ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಘೋಷಿಸುವ ಉಚಿತ ಕೊಡುಗೆಗಳ ಬಗ್ಗೆ ಸುಪ್ರೀಂಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಂತಹ ಯೋಜನೆಗಳು ದೇಶದ ಆರ್ಥಿಕತೆಗೆ ಮಾರಕವಾಗಿದ್ದು, ಅರ್ಹರಿಗೆ ಮಾತ್ರ ಸೌಲಭ್ಯ ಸಿಗಬೇಕು ಮತ್ತು ಸರ್ಕಾರಗಳು ಉದ್ಯೋಗ ಸೃಷ್ಟಿಗೆ ಗಮನಹರಿಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ನವದೆಹಲಿ: ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಘೋಷಣೆ ಮಾಡುವ ಉಚಿತ ಕೊಡುಗೆಗೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌, ದೇಶದ ದೀರ್ಘಕಾಲೀನ ಆರ್ಥಿಕಾಭಿವೃದ್ಧಿಗೆ ಅಡ್ಡಿಯಾಗಿರುವ ಇಂಥ ಯೋಜನೆಗಳನ್ನು ಮರುಪರಿಶೀಲಿಸುವ ಸಮಯ ಬಂದಿದೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದೆ.

ಉಚಿತ ಕೊಡುಗೆಗಳು ಅರ್ಹರಿಗೆ ಸಿಗಬೇಕೇ ವಿನಃ ಅಗತ್ಯವಿಲ್ಲದದವರಿಗೂ ನೀಡುವುದು ಸರಿಯಲ್ಲ. ಇಂಥ ನೀತಿಗಳ ಪರಿಣಾಮವೇ ಇಂದು ಹಲವು ರಾಜ್ಯ ಸರ್ಕಾರಗಳು ಕೊರತೆ ಬಜೆಟ್‌ ಎದುರಿಸುತ್ತಿರುವೆ. ಸರ್ಕಾರಗಳು ಜನರಿಗೆ ಉದ್ಯೋಗದ ಅವಕಾಶ ಕಲ್ಪಿಸಬೇಕೇ ಹೊರತೂ ಕೇವಲ ಉಚಿತ ಯೋಜನೆ ಘೋಷಣೆ ಮಾಡುವುದಲ್ಲ. ಸದ್ಯ ರಾಜ್ಯ ಸರ್ಕಾರಗಳು ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡುವುದುನ್ನು ಬಿಟ್ಟು ಕೇವಲ ವೇತನ ಉದ್ಯೋಗಿಗಳಿಗೆ ವೇತನ ವಿತರಣೆ ಮತ್ತು ಬೃಹತ್ ಉಚಿತ ಕೊಡುಗೆ ಯೋಜನೆಗೆ ಸೀಮಿತವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರನ್ನೊಳಗೊಂಡ ಪೀಠ ಆಕ್ಷೇಪ ವ್ಯಕ್ತಪಡಿಸಿದೆ.

ಏನಿದು ಪ್ರಕರಣ?:

ತಮಿಳುನಾಡು ಸರ್ಕಾರ ರಾಜ್ಯದ ಎಲ್ಲ ಜನತೆಗೂ ಉಚಿತ ವಿದ್ಯುತ್‌ ಪೂರೈಕೆಗೆ ನಿರ್ಧರಿಸಿದೆ. ಆದರೆ ಉಚಿತ ಕೊಡುಗೆ ನೀಡಿದರೆ ಅದು ಸಾವಿರಾರು ಕೋಟಿ ರು. ನಷ್ಟ ಅನುಭವಿಸಬೇಕಾಗುತ್ತದೆ. ಆದರೆ 2024ರಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ವಿದ್ಯುತ್‌ ತಿದ್ದುಪಡಿ ಕಾಯ್ದೆ, ವಿದ್ಯುತ್ ಉತ್ಪಾದನೆ ಮತ್ತು ವಿತರಣೆ ಕಂಪನಿಗಳು ಹೀಗೆ ಭಾರೀ ಪ್ರಮಾಣದ ನಷ್ಟಕ್ಕೆ ಒಳಗಾಗಲು ಬಿಡುವುದಿಲ್ಲ. ಇದನ್ನು ಪ್ರಶ್ನಿಸಿ ತಮಿಳುನಾಡು ವಿದ್ಯುತ್‌ ವಿತರಣಾ ಸಂಸ್ಥೆ ಮೇಲ್ಮನವಿ ಸಲ್ಲಿಸಿತ್ತು.

ಸುಪ್ರೀಂ ಚಾಟಿ:

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ‘ಚುನಾವಣೆ ಬಂದರೆ ಸಾಕು ವಿವಿಧ ರಾಜ್ಯ ಸರ್ಕಾರಗಳು ಉಚಿತ ಕೊಡುಗೆ ಘೋಷಣೆ ಮಾಡುತ್ತವೆ. ಇಂಥ ಪ್ರವೃತ್ತಿಯನ್ನು ಎಷ್ಟು ದಿನ ಮುಂದುವೆಸಿಕೊಂಡಲು ಹೋಗಲು ಸಾಧ್ಯ. ಇದರಿಂದ ದೇಶದ ದೀರ್ಘಕಾಲದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುವುದಿಲ್ಲವೇ’ ಎಂದು ಕಿಡಿಕಾರಿತು. ಯಾರು ಇಂಥ ಯೋಜನೆಗಳಿಗೆ ಹಣ ಪಾವತಿಸಲು ಅರ್ಹರಿದ್ದಾರೋ? ಇಲ್ಲವೋ? ಎಂಬುದನ್ನು ಪರಿಗಣಿಸದೇ ಎಲ್ಲರಿಗೂ ಉಚಿತವಾಗಿ ಯೋಜನೆ ಘೋಷಿಸುವುದು ಓಲೈಕೆ ಅಲ್ಲದೆ ಮತ್ತೇನೂ ಅಲ್ಲ. ಇಂಥ ಪ್ರವೃತ್ತಿ ದೇಶದ ಬೆಳವಣಿಗೆ ಪೂರಕವಾಗಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿತು.

ಇದೇ ವೇಳೆ ಜನರ ಹಿತಾಸಕ್ತಿಯ ದೃಷ್ಟಿಯಿಂದ ರಾಜ್ಯ ಸರ್ಕಾರ, ಜನರ ವಿದ್ಯುತ್‌ ಬಿಲ್‌ ತಾನು ಭರಿಸುತ್ತಿದೆ ಎಂದು ತಮಿಳುನಾಡು ಸರ್ಕಾರದ ಪರ ವಕೀಲರ ವಾದಕ್ಕೆ ತಿರುಗೇಟು ನೀಡಿದ ನ್ಯಾಯಪೀಠ, ‘ರಾಜ್ಯದ ಜನರ ಹಿತದೃಷ್ಟಿಯಿಂದ ನೀವು ಜನರ ವಿದ್ಯುತ್‌ ಬಿಲ್‌ ಹೊರೆಯನ್ನು ಹೊರುತ್ತಿದ್ದೀರಾ? ನಾವು ಕೇವಲ ತಮಿಳುನಾಡಿನ ವಿಷಯ ಮಾತ್ರ ಮಾತನಾಡುತ್ತಿಲ್ಲ. ಇಡೀ ದೇಶದ ಬಗ್ಗೆ ಮಾತನಾಡುತ್ತಿದ್ದೇವೆ. ಇಡೀ ದೇಶದಲ್ಲೀಗ ಇಂಥದ್ದೇ ಪ್ರವೃತ್ತಿ ಕಂಡುಬರುತ್ತಿದೆ. ಸರ್ಕಾರದ ಸೇವೆಗೆ ಹಣ ಕೊಡಲು ಅರ್ಹ ವ್ಯಕ್ತಿಗೂ, ಅರ್ಹನಿಲ್ಲದ ವ್ಯಕ್ತಿಗೂ ಭೇದ ಇಲ್ಲ ಎಂದರೇನು? ಅರ್ಹರಿಗೆ ಯೋಜನೆ ಲಾಭ ಒದಗಿಸುವುದು ಸರಿ. ಆದರೆ ಹಣ ಪಾವತಿಗೆ ಶಕ್ತನಿರುವ ವ್ಯಕ್ತಿಗೂ ನೀವು ಉಚಿತ ಕೊಡುಗೆ ಘೋಷಿಸುತ್ತೀರಿ ಎಂದರೆ ಇದು ಓಲೈಕೆಯಲ್ಲದೇ ಮತ್ತೇನು? ಎಂದು ಪ್ರಶ್ನಿಸಿತು.

ದೇಶಾದ್ಯಂತ ನಡೆಯುತ್ತಿರುವ ಬೆಳವಣಿಗೆ ನಿಜಕ್ಕೂ ಗಂಭೀರವಾಗಿದೆ. ಕೆಲವು ರಾಜ್ಯಗಳು ಮಿಗತೆ ಬಜೆಟ್‌ ಹೊಂದಿವೆ. ಅದು ನೀವು ಸಾರ್ವಜನಿಕರಿಗಾಗಿ ರಸ್ತೆ, ಆಸ್ಪತ್ರೆ, ಶಾಲೆ ನಿರ್ಮಿಸಬೇಕಾದ ಬಾಧ್ಯತೆಯನ್ನು ತೋರಿಸುವುದಿಲ್ಲವೇ? ಅದನ್ನು ಬಿಟ್ಟು ಚುನಾವಣೆ ಸಮಯದಲ್ಲಿ ಉಚಿತ ಬಟ್ಟೆ, ಆಹಾರ ಘೋಷಣೆ ಮಾಡುತ್ತಾ ಕುಳಿತರೆ ಜನತೆ ಸಂಭ್ರಮದಿಂದ ಸ್ವೀಕರಿಸುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿತು.

ದೇಶದ ಬಹುತೇಕ ರಾಜ್ಯಗಳು ಆದಾಯ ಕೊರತೆ ಹೊಂದಿವೆ. ಆದರೂ ಕೂಡಾ ಅವು ಅಭಿವೃದ್ಧಿ ಕೆಲಸಗಳನ್ನು ಬದಿಗೊತ್ತಿ ಇಂಥ ಉಚಿತ ಘೋಷಣೆಗಳನ್ನು ಮಾಡುತ್ತಲೇ ಇವೆ. ಸರ್ಕಾರಗಳು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕೇ ಹೊರತೂ ಅರ್ಹರಿಗೂ ಉಚಿತ ಆಹಾರ, ಬಟ್ಟೆ, ಸೈಕಲ್‌, ವಿದ್ಯುತ್‌ ಘೋಷಿಸುವ ಕೆಲಸಕ್ಕೆ ಇಳಿಯಬಾರದು. ಬೆಳಗ್ಗೆಯೊಂದು, ಸಂಜೆಯೊಂದು ಉಚಿತ ಘೋಷಣೆ ಮಾಡುತ್ತಾ ಹೋದರೆ ಯಾರು ಶ್ರಮ ವಹಿಸಿ ದುಡಿಯುವ ಬಗ್ಗೆ ಯೋಚಿಸುತ್ತಾರೆ? ದುಡಿಯುವ ಸಂಸ್ಕೃತಿ ಏನಾದೀತು? ಎಂದು ಪ್ರಶ್ನಿಸಿತು.

ಇತ್ತೀಚಿನ ಕೆಲವು ಚುನಾವಣೆಗಳನ್ನು ಗಮನಿಸಿದರೆ, ಚುನಾವಣೆಗೆ ಮುನ್ನ ಮತದಾರರ ಬ್ಯಾಂಕ್‌ ಖಾತೆಗೆ ನೇರ ನಗದು ವರ್ಗ ಮಾಡಲಾಯಿತು. ಹೀಗೆಲ್ಲಾ ಮಾಡಿದರೆ ಜನರು ಕೆಲಸ ಮಾಡುವ ಮನಸ್ಥಿತಿ ಉಳಿಸಿಕೊಳ್ಳುತ್ತಾರಾ? ಇದೀಗ ತಮಿಳುನಾಡು ಸರ್ಕಾರ ಕೂಡಾ ಇದ್ದಕ್ಕಿದ್ದಂತೆ ಎಲ್ಲರಿಗೂ ಉಚಿತ ವಿದ್ಯುತ್‌ ಕೊಡುಗೆ ಘೋಷಣೆ ಮಾಡಲು ಮುಂದಾಗಿದ್ದಾದರೂ ಏಕೆ? ಎಂದು ಕೋರ್ಟ್‌ ಪ್ರಶ್ನಿಸಿತು.

ಬಳಿಕ ತಮಿಳುನಾಡು ಸರ್ಕಾರದ ಮೇಲ್ಮನವಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ಇತರರಿಗೆ ನೋಟಿಸ್‌ ಜಾರಿ ಮಾಡಿ ಅರ್ಜಿ ವಿಚಾರಣೆ ಮುಂದೂಡಿತು.