ಸ್ಮಾರ್ತ ಬ್ರಾಹ್ಮಣರು ಭಾರತೀಯ ಸಂವಿಧಾನದ 26 ನೇ ವಿಧಿಯ ಅಡಿಯಲ್ಲಿ ಪ್ರಯೋಜನಗಳಿಗೆ ಅರ್ಹರಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿತ್ತು. ಇದರ ವಿರುದ್ಧ ಮೇಲ್ಮನವಿ ಅರ್ಜಿ ಸಲ್ಲಿಸಿದ್ದ ಸುಪ್ರೀಂಕೋರ್ಟ್ ಅರ್ಜಿಯನ್ನು ವಜಾ ಮಾಡಿದೆ.
ನವದೆಹಲಿ: ತಮಿಳುನಾಡಿನಲ್ಲಿ (Tamil Nadu) ಸ್ಮಾರ್ತ ಬ್ರಾಹ್ಮಣರಿಗೆ (Smartha Brahmins) ಅಲ್ಪಸಂಖ್ಯಾತ ಸ್ಥಾನಮಾನ (Minority Status) ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು (Plea) ಸುಪ್ರೀಂ ಕೋರ್ಟ್ (Supreme Court) ವಜಾ ಮಾಡಿದೆ. ಈ ಸಂಬಂಧ ಮದ್ರಾಸ್ ಹೈಕೋರ್ಟ್ ಸಹ ಜೂನ್ 26ರಂದು ತೀರ್ಪು ನೀಡಿ, ‘ಸ್ಮಾರ್ತ ಬ್ರಾಹ್ಮಣರು ಪ್ರತ್ಯೇಕ ಧಾರ್ಮಿಕ ಪಂಥ (Religious Denomination) ಎನ್ನಿಸಿಕೊಳ್ಳುವುದಿಲ್ಲ. ಕೇವಲ ಜಾತಿ ಅಷ್ಟೇ. ಹೀಗಾಗಿ ಅವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಆಗದು. ಸಂವಿಧಾನದ ಪರಿಚ್ಛೇದ 26 ಅಡಿ ಪ್ರತ್ಯೇಕ ಧರ್ಮಗಳಿಗೆ ಸಿಗುವ ಸವಲತ್ತು ಇವರಿಗೆ ನೀಡಲು ಆಗದು’ ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ಸ್ಮಾರ್ತ ಸಮುದಾಯದ ಕೆಲವರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು.
ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೃಷ್ಣ ಮುರಾರಿ ಹಾಗೂ ನ್ಯಾಯಮೂರ್ತಿ ರವೀಂದ್ರ ಭಟ್ ಅವರ ನೇತೃತ್ವದ ದ್ವಿಸದಸ್ಯ ಪೀಠ, ‘ಅನೇಕರು ಅದ್ವೈತ ತತ್ವ ಪರಿಪಾಲಿಸುತ್ತಾರೆ. ಹಾಗಿದ್ದಾಗ ಇಡೀ ದೇಶವೇ ಅಲ್ಪಸಂಖ್ಯಾತರಿಂದ ತುಂಬಿ ಬಿಡುತ್ತದೆ’ ಎಂದು ಹೇಳಿ ಅರ್ಜಿ ವಜಾ ಮಾಡಿತು.
ಸೋಮವಾರ ಈ ಸಂಬಂಧ ವಿಚಾರಣೆ ನಡೆಸಿದ ದೇಶದ ಉನ್ನತ ನ್ಯಾಯಾಲಯ, ಅದ್ವೈತ ತತ್ವ ಪರಿಪಾಲಿಸುತ್ತಿರುವ ಸ್ಮಾರ್ತ ಬ್ರಾಹ್ಮಣರನ್ನು ಪ್ರತ್ಯೇಕ ಧಾರ್ಮಿಕ ಪಂಗಡ ಎಂದು ಹೇಳಲಾಗದು. ಈ ಹಿನ್ನೆಲೆ, ಅವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕಾರ ಮಾಡಿದೆ. ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ತಮಿಳುನಾಡಿನಲ್ಲಿ ವಾಸಿಸುತ್ತಿರುವ ಸ್ಮಾರ್ತ ಬ್ರಾಹ್ಮಣರ ಮನವಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಹಾಗೂ ಎಸ್. ರವೀಂದ್ರ ಭಟ್ ತಿರಸ್ಕಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ವಾಲ್ಮೀಕಿ ಮೀಸಲಾತಿ ಆಯ್ತು, ಈಗ ಕುರುಬ, ಬ್ರಾಹ್ಮಣ ಮಿಸಲಾತಿ ಕೂಗೆಬ್ಬಿಸಿದ ಯತ್ನಾಳ್
ಮದ್ರಾಸ್ ಹೈಕೋರ್ಟ್ ತೀರ್ಪಿನಲ್ಲಿ ಹೇಳಿದ್ದೇನು..?
ಈ ವರ್ಷದ ಜೂನ್ ತಿಂಗಳಲ್ಲಿ ಈ ಸಂಬಂಧ ತೀರ್ಪು ನೀಡಿದ್ದ ಮದ್ರಾಸ್ ಹೈಕೋರ್ಟ್, ಸ್ಮಾರ್ತ ಬ್ರಾಹ್ಮಣರು ಅಥವಾ ಬೇರೆ ಯಾವುದೇ ಹೆಸರಿನಿಂದ ಯಾವುದೇ ಸಾಮಾನ್ಯ ಸಂಘಟನೆ ಇಲ್ಲ. "ಇದು ಕೇವಲ ಒಂದು ಜಾತಿ/ಸಮುದಾಯವಾಗಿದ್ದು, ಇದು ತಮಿಳುನಾಡಿನ ಇತರ ಬ್ರಾಹ್ಮಣರಿಂದ ಅವರನ್ನು ಪ್ರತ್ಯೇಕಿಸುತ್ತದೆ ಎಂದು ಹೇಳಲು ಯಾವುದೇ ನಿರ್ದಿಷ್ಟ ಕಾರಣ, ವಿಶಿಷ್ಟತೆ ಇಲ್ಲ’’ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿತ್ತು.
ಈ ಹಿನ್ನೆಲೆ, ಸ್ಮಾರ್ತ ಬ್ರಾಹ್ಮಣರು ಭಾರತೀಯ ಸಂವಿಧಾನದ 26 ನೇ ವಿಧಿಯ ಅಡಿಯಲ್ಲಿ (ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯ) ಪ್ರಯೋಜನಗಳಿಗೆ ಅರ್ಹರಲ್ಲ ಎಂದೂ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿತ್ತು. ಇನ್ನು, ವಕೀಲ ವಿನೋದ್ ಕುಮಾರ್ ತಿವಾರಿ ಎಂಬುವರು ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ದೇಶದ ಉನ್ನತ ನ್ಯಾಯಾಲಯವಾದ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಮುಸ್ಲಿಮರಲ್ಲ, ಬ್ರಾಹ್ಮಣರು ಅಲ್ಪಸಂಖ್ಯಾತರು ಅವರಿಗೆ ಮೀಸಲಾತಿ ನೀಡಿ: ಯತ್ನಾಳ್
ಬ್ರಾಹ್ಮಣರು ಅಲ್ಪಸಂಖ್ಯಾತರು, ಅವರಿಗೆ ಮೀಸಲಾತಿ ನೀಡಿ ಎಂದಿದ್ದ ಯತ್ನಾಳ್
ಇನ್ನು, ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿ ಏರಿಕೆಗೆ ಬಿಜೆಪಿ ಸರ್ಕಾರ ಅನುಮೊದನೆ ನೀಡಿದ ಬಳಿಕ ಮಾತನಾಡಿದ್ದ ಬಿಜೆಪಿ ಮಾಜಿ ಸಚಿವ ಮತ್ತು ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, "ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬೇಕು. ಬ್ರಾಹ್ಮಣರು ಅಲ್ಪಸಂಖ್ಯಾತರು. ಬ್ರಾಹ್ಮಣರು ಕೇವಲ ಶೇಕಡಾ 2 ರಿಂದ 3 ರಷ್ಟಿದ್ದಾರೆ. ನಿಜವಾದ ಅಲ್ಪ ಸಂಖ್ಯಾತರು ಬ್ರಾಹ್ಮಣರು. ಅಲ್ಪಸಂಖ್ಯಾತ ಪಟ್ಟಿಯಲ್ಲಿ ಬ್ರಾಹ್ಮಣರನ್ನ ಸೇರಿಸಬೇಕು, ಇದು ನನ್ನ ವಾದ. ಮುಸಲ್ಮಾನರು ಅಲ್ಪ ಸಂಖ್ಯಾತರು ಅಲ್ಲವೇ ಅಲ್ಲ ಎಂದ ಯತ್ನಾಳ್, ಒಂದು ಜನಾಂಗದಷ್ಟಿರುವ ಮುಸ್ಲಿಂ ಹೇಗೆ ಅಲ್ಪ ಸಂಖ್ಯಾತರಾಗ್ತಾರೆ? ಎಂದು ಪ್ರಶ್ನಿಸಿದ್ದರು.
