ಹುಲಿ ರಕ್ಷಿತಾರಣ್ಯದಲ್ಲಿ ಝೂ, ಸಫಾರಿ ನಿಷೇಧಕ್ಕೆ ಶಿಫಾರಸು: ರಾಜ್ಯದ ಬಂಡೀಪುರ, ನಾಗರಹೊಳೆ ಸಫಾರಿಗೆ ಕುತ್ತು..?
ಅಭಯಾರಣ್ಯಗಳಲ್ಲಿ ಹುಲಿ ಸಫಾರಿ, ಝೂ ಸ್ಥಾಪನೆ ಬೇಡ, ಹೀಗೆ ಮಾಡಿದರೆ ಕಾಡುಪ್ರಾಣಿಗಳ ಸಂತತಿಗೆ ಅಪಾಯ. ಹುಲಿ ಆವಾಸ ಸ್ಥಾನದ ಹೊರಗೆ ಟೂರಿಸಂ ನಡೆಸಿ ಎಂದು ಸುಪ್ರೀಂಕೋರ್ಟ್‌ಗೆ ಉನ್ನತಾಧಿಕಾರ ಸಮಿತಿ ಶಿಫಾರಸು ಮಾಡಿದೆ. ಇದು ಜಾರಿ ಆದರೆ ಬಂಡೀಪುರ-ನಾಗರಹೊಳೆ ಹುಲಿ ಸಫಾರಿಗೆ ಎಫೆಕ್ಟ್ ಬೀಳಲಿದ್ಯಾ ಎಂದೂ ಹೇಳಲಾಗುತ್ತಿದೆ.
ನವದೆಹಲಿ: ಹುಲಿ ಅಭಯಾರಣ್ಯಗಳಲ್ಲಿ ಪ್ರವಾಸಿಗರಿಗೆ ಹುಲಿ ಸಫಾರಿಗೆ ನಿಡಿರುವ ಅನುಮತಿ ಅಥವಾ ಅಲ್ಲಿ ಮೃಗಾಲಯಗಳನ್ನು ಸ್ಥಾಪಿಸುವ ಮಾರ್ಗಸೂಚಿಗಳನ್ನು ಹಿಂಪಡೆಯಬೇಕು ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡ ಸಮಿತಿಯೊಂದು ಕೇಂದ್ರ ಪರಿಸರ ಸಚಿವಾಲಯಕ್ಕೆ ಆಗ್ರಹಿಸಿದೆ. ವನ್ಯಜೀವಿ ಆವಾಸ ಸ್ಥಾನದಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಿಯಂತ್ರಿಸಿ, ವನ್ಯಜೀವಿಗಳಿಗೆ ಅದರದ್ದೇ ಆದ ಜೀವನ ನಡೆಸಲು ಅನುವು ಮಾಡಿಕೊಡುವ ಸಂಬಂಧ ಈ ಶಿಫಾರಸನ್ನು ಮಾಡಲಾಗಿದೆ.
ಉತ್ತರಾಖಂಡದ (Uttarakhand) ಕಾರ್ಬೆಟ್ ಹುಲಿ ಧಾಮದ (Corbett Tiger Reserve) ಬಫರ್ ವಲಯದಲ್ಲಿ ಹುಲಿ ಸಫಾರಿಗೆ (Tiger Safari) ಅನುಮತಿ ನೀಡಿದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಪ್ರಕರಣ ನಡೆಯುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ಕೋರ್ಚ್‌ಗೆ ವರದಿ ನೀಡುವಾಗ, ಕಳೆದ ತಿಂಗಳು ಕೇಂದ್ರೀಯ ಉನ್ನತ ಸಮಿತಿ (Central Empowered Committee) (ಸಿಇಸಿ) (CEC), ಈ ಶಿಫಾರಸುಗಳನ್ನು ಮಾಡಿದೆ. ಈ ಶಿಫಾರಸುಗಳನ್ನು ಕೋರ್ಟ್ ಒಪ್ಪಿ ಆದೇಶ ಹೊರಡಿಸಿದರೆ ಕರ್ನಾಟಕದ ಬಂಡೀಪುರ-ನಾಗರಹೊಳೆ ಸಫಾರಿ ಮೇಲೂ ಪರಿಣಾಮ ಆಗುವ ಸಾಧ್ಯತೆ ಇದೆ.
ಇದನ್ನು ಓದಿ: ಮಧ್ಯಪ್ರದೇಶದಲ್ಲಿ 5 ಹುಲಿ ಮರಿಗಳ ಜತೆ ಮೊದಲ ಬಾರಿ ಕಾಣಿಸಿಕೊಂಡ 'ಡಿಜೆ': ಪ್ರವಾಸಿಗರು ಫುಲ್ ಖುಷ್..!
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು (National Tiger Conservation Authority) 2012ರಲ್ಲಿ ಹುಲಿ ಸಂರಕ್ಷಿತ ಪ್ರದೇಶಗಳ ಬಫರ್ ಪ್ರದೇಶಗಳಲ್ಲಿ ಹುಲಿ ಸಫಾರಿ ಅನುಮತಿಸಿತ್ತು. ಅಲ್ಲದೆ, ಕಳೆದ ಜೂನ್‌ನಲ್ಲಿ ಪರಿಸರ ಸಚಿವಾಲಯವು ‘ಅರಣ್ಯ ಪ್ರದೇಶಗಳಲ್ಲಿ ಮೃಗಾಲಯಗಳ ಸ್ಥಾಪನೆಯನ್ನು ಅರಣ್ಯೇತರ ಚಟುವಟಿಕೆ ಎಂದು ಪರಿಗಣಿಸಬಾರದು’ ಎಂದು ಹೇಳಿತ್ತು. ಈ ಮೂಲಕ ಅಲ್ಲಿ ಝೂ ಸ್ಥಾಪನೆಗೆ ಅರಣ್ಯ (ಸಂರಕ್ಷಣೆ) ಕಾಯಿದೆ, 1980 ರ ಅಡಿಯಲ್ಲಿ ಬೇಕಾದ ಅನುಮೋದನೆ ತೆಗೆದು ಹಾಕಿತ್ತು.
ಪ್ರಾಣಿಗಳ ಜೀವಕ್ಕೆ ಅಪಾಯ- ಸಮಿತಿ:
ಆದರೆ, ಇದಕ್ಕೆ ಆಕ್ಷೇಪಿಸಿರುವ ಸುಪ್ರೀಂ ಕೋರ್ಚ್ ನಿಯೋಜಿತ ಸಮಿತಿ, ‘ಕೇಂದ್ರ ಮೃಗಾಲಯ ಪ್ರಾಧಿಕಾರವು ಹುಲಿ ಸಂರಕ್ಷಿತ ಪ್ರದೇಶಗಳು, ವನ್ಯಜೀವಿ ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನವನಗಳು, ಪ್ರಾಣಿ ಕಾರಿಡಾರ್‌ಗಳು ಮತ್ತು ಪ್ರಾಣಿಗಳ ಸಂಚಾರ ಮಾರ್ಗಗಳಲ್ಲಿ, ಮೃಗಾಲಯಗಳು ಮತ್ತು ಸಫಾರಿಗಳ ಸ್ಥಾಪನೆಗೆ ಅನುಮೋದಿಸಬಾರದು’ ಎಂದು ಹೇಳಿದೆ.
ಇದನ್ನೂ ಓದಿ: ಚಿರತೆ ದಾಳಿಯಿಂದ ಕಂಗೆಟ್ಟಿದ್ದ ಮೈಸೂರಿನ ಜನ್ರಿಗೆ ಈಗ ಹುಲಿ ಆತಂಕ
ಅಲ್ಲದೆ, ‘ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ ಮೃಗಾಲಯಗಳು ಮತ್ತು ಸಫಾರಿಗಳನ್ನು ಸ್ಥಾಪಿಸಲು ಸಂಬಂಧಿಸಿದ ವಿವಿಧ ಅರಣ್ಯ ಕಾಯ್ದೆಗಳ ಅಡಿ ಹೊರಡಿಸಿದ್ದ ಮಾರ್ಗಸೂಚಿಗಳನ್ನು ಮರುಪರಿಶೀಲಿಸಲು ಮತ್ತು ತಿದ್ದುಪಡಿ ಮಾಡಲು ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು’ ಎಂದು ಅದು ಸುಪ್ರೀಂ ಕೋರ್ಟ್‌ಗೆ ಕೇಳಿದೆ. ಇಂಥ ಅನುಮತಿಗಳಿಂದ ಪ್ರಾಣಿಗಳ ಸಂಖ್ಯೆ ತಗ್ಗಬಾರದು’ ಎಂದಿದೆ.
ಇದನ್ನೂ ಓದಿ: ಹುಲಿ ಗಣತಿ: ಈ ಬಾರಿ ಕರ್ನಾಟಕಕ್ಕೆ ಮತ್ತೆ ನಂ. 1 ಸ್ಥಾನ..?
‘ಹುಲಿ ಸಂರಕ್ಷಿತ ಅರಣ್ಯದೊಳಗೆ ಹುಲಿ ಸಫಾರಿಗಳನ್ನು ಸ್ಥಾಪಿಸುವುದರಿಂದ ಪ್ರವಾಸಿಗರು ಅರಣ್ಯಗಳ ಮೂಲಕ ದೂರದವರೆಗೆ ಪ್ರಯಾಣಿಸಬೇಕಾಗುತ್ತದೆ. ಇದರ ಪರಿಣಾಮ, ಪ್ರವಾಸಿಗರನ್ನು ಸಾಗಿಸುವ ಹೆಚ್ಚಿನ ಸಂಖ್ಯೆಯ ವಾಹನಗಳು ಆ ಪ್ರದೇಶದ ಅರಣ್ಯ ಮತ್ತು ವನ್ಯಜೀವಿಗಳಿಗೆ ಭಾರಿ ತೊಂದರೆ ಉಂಟುಮಾಡುತ್ತವೆ. ಪ್ರಾಣಿಗಳ ರೋಗ ರುಜಿನುಗಳಿಗೆ ಕಾರಣವಾಗುತ್ತದೆ. ಹೀಗಾಗಿ, ಮುನ್ನೆಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಕಾಡಿನೊಳಗೆ ಪ್ರಾಣಿಸಂಗ್ರಹಾಲಯಗಳು ಮತ್ತು ಸಫಾರಿಗಳನ್ನು ಸ್ಥಾಪಿಸುವಾಗ ಪ್ರಾಣಿಗಳ ಆವಾಸ ಸ್ಥಾನಗಳನ್ನು ಬಿಟ್ಟುಬಿಡುವುದು ಉತ್ತಮ’ ಎಂದು ಸಮಿತಿ ಹೇಳಿದೆ.
ಶಿಫಾರಸುಗಳೇನು..?
- ಅಭಯಾರಣ್ಯಗಳಲ್ಲಿನ ಸಫಾರಿ, ಮೃಗಾಲಯಗಳು ಜೀವಿಗಳ ಚಟುವಟಿಕೆಗೆ ಧಕ್ಕೆ ತರಬಾರದು
- ವನ್ಯಜೀವಿಗಳ ಕುರಿತ ಶಿಕ್ಷಣವು ಪ್ರಾಣಿಗಳ ಜೀವಕ್ಕೆ ಅಪಾಯ ತಂದು ಸಂಖ್ಯೆ ಕುಗ್ಗಿಸಬಾರದು
- ರೋಗಗಳಿಗೂ ಕಾರಣವಾಗುತ್ತದೆ. ಹೀಗಾಗಿ ಆವಾಸ ಸ್ಥಾನದಲ್ಲಿ ಇಂತಹ ಚಟುವಟಿಕೆಗಳು ಬೇಡ
- ಸಫಾರಿಗೆ ಅನುಮತಿ ನೀಡಿದರೆ ವಾಹನಗಳು ಚಲನೆಯಿಂದ ಪ್ರಾಣಿಗಳಿಗೆ ತೊಂದರೆಯಾಗುತ್ತದೆ
ಇದನ್ನೂ ಓದಿ: Chikkamagaluru: ಭದ್ರಾ ಅಭಯಾರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ, ಡಿ.1ರಿಂದ ಆರಂಭವಾಗಿದೆ ಹುಲಿ ಗಣತಿ