್ನು ಒಪ್ಪಲು ನಾವು ಸಿದ್ಧವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದು ನ್ಯಾಯಾಂಗಕ್ಕೆ ತೋರುತ್ತಿರುವ ಅಗೌರವ. ಕೇವಲ ಸುಪ್ರೀಂ ಕೋರ್ಟ್ ಮಾತ್ರವಲ್ಲ, ದೇಶಾದ್ಯಂತ ನ್ಯಾಯಾಲಯಗಳು ನೀಡುವ ಪ್ರತಿಯೊಂದು ಆದೇಶವನ್ನು ಗೌರವಿಸಬೇಕು" ಎಂದು ಪೀಠ ಹೇಳಿದೆ.
ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ (ಮ್ಯಾಜಿಕ್ ರೆಮಿಡೀಸ್) ಕಾಯಿದೆ ಪುರಾತನವಾದುದು ಎಂಬ ಅಫಿಡವಿಟ್‌ನಲ್ಲಿ ಪತಂಜಲಿ ಎಂಡಿ ಹೇಳಿಕೆಯನ್ನು ಸಹ ನ್ಯಾಯಾಲಯ ಟೀಕೆ ಮಾಡಿದೆ. ವೈದ್ಯಕೀಯ ಕ್ಷೇತ್ರದ ಇತರ ಕ್ಷೇತ್ರಗಳನ್ನು ಅವಹೇಳನ ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಪೀಠ ಹೇಳಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದ ಬಗ್ಗೆ ತರಾಟೆಗೆ ತೆಗೆದುಕೊಂಡಿದೆ. 'ಅಲೋಪತಿಯಲ್ಲಿ ಕೋವಿಡ್-19ಗೆ ಯಾವುದೇ ಪರಿಹಾರವಿಲ್ಲ ಎಂದುಕೊಂಡು ಪತಂಜಲಿ ಸಂಸ್ಥೆ ಮಾರುಕಟ್ಟೆಗೆ ಹೋಗುವಾಗ ಕೇಂದ್ರ ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿದ್ದೇಕೆ ಎಂದು ಕೇಂದ್ರವನ್ನು ಪ್ರಶ್ನೆ ಮಾಡಿದೆ.
ತನ್ನ ಆದೇಶದ ನಂತರ ಉತ್ತರಾಖಂಡ ಸರ್ಕಾರವು ಕಾರ್ಯರೂಪ ಬಂದು ಎಚ್ಚರಿಕೆಯನ್ನು ನೀಡಿದೆ ಎಂದು ನ್ಯಾಯಾಲಯ ಗಮನಿಸಿದೆ. "ಡ್ರಗ್ಸ್ ಆಕ್ಟ್ ಅಡಿಯಲ್ಲಿ ಎಚ್ಚರಿಕೆ ನೀಡಲು ಯಾವುದೇ ಅವಕಾಶವಿಲ್ಲ, "ಎಚ್ಚರಿಕೆ" ಹೇಗೆ ನೀಡಲಾಗುತ್ತದೆ?" ಎಂದು ನ್ಯಾಯಾಲಯ ಹೇಳಿದೆ.ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಕೊರೋನಾವೈರಸ್ ವ್ಯಾಪಕವಾದ ಸಂದರ್ಭದಲ್ಲಿ, ಪತಂಜಲಿ ಕೋವಿಡ್ ಚಿಕಿತ್ಸೆ ಉತ್ಪನ್ನಗಳನ್ನು ಸೂಕ್ತ ದಾಖಲೆಗಳಿಲ್ಲದೆ ಬೆಂಬಲಿಸಲು ಸಾಧ್ಯವಿಲ್ಲ ಎಂದು ಕೇಂದ್ರದ ಸಮಿತಿಯು ಹೇಳಿತ್ತು.
ದಾರಿ ತಪ್ಪಿಸುವ ಜಾಹೀರಾತು: ಸುಪ್ರೀಂ ಮುಂದೆ ಬೇಷರತ್ ಕ್ಷಮೆ ಯಾಚಿಸಿದ ಬಾಬಾ ರಾಮ್‌ದೇವ್‌ರ ಪತಂಜಲಿ!
ಮಾರ್ಚ್ 19 ರಂದು, ಸಂಸ್ಥೆಯ ಉತ್ಪನ್ನಗಳ ಜಾಹೀರಾತುಗಳು ಮತ್ತು ಅವುಗಳ ಔಷಧೀಯ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನೀಡಲಾದ ನೋಟಿಸ್‌ಗೆ ಪ್ರತಿಕ್ರಿಯಿಸಲು ಕಂಪನಿಯು ವಿಫಲವಾದ ನಂತರ ಸುಪ್ರೀಂ ಕೋರ್ಟ್ ರಾಮ್‌ದೇವ್ ಮತ್ತು ಬಾಲಕೃಷ್ಣ ಅವರಿಗೆ ಖುದ್ದು ಹಾಜರಾಗುವಂತೆ ಸೂಚಿಸಿತು. ನವೆಂಬರ್ 21, 2023 ರಂದು ನ್ಯಾಯಾಲಯಕ್ಕೆ ನೀಡಿದ ಅಂಡರ್‌ಟೇಕಿಂಗ್‌ನಲ್ಲಿ ಪತಂಜಲಿ ನೀಡಿದ ಜಾಹೀರಾತುಗಳು ರಾಮ್‌ದೇವ್ ಅವರ ಅನುಮೋದನೆಯನ್ನು ಪ್ರತಿಬಿಂಬಿಸುವುದರಿಂದ ಅವರಿಗೆ ಶೋಕಾಸ್ ನೋಟಿಸ್ ನೀಡುವುದು ಸೂಕ್ತವೆಂದು ಪರಿಗಣಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಬಾಬಾ ರಾಮ್‌ದೇವ್ ಮೇಲೆ ಸುಪ್ರೀಂ ಪ್ರಹಾರ, ಪತಂಜಲಿ ಜಾಹೀರಾತಿಗೆ ಸಂಪೂರ್ಣ ನಿಷೇಧ!