ನವದೆಹಲಿ (ಡಿ.18):  ಕೇಂದ್ರ ಸರ್ಕಾರದ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಹೊರವಲಯದಲ್ಲಿ ರೈತರು 22 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಸುಪ್ರೀಂ ಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಬಿಕ್ಕಟ್ಟು ಬಗೆಹರಿಸಲು ಕೃಷಿ ತಜ್ಞರು ಹಾಗೂ ರೈತ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ‘ನಿಷ್ಪಕ್ಷ ಹಾಗೂ ಸ್ವತಂತ್ರ’ ಸಮಿತಿ ರಚಿಸಲು ಚಿಂತನೆ ನಡೆಸುತ್ತಿರುವುದಾಗಿ ಹೇಳಿದೆ. ಅಲ್ಲದೆ, ಸದ್ಯಕ್ಕೆ ಈ ಕೃಷಿ ಕಾಯ್ದೆಗಳ ಜಾರಿಯನ್ನು ತಡೆಹಿಡಿಯಿರಿ ಎಂದೂ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

ರೈತರ ಪ್ರತಿಭಟನೆಯಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಹಾಗೂ ಕೊರೋನಾ ಹರಡುವ ಭೀತಿ ಹೆಚ್ಚಿದೆ ಎಂದು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಹಲವಾರು ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ಅವರ ಪೀಠ, ರೈತರ ಸ್ಥಿತಿ ಹಾಗೂ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಗುರುವಾರ ತೀವ್ರ ಆತಂಕ ವ್ಯಕ್ತಪಡಿಸಿತು. ‘ಪ್ರತಿಭಟಿಸಲು ರೈತರಿಗೆ ಹಕ್ಕಿದೆ. ಆದರೆ, ಪ್ರತಿಭಟಿಸಲು ಅವರಿಗಿರುವ ಹಕ್ಕಿನಿಂದ ಮುಕ್ತವಾಗಿ ಸಂಚರಿಸಲು ಹಾಗೂ ಅಗತ್ಯ ವಸ್ತುಗಳನ್ನು ಪಡೆಯಲು ಇತರರಿಗೆ ಇರುವ ಹಕ್ಕಿನ ಉಲ್ಲಂಘನೆಯಾಗಬಾರದು. ಪ್ರತಿಭಟನೆಯೆಂದರೆ ಇಡೀ ನಗರವನ್ನು ಬಂದ್‌ ಮಾಡುವುದಲ್ಲ. ರೈತರ ಸ್ಥಿತಿ ನೋಡಿ ನಾವು ಆತಂಕಗೊಂಡಿದ್ದೇವೆ. ನಾವೂ ಭಾರತೀಯರೇ. ಆದರೆ, ಇತ್ತೀಚಿನ ಬೆಳವಣಿಗೆಗಳನ್ನು ನೋಡಿ ಭೀತಿಯಾಗುತ್ತಿದೆ. ಪ್ರತಿಭಟಿಸುವ ರೈತರು ಕೇವಲ ಗುಂಪಲ್ಲ (ಮಾಬ್‌)’ ಎಂದೂ ಹೇಳಿತು

.ರೈತರಿಗೆ ಪ್ರತಿಭಟಿಸುವ ಹಕ್ಕು ಇದೆ, ಇದನ್ನು ಕಸಿದುಕೊಳ್ಳಲ್ಲ: ಸುಪ್ರೀಂ ಮಹತ್ವದ ತೀರ್ಪು! ...

ಕೇಂದ್ರ ಸರ್ಕಾರ ನಡೆಸುತ್ತಿರುವ ಮಾತುಕತೆಯಿಂದ ಯಾವುದೇ ಪ್ರಯೋಜನವಾಗದಿರುವುದನ್ನು ಮನಗಂಡ ನ್ಯಾಯಪೀಠ, ಪ್ರತಿಭಟನೆ ನಡೆಸುತ್ತಿರುವ ರೈತರೂ ಸೇರಿದಂತೆ ಸಂಬಂಧಪಟ್ಟಎಲ್ಲರ ಅಭಿಪ್ರಾಯ ಪಡೆದು ತಜ್ಞರ ಸಮಿತಿ ರಚಿಸುತ್ತೇವೆ. ಅದಕ್ಕೂ ಮುನ್ನ ತಮ್ಮ ಅಹವಾಲು ಹೇಳಿಕೊಳ್ಳುವಂತೆ ಪ್ರತಿಭಟನಾನಿರತ ರೈತರಿಗೆ ನೋಟಿಸ್‌ ನೀಡುತ್ತೇವೆ. ಹೀಗಾಗಿ ಸದ್ಯಕ್ಕೆ ಕಾಯ್ದೆಗಳ ಜಾರಿಯನ್ನು ತಡೆಹಿಡಿಯಿರಿ ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿತು. ಈ ಪ್ರಸ್ತಾಪವನ್ನು ವಿರೋಧಿಸಿದ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌, ಕಾಯ್ದೆ ಜಾರಿ ತಡೆಹಿಡಿದರೆ ರೈತರು ಮಾತುಕತೆಗೆ ಬರುವುದಿಲ್ಲ ಎಂದರು. ಆಗ ಸುಪ್ರೀಂ ಕೋರ್ಟ್‌, ‘ನಾವು ಕಾಯ್ದೆಗಳ ಜಾರಿ ನಿಲ್ಲಿಸಲು ಹೇಳುತ್ತಿಲ್ಲ, ಸದ್ಯಕ್ಕೆ ಜಾರಿಗೊಳಿಸುವುದನ್ನು ತಡೆಹಿಡಿಯಿರಿ’ ಎಂದು ಹೇಳಿತು.

ನಾವು ಕಾಯ್ದೆಗಳ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಪ್ರತಿಭಟನೆ ಮತ್ತು ಮುಕ್ತವಾಗಿ ಓಡಾಡುವುದಕ್ಕೆ ಜನರಿಗಿರುವ ಹಕ್ಕು ಇವುಗಳ ಬಗ್ಗೆ ಮಾತ್ರ ನಿರ್ಧರಿಸುತ್ತೇವೆ ಎಂದು ಕೋರ್ಟ್‌ ತಿಳಿಸಿತು.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನಾಕಾರರು ಇತರರ ಹಕ್ಕುಗಳನ್ನು ಮೊಟಕುಗೊಳಿಸದಂತೆ ನೋಡಿಕೊಳ್ಳುವ ಅಧಿಕಾರವನ್ನು ಪೊಲೀಸರು ಹಾಗೂ ಅಧಿಕಾರಿಗಳಿಗೆ ನೀಡಲಾಗಿದೆ. ರೈತರು ಅಷ್ಟುದೊಡ್ಡ ಸಂಖ್ಯೆಯಲ್ಲಿ ನಗರಕ್ಕೆ ಪ್ರವೇಶಿಸಲು ಅವಕಾಶ ನೀಡಿದರೆ ಅವರು ಹಿಂಸಾಚಾರ ನಡೆಸುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ? ಅಂತಹ ಗ್ಯಾರಂಟಿ ಕೋರ್ಟ್‌ಗಂತೂ ಇಲ್ಲ. ಹಿಂಸಾಚಾರ ಏರ್ಪಟ್ಟರೆ ತಡೆಯುವ ಶಕ್ತಿಯೂ ಕೋರ್ಟ್‌ಗಿಲ್ಲ. ಆ ಕೆಲಸವನ್ನು ಪೊಲೀಸರು ಮತ್ತು ಅಧಿಕಾರಿಗಳೇ ಮಾಡಬೇಕು. ಪ್ರತಿಭಟಿಸುವ ಹಕ್ಕು ಅಂದರೆ ಇಡೀ ನಗರವನ್ನು ಬಂದ್‌ ಮಾಡುವ ಹಕ್ಕು ಅಲ್ಲ.

- ಸುಪ್ರೀಂ ಕೋರ್ಟ್‌