ದೆಹಲಿಯ 135 ವರ್ಷ ಹಳೆಯದಾದ 'ಸೆಂಟ್ರಲ್ ಸೆಕ್ರೆಟರಿಯಟ್ ಲೈಬ್ರರಿ' ಸ್ಥಳಾಂತರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ನವದೆಹಲಿ (ನ.16): 'ಸ್ವಲ್ಪವಾದರೂ ನಾಚಿಕೆ ಇರಲಿ (Have some shame)... ಐತಿಹಾಸಿಕ ಪುಸ್ತಕಗಳಿಗೆ ಗೌರವ ನೀಡುವುದನ್ನು ಕಲಿಯಿರಿ. ನಿಮಗೆ ಅವು ಬೇಡವಾಗಿದ್ದರೆ, ಅವುಗಳನ್ನು ಚೆನ್ನಾಗಿ ನೋಡಿಕೊಳ್ಳುವ ಬೇರೆ ಯಾವುದಾದರೂ ದೇಶಕ್ಕೆ ಕೊಟ್ಟುಬಿಡಿ!'. ದೆಹಲಿಯ 135 ವರ್ಷಗಳಷ್ಟು ಹಳೆಯದಾದ 'ಸೆಂಟ್ರಲ್ ಸೆಕ್ರೆಟರಿಯಟ್ ಲೈಬ್ರರಿ' (Central Secretariat Library - CSL) ಸ್ಥಳಾಂತರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರವನ್ನು ಅತ್ಯಂತ ಕಟುವಾದ ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡ ಪರಿ ಇದು.
ಸುಮಾರು 8.5 ಲಕ್ಷಕ್ಕೂ ಅಧಿಕ ಅಮೂಲ್ಯ ಪುಸ್ತಕಗಳನ್ನು ಹೊಂದಿರುವ ದೆಹಲಿಯ ಅತ್ಯಂತ ಹಳೆಯ ಗ್ರಂಥಾಲಯಗಳಲ್ಲಿ ಒಂದಾದ ಸೆಂಟ್ರಲ್ ಸೆಕ್ರೆಟರಿಯಟ್ ಲೈಬ್ರರಿ ಪ್ರಸ್ತುತ ಶಾಸ್ತ್ರಿ ಭವನದಲ್ಲಿದೆ. ಮಹತ್ವಾಕಾಂಕ್ಷೆಯ 'ಸೆಂಟ್ರಲ್ ವಿಸ್ಟಾ' (Central Vista) ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ಶಾಸ್ತ್ರಿ ಭವನವನ್ನು ನೆಲಸಮಗೊಳಿಸಿ, ಈ ಗ್ರಂಥಾಲಯವನ್ನು ಸ್ಥಳಾಂತರಿಸಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ.
ಈ ಕುರಿತು ಸ್ವಯಂಪ್ರೇರಿತವಾಗಿ (Suo motu) ದಾಖಲಿಸಿಕೊಂಡಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ಮತ್ತು ನ್ಯಾಯಮೂರ್ತಿ ಸಂಜೀವ್ ಸಚ್ದೇವ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠವು, ಈ ಐತಿಹಾಸಿಕ ಗ್ರಂಥಾಲಯವನ್ನು ಸರ್ಕಾರ ನಿರ್ವಹಿಸುತ್ತಿರುವ ರೀತಿಗೆ ತೀವ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಮುಂದಿನ ವಿಚಾರಣೆಯವರೆಗೆ ಪುಸ್ತಕಗಳನ್ನು ಸ್ಥಳಾಂತರಿಸುವಂತಿಲ್ಲ!
ವಿಚಾರಣೆಯ ವೇಳೆ ಕೇಂದ್ರ ಸರ್ಕಾರಕ್ಕೆ ಖಡಕ್ ಸೂಚನೆ ನೀಡಿರುವ ಸರ್ವೋಚ್ಚ ನ್ಯಾಯಾಲಯ, ಮುಂದಿನ ವಿಚಾರಣೆಯ ದಿನಾಂಕದವರೆಗೆ ಗ್ರಂಥಾಲಯದಿಂದ ಯಾವುದೇ ಪುಸ್ತಕಗಳನ್ನು ಸ್ಥಳಾಂತರಿಸಬಾರದು ಎಂದು ಸ್ಪಷ್ಟ ನಿರ್ದೇಶನ ನೀಡಿದೆ.
ನೂತನ ಸೆಂಟ್ರಲ್ ವಿಸ್ಟಾ ಯೋಜನೆಯಲ್ಲಿ ಗ್ರಂಥಾಲಯಕ್ಕೆ ಜಾಗವೇ ಇಲ್ಲವೇ?
ನೂತನ ಸೆಂಟ್ರಲ್ ವಿಸ್ಟಾ ಯೋಜನೆಯಲ್ಲಿ 135 ವರ್ಷ ಹಳೆಯ ಈ ಸೆಂಟ್ರಲ್ ಸೆಕ್ರೆಟರಿಯಟ್ ಗ್ರಂಥಾಲಯಕ್ಕೆ ಯಾವುದೇ ಸ್ಥಳಾವಕಾಶವನ್ನು (Space) ಹಂಚಿಕೆ ಮಾಡಲಾಗಿಲ್ಲ ಎಂಬ ವರದಿಗಳ ನಡುವೆಯೇ ಸುಪ್ರೀಂ ಕೋರ್ಟ್ ಈ ಕಠಿಣ ನಿಲುವು ತಳೆದಿದೆ. ಕಳೆದ ಅಕ್ಟೋಬರ್ 5ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಗ್ರಂಥಾಲಯ ಸ್ಥಳಾಂತರ ಪ್ರಸ್ತಾವನೆಯ ಕುರಿತು ಪ್ರತಿಕ್ರಿಯೆ ಕೇಳಿತ್ತು.
ಹೊಸ ಸೆಂಟ್ರಲ್ ವಿಸ್ಟಾ ಯೋಜನೆಯಡಿ ಈ ಗ್ರಂಥಾಲಯವನ್ನು ಸ್ಥಾಪಿಸಲು ಎಷ್ಟು ವಿಸ್ತೀರ್ಣದ ಜಾಗವನ್ನು ಮೀಸಲಿಡಲಾಗುವುದು ಎಂಬುದರ ಸಂಪೂರ್ಣ ವಿವರ ಮತ್ತು ನೈಜ ನೀಲನಕ್ಷೆಯನ್ನು (Actual layout plans) ಸಲ್ಲಿಸುವಂತೆ ನ್ಯಾಯಪೀಠವು ಕಳೆದ ವಿಚಾರಣೆಯಲ್ಲೇ ಸರ್ಕಾರಕ್ಕೆ ಸೂಚಿಸಿತ್ತು. ಐತಿಹಾಸಿಕ ಮಹತ್ವವುಳ್ಳ 8.5 ಲಕ್ಷ ಪುಸ್ತಕಗಳ ಭವಿಷ್ಯದ ಕುರಿತು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿರುವುದು ಇದೀಗ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.










