ಸುಪ್ರೀಂ ಕೋರ್ಟ್ ತನ್ನ ವಿವಾಹವಾಗದೇ ಉಳಿದ ವಿಚ್ಛೇದಿತ ಪತ್ನಿಗೆ ತಿಂಗಳಿಗೆ ₹50,000 ಶಾಶ್ವತ ಜೀವನಾಂಶವನ್ನಾಗಿ ನೀಡಬೇಕೆಂದು ಪತಿಗೆ ಆದೇಶಿಸಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ 5% ಹೆಚ್ಚಳದ ಜೊತೆಗೆ ಮನೆಯ ಆಸ್ತಿಯನ್ನು ಪತ್ನಿಗೆ ವರ್ಗಾಯಿಸುವಂತೆಯೂ ಸೂಚಿಸಿದೆ.

ಬೆಂಗಳೂರು: ಸುಪ್ರೀಂ ಕೋರ್ಟ್ ಒಂದು ಮಹತ್ವದ ತೀರ್ಪಿನಲ್ಲಿ, ಪತಿಯು ತನ್ನ ವಿವಾಹವಾಗದೇ ಉಳಿದ ವಿಚ್ಛೇದಿತ ಪತ್ನಿಗೆ ತಿಂಗಳಿಗೆ 50,000 ರೂ.ಗಳನ್ನು ಶಾಶ್ವತ ಜೀವನಾಂಶವನ್ನಾಗಿ ನೀಡಬೇಕೆಂದು ಆದೇಶಿಸಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಇದಕ್ಕೆ 5% ಹೆಚ್ಚಳ ನೀಡಬೇಕಾಗುತ್ತದೆ. ಜೊತೆಗೆ ಮನೆಯ ಆಸ್ತಿಯ ಪತ್ರವನ್ನು ಪತ್ನಿಗೆ ವರ್ಗಾಯಿಸುವಂತೆ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಕೂಡ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ಅವಿವಾಹಿತಳಾಗಿ ಉಳಿದು ಸ್ವತಂತ್ರವಾಗಿ ವಾಸಿಸುತ್ತಿರುವ ಹೆಂಡತಿ, ಮದುವೆಯ ಸಮಯದಲ್ಲಿ ಅವಳು ಅನುಭವಿಸಿದ ಜೀವನ ಮಟ್ಟವನ್ನು ಪ್ರತಿಬಿಂಬಿಸುವ ಮತ್ತು ಅವಳ ಭವಿಷ್ಯವನ್ನು ಸಮಂಜಸವಾಗಿ ಭದ್ರಪಡಿಸುವ ಜೀವನಾಂಶದ ಮಟ್ಟಕ್ಕೆ ಅರ್ಹಳಾಗಿದ್ದಾಳೆ ಎಂದು ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿದೆ.

ಇದಲ್ಲದೆ, ಪತಿಯು ಮನೆಯ ಮೇಲೆ ತೆಗೆದುಕೊಂಡ ಅಡಮಾನವನ್ನು ಪುನಃ ಪಡೆದುಕೊಳ್ಳಲು ಮತ್ತು ಶೀರ್ಷಿಕೆ ಪತ್ರವನ್ನು ತನ್ನ ಹಿಂದಿನ ಪತ್ನಿಯ ಹೆಸರಿಗೆ ವರ್ಗಾಯಿಸಲು ಕಲ್ಕತ್ತಾ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ಸಹ ಎತ್ತಿಹಿಡಿದಿದೆ. ಆದರೆ ವಿಚಾರದದ ಬಗ್ಗೆ ಪತಿ ಪ್ರಶ್ನೆ ಮಾಡಿರಲಿಲ್ಲ, ಹಾಗೂ ಕೋರ್ಟ್ ಆದೇಶವನ್ನು ಪಾಲಿಸಿದ್ದರು. ಆದರೆ ಅವರು ತನ್ನ ಹೆಂಡತಿ ಮತ್ತು ಮಗನಿಗೆ ಜೀವನಾಂಶವನ್ನು ಪಾವತಿಸುವ ಅಂಶವನ್ನು ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು.

ತನ್ನ ಮಗನಿಗೆ ಈಗ 26 ವರ್ಷ ಮತ್ತು ಅವನು ಅವಲಂಬಿತನಲ್ಲ ಎಂದು ಪತಿಯೂ ವಾದಿಸಿದ್ದರು. ವಿಚ್ಛೇದನದ ನಂತರ ತನ್ನ ಆದಾಯದ ಮಟ್ಟ ಹೆಚ್ಚಾಗಿದೆ ಎಂಬುದು ನಿಜವೇ ಆದರೂ ತನಗೆ ಮರುಮದುವೆಯಾಗಿದೆ ಮತ್ತು ವಯಸ್ಸಾದ ಪೋಷಕರನ್ನು ಸಹ ನೋಡಿಕೊಳ್ಳಬೇಕಾಗಿದೆ ಎಂದು ಪತಿ ಹೇಳಿದರು

ಪ್ರಕರಣದ ಸತ್ಯಾಸತ್ಯತೆಗಳನ್ನು ಆಲಿಸಿ ವಿಶ್ಲೇಷಿಸಿದ ನಂತರ, ಸುಪ್ರೀಂಕೋರ್ಟ್, ಪತಿಗೆ ತನ್ನ ಮಗನಿಗೆ ಜೀವನಾಂಶ ಪಾವತಿಸಲು ನಿರ್ದೇಶಿಸಲು ಸಾಧ್ಯವಿಲ್ಲವಾದರೂ, ಮಗನಿಗೆ ಆನುವಂಶಿಕವಾಗಿ ಸಿಗುವ ಹಕ್ಕುಗಳಾದ ಪೂರ್ವಜರ ಅಥವಾ ಇತರ ಆಸ್ತಿಯ ಮೇಲಿನ ಯಾವುದೇ ಹಕ್ಕನ್ನು ಕಾನೂನಿನ ಪ್ರಕಾರ ತಡೆಯಲು ಸಾಧ್ಯವಿಲ್ಲ ಎಂದಿದೆ. ಅಲ್ಲದೇ ಹೆಂಡತಿಗೆ ಹೆಚ್ಚಿನ ಜೀವನಾಂಶವನ್ನು ಪಾವತಿಸುವ ಬಗ್ಗೆ ಪತಿಯ ಆಕ್ಷೇಪಣೆಗಳನ್ನು ತಿರಸ್ಕರಿಸಿದೆ.

ದಾಖಲೆಯಲ್ಲಿರುವ ಸಲ್ಲಿಕೆಗಳು ಮತ್ತು ಸಾಮಗ್ರಿಗಳನ್ನು ಪರಿಗಣಿಸಿದ ನಂತರ, ಹೈಕೋರ್ಟ್ ನಿಗದಿಪಡಿಸಿದ ಶಾಶ್ವತ ಜೀವನಾಂಶದ ಪ್ರಮಾಣವನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ನಾವು ಭಾವಿಸುತ್ತೇವೆ. ಗಂಡನ ಆದಾಯ, ಆರ್ಥಿಕ ಬಹಿರಂಗಪಡಿಸುವಿಕೆಗಳು ಮತ್ತು ಹಿಂದಿನ ಗಳಿಕೆಗಳು ಅವನು ಹೆಚ್ಚಿನ ಮೊತ್ತವನ್ನು ಪಾವತಿಸುವ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ತಿಳಿಸುತ್ತವೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಜೂನ್ 18, 1997: ದಂಪತಿಗಳು ಹಿಂದೂ ವಿಧಿವಿಧಾನಗಳ ಪ್ರಕಾರ ವಿವಾಹವಾಗಿದ್ದರು, ಆಗಸ್ಟ್ 5, 1998 ರಂದು ಈ ದಂಪತಿಗಳಿಗೆ ಒಂದು ಗಂಡು ಮಗು ಜನಿಸಿತು ಇದಾಗಿ 10 ವರ್ಷಗಳ ನಂತರ ಅಂದರೆ ಜುಲೈ 2008ರಲ್ಲಿ ಪತ್ನಿಯಿಂದ ಕ್ರೌರ್ಯ ಎಂದು ಆರೋಪಿಸಿ ಮದುವೆಯನ್ನು ವಿಸರ್ಜಿಸುವಂತೆ ಕೋರಿ ಪತಿ 2008 ರ ವಿಶೇಷ ವಿವಾಹ ಕಾಯ್ದೆ 1954 ರ ಸೆಕ್ಷನ್ 27 ರ ಅಡಿಯಲ್ಲಿ ವೈವಾಹಿಕ ಮೊಕದ್ದಮೆ ಸಂಖ್ಯೆ 430 ಅನ್ನು ಸಲ್ಲಿಸಿದರು. ಇದಾದ ನಂತರ, ಪತ್ನಿ 2008 ರಲ್ಲಿ ಹಿಂದೂ ವಿವಾಹ ಕಾಯ್ದೆ 1955 ರ ಸೆಕ್ಷನ್ 24 ರ ಅಡಿಯಲ್ಲಿ ತನಗೆ ಮತ್ತು ಅಪ್ರಾಪ್ತ ಮಗನಿಗೆ ಮಧ್ಯಂತರ ಜೀವನಾಂಶವನ್ನು ಕೋರಿ ಅರ್ಜಿ ಸಲ್ಲಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2010ರ ಜನವರಿ 14 ರಂದು ವಿಚಾರಣಾ ನ್ಯಾಯಾಲಯವು ಪತ್ನಿಗೆ ತಿಂಗಳಿಗೆ 8,000 ರೂ. ಮಧ್ಯಂತರ ಜೀವನಾಂಶ ಮತ್ತು ಮೊಕದ್ದಮೆ ವೆಚ್ಚಕ್ಕಾಗಿ 10,000 ರೂ.ಗಳನ್ನು ನೀಡಬೇಕು ಎಂದು ಆದೇಶಿಸಿತ್ತು.

ಇದಾದ ನಂತರ 2014ರ ಮಾರ್ಚ್ 28ರಂದು ಪತ್ನಿ 1973 ರ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 125 ರ ಅಡಿಯಲ್ಲಿ ಪ್ರಕರಣ ದಾಖಲಿಸಿದರು. ಇದರ ವಿಚಾರಣೆಯ ನಂತರದ ಆದೇಶದ ಪ್ರಕಾರ, ವಿಚಾರಣಾ ನ್ಯಾಯಾಲಯವು ಪತಿಗೆ ಪತ್ನಿಗೆ ತಿಂಗಳಿಗೆ 8,000 ರೂ. ಮತ್ತು ಅಪ್ರಾಪ್ತ ಮಗನಿಗೆ ತಿಂಗಳಿಗೆ 6,000 ರೂ. ಜೀವನಾಂಶ ಮತ್ತು ಮೊಕದ್ದಮೆ ವೆಚ್ಚವಾಗಿ 5,000 ರೂ.ಗಳನ್ನು ಪಾವತಿಸಲು ನಿರ್ದೇಶಿಸಿತು.

ಈ ಆದೇಶದಿಂದ ಬೇಸತ್ತ ಪತಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. ಮೇ 14, 2015 ರಂದು ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ತಿಂಗಳಿಗೆ 15,000 ರೂ. ಮಧ್ಯಂತರ ಜೀವನಾಂಶವನ್ನು ಪತ್ನಿಗೆ ಪಾವತಿಸಲು ಪತಿಗೆ ನಿರ್ದೇಶನ ನೀಡಿತು.

ಹಾಗೆಯೇ ನಂತರ ಜನವರಿ 1, 2016 ರಂದು ಪ್ರತಿವಾದಿ ಪತಿ ಕ್ರೌರ್ಯವನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ಹೇಳಿ ವಿಚಾರಣಾ ನ್ಯಾಯಾಲಯವು ವೈವಾಹಿಕ ಮೊಕದ್ದಮೆಯನ್ನು ವಜಾಗೊಳಿಸಿತು. ಅಲ್ಲದೇ ಜುಲೈ 14, 2016 ರ ಆದೇಶದ ಮೂಲಕ, ಪ್ರತಿವಾದಿ-ಪತಿ ಮಾಸಿಕ 69,000 ರೂ. ನಿವ್ವಳ ವೇತನವನ್ನು ಪಡೆಯುತ್ತಿದ್ದಾರೆ ಎಂದು ಹೈಕೋರ್ಟ್ ಗಮನಿಸಿತು ಮತ್ತು ಮಧ್ಯಂತರ ನಿರ್ವಹಣೆಯನ್ನು ತಿಂಗಳಿಗೆ 20,000 ರೂ.ಗೆ ಹೆಚ್ಚಿಸಿತು.

ಹಾಗೆಯೇ ಜೂನ್ 25, 2019ರಂದು ಹೈಕೋರ್ಟ್ ಪತಿಯ ಮೇಲ್ಮನವಿಯನ್ನು ಅಂಗೀಕರಿಸಿ, ಮಾನಸಿಕ ಕ್ರೌರ್ಯ ಮತ್ತು ಮದುವೆಯಲ್ಲಿ ಸರಿಪಡಿಸಲಾಗದಷ್ಟು ಮುರಿದುಬಿದ್ದ ಕಾರಣ ವಿಚ್ಛೇದನ ಈ ದಂಪತಿಗೆ ವಿಚ್ಛೇದನ ನೀಡಿ ತೀರ್ಪು ನೀಡಿತು.

ಇದಾದ ನಂತರ 2023ರಲ್ಲಿ ಭಾರತದ ಸುಪ್ರೀಂ ಕೋರ್ಟ್ ಪತ್ನಿಗೆ ನೀಡಲಾಗುವ ಶಾಶ್ವತ ಜೀವನಾಂಶವನ್ನು ಹೆಚ್ಚಿಸುವ ಪ್ರಶ್ನೆಗೆ ಸೀಮಿತವಾದ ನೋಟಿಸ್ ನೀಡಿತು. ಆದರೆ ಪತಿಯ ಪರವಾಗಿ ಪ್ರಾತಿನಿಧ್ಯದ ಅನುಪಸ್ಥಿತಿಯನ್ನು ಗಮನಿಸಿದ ಸುಪ್ರೀಂ ಕೋರ್ಟ್, ನವೆಂಬರ್ 1, 2023 ರಿಂದ ಜಾರಿಗೆ ಬರುವಂತೆ ಮಾಸಿಕ ಜೀವನಾಂಶವನ್ನು ರೂ. 75,000 ಕ್ಕೆ ಹೆಚ್ಚಿಸಿತು. ನಂತರ ಪತಿ ನ್ಯಾಯಾಲಯಕ್ಕೆ ಹಾಜರಾದರು ಮತ್ತು ಸದರಿ ಮಧ್ಯಂತರ ಆದೇಶವನ್ನು ರದ್ದುಗೊಳಿಸುವಂತೆ ಅರ್ಜಿಯನ್ನು ಸಲ್ಲಿಸಿದರು.

ಇದಾದ ನಂತರ ಮೇ 29, 2025ರಂದು ಸುಪ್ರೀಂ ಕೋರ್ಟ್‌ನ ನೀಡಿದ ಅಂತಿಮ ತೀರ್ಪಿನಲ್ಲಿ ಪತ್ನಿಗೆ ಶಾಶ್ವತ ಜೀವನಾಂಶವಾಗಿ ತಿಂಗಳಿಗೆ 50,000 ರೂ.ಗಳನ್ನು ಪಾವತಿಸಲು ಪತಿಗೆ ಆದೇಶಿಸಿತು, ಅಲ್ಲದೇ ಪ್ರತಿ ಎರಡು ವರ್ಷಗಳಿಗೊಮ್ಮೆ ಇದರಲ್ಲಿ ಶೇ. 5 ರಷ್ಟು ಹೆಚ್ಚಳ ಆಗಬೇಕು ಎಂದು ಆದೇಶಿಸಿದೆ.