ಚೀನಾದ ವಿಷಯದಲ್ಲಿ ಭಾರತೀಯ ಸೇನೆಯ ವಿರುದ್ಧ ಟೀಕೆ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸುಪ್ರೀಂಕೋರ್ಟ್ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿಗಳು ಹೇಳಿದ್ದೇನು ನೋಡಿ...
ವಿದೇಶಗಳಲ್ಲಿ ಹೋಗಿ ಪದೇ ಪದೇ ಭಾರತದ ಬಗ್ಗೆ ಅವಹೇಳನಕಾರಿ ಮಾತನಾಡಿ ಇದಾಗಲೇ ಭಾರತದ ಮೇಲೆ ಗೌರವ ಇಟ್ಟುಕೊಂಡಿರುವವರ ಕೆಂಗಣ್ಣಿಗೆ ಗುರಿಯಾಗುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಇಂದು ಸುಪ್ರೀಂಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಇದಾಗಲೇ ಆಪರೇಷನ್ ಸಿಂದೂರ್ ಸೇರಿದಂತೆ ಕೆಲವೊಂದು ವಿಷಯಗಳ ಬಗ್ಗೆ ಭಾರತದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ರಾಹುಲ್ ಗಾಂಧಿ ಪೋಸ್ಟ್ ಮಾಡಿರುವುದು ಪಾಕಿಸ್ತಾನದ ಟಿವಿಗಳಲ್ಲಿಯೂ ಹೈಲೈಟ್ ಆಗಿರುವುದು, ಇದನ್ನೇ ಇಟ್ಟುಕೊಂಡು ಅಲ್ಲಿಯ ಮಾಧ್ಯಮಗಳು ಭಾರತದ ವಿರುದ್ಧ ಟೀಕೆ ಮಾಡುತ್ತಿರುವುದು ಕೂಡ ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.
ಇದೀಗ 2020 ರ ಗಾಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ನಡೆದ ಘರ್ಷಣೆಯ ಸಂದರ್ಭದಲ್ಲಿ ಭಾರತೀಯ ಸೇನೆಯ ಬಗ್ಗೆ ಸಂಸದ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ನೀವು ನಿಜವಾದ ಭಾರತೀಯರೇ ಆಗಿದ್ದರೆ ಈ ಮಾತುಗಳನ್ನು ಹೇಳುತ್ತಿರಲಿಲ್ಲ. ಯಾವುದೇ ದಾಖಲೆಗಳು ಇಲ್ಲದೇ ಈ ರೀತಿಯ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ನೀಡುವುದು ಎಷ್ಟು ಸರಿ? ನಿಮ್ಮ ಬಳಿ ಏನು ದಾಖಲೆ ಇವೆ? ಓರ್ವ ಭಾರತೀಯನಾಗಿ ಹೀಗೆ ಹೇಳುತ್ತಿರುವುದು ಅಚ್ಚರಿಯ ವಿಷಯವಾಗಿದೆ ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿತು. ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ರದ್ದು ಮಾಡುವಂತೆ ಕೋರಿ ರಾಹುಲ್ ಗಾಂಧಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಕೋರ್ಟ್, ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಈ ಪ್ರಕರಣದ ವಿಚಾರಣೆ ವೇಳೆ, ರಾಹುಲ್ ಗಾಂಧಿ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ರಾಹುಲ್ ಗಾಂಧಿ ವಿರುದ್ಧ ಕೇಸ್ ಹಾಕಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ವಿರೋಧ ಪಕ್ಷದ ನಾಯಕರೊಬ್ಬರು ಸಮಸ್ಯೆಗಳನ್ನು ಎತ್ತಲು ಸಾಧ್ಯವಾಗದಿದ್ದರೆ, ಅದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ ಎಂದರು. ಅದಕ್ಕೆ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಎ.ಜಿ. ಮಸಿಹ್ ಅವರನ್ನೊಳಗೊಂಡ ಪೀಠವು , ನೀವು ಹೇಳಬೇಕು ಎಂದಿರುವುದನ್ನು ಸಂಸತ್ತಿನಲ್ಲಿ ಪ್ರಶ್ನಿಸಿ, ಅದನ್ನು ಬಿಟ್ಟು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವುದು ಏಕೆ ಎಂದು ಪ್ರಶ್ನಿಸಿದರು. ಜೊತೆಗೆ, ಚೀನಾವು ಸುಮಾರು ಎರಡು ಸಾವಿರ ಚದರ ಕಿಲೋಮೀಟರ್ ಭಾರತೀಯ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆಂದು ಹೇಳುವ ದಾಖಲೆ ನಿಮ್ಮ (ರಾಹುಲ್ ಗಾಂಧಿ) ಬಳಿ ಇದೆಯಾ? ಅದಕ್ಕೆ ಪೂರಕ ಸಾಕ್ಷ್ಯಾಧಾರಗಳು ಇವೆಯಾ? ಇಲ್ಲ ಎಂದಾದ ಮೇಲೆ ಇಂಥ ಹೇಳಿಕೆ ಏಕೆ ಕೊಡುತ್ತೀರಿ? ನೀವು (ರಾಹುಲ್ ಗಾಂಧಿ) ನಿಜವಾದ ಭಾರತೀಯರೇ ಆಗಿದ್ದರೆ ಇಂಥ ಹೇಳಿಕೆ ಕೊಡುತ್ತಿರಲಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿದರು.
ಅಷ್ಟಕ್ಕೂ ರಾಹುಲ್ ಗಾಂಧಿ ಅವರು, ಡಿಸೆಂಬರ್ 2022 ರ ಭಾರತ-ಚೀನಾ ಘರ್ಷಣೆಯ ಕುರಿತು ಹೇಳಿಕೆ ನೀಡಿದ್ದರು. ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯು ಭಾರತೀಯ ಸೈನಿಕರನ್ನು ಥಳಿಸುತ್ತಿದೆ ಮತ್ತು ಮಾಧ್ಯಮಗಳು ಅದನ್ನು ಪ್ರಶ್ನಿಸುವುದಿಲ್ಲ ಎಂದು ಅವರು ಹೇಳಿದ್ದರು. ಜೊತೆಗೆ, ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ, ಚೀನಾ 2,000 ಚದರ ಕಿಲೋಮೀಟರ್ ಭಾರತೀಯ ಭೂಮಿಯನ್ನು ವಶಪಡಿಸಿಕೊಂಡು, 20 ಭಾರತೀಯ ಸೈನಿಕರನ್ನು ಕೊಂದು ಹಾಕಿದೆ ಎಂದಿದ್ದರು. ಆದರೆ, ಯಾವುದೇ ದಾಖಲೆ ಇಲ್ಲದೇ ಭಾರತೀಯ ಸೇನೆಯ ವಿರುದ್ಧ ಹೇಳಿಕೆ ನೀಡಲಾಗಿದೆ ಎಂದು ದೂರು ದಾಖಲಿಸಲಾಗಿತ್ತು. ಅವರ ಹೇಳಿಕೆ ಭಾರತೀಯ ಸೇನೆಯ ಮಾನಹಾನಿ ಮತ್ತು ಸ್ಥೈರ್ಯ ಕುಗ್ಗಿಸಿವೆ ಎಂದು ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲು ಮಾಡಲಾಗಿದ್ದು, ಅದರ ವಿಚಾರಣೆಯನ್ನು ಕೋರ್ಟ್ ನಡೆಸುತ್ತಿದೆ.
