ಮಹಿಳೆಯರೊಬ್ಬರಿಗೆ ಕೆಲಸ ನೀಡಲು ನಿರಾಕರಿಸಿದ್ದ ಇಂಡಿಯನ್ ಆಯಿಲ್ ಸಂಸ್ಥೆ ಸುಪ್ರೀಂ ಕೋರ್ಟ್ ಭಾರೀ ದಂಡ ವಿಧಿಸಿದೆ.. ಅಲ್ಲದೇ ಉದ್ಯೋಗ ವಿಚಾರದಲ್ಲಿ ಮಹಿಳೆಯರನ್ನ ಕಡೆಗಣಿಸಿದ್ದಕ್ಕೆ ತಪರಾಕಿಗೆ ಬಾರಿಸಿದೆ.
ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಸಂಸ್ಥೆಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ. ಜೊತೆಗೆ ಬರೋಬ್ಬರಿ 12 ಲಕ್ಷ ರೂಪಾಯಿ ದಂಡ ವಿಧಿಸಿ ಅಚ್ಚರಿ ಮೂಡಿಸಿದೆ.
ಯಾಕೆ ಇಂಥ ತೀಪು?
ಕೆಲವು ವರ್ಷಗಳ ಹಿಂದೆ ಹರಿಯಾಣದ ಮಹಿಳೆಯೊಬ್ಬರು ಎಲ್‌ಪಿಜಿ ಬಾಟ್ಲಿಂಗ್ ಪ್ಲಾಂಟ್‌ನಲ್ಲಿ ರಿಫಿಲ್ಲಿಂಗ್ ಹೆಲ್ಪರ್ ಅಥವಾ ಪ್ಯೂನ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಅಗತ್ಯ ಅರ್ಹತೆ ಹೊಂದಿದ್ದರೂ ಮತ್ತು ಕಮಿಟಿ ಶಿಫಾರಸು ಮಾಡಿದ್ದರೂ 43 ಪುರುಷರಿಗೆ ಕೆಲಸ ನೀಡಿ ಈಕೆಗೆ ಉದ್ಯೋಗ ನಿರಾಕರಿಸಿತ್ತು ಇಂಡಿಯನ್ ಆಯಿಲ್ ಸಂಸ್ಥೆ. ಇದರ ವಿಚಾರಣೆ ನಡೆಸಿದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠವು ಮಹತ್ವದ ಆದೇಶ ನೀಡಿದೆ.
ಇಂಡಿಯನ್ ಆಯಿಲ್ ಸಂಸ್ಥೆ ಹೇಳಿದ್ದೇನು?
ಮಹಿಳೆಯರು ಸಿಲಿಂಡರ್ ಎತ್ತುವುದು ಕಷ್ಟದ ಕೆಲಸ. ಜೊತೆಗೆ ರಾತ್ರಿ ಶಿಫ್ಟ್ ಇರುತ್ತದೆ. ಮಹಿಳೆಯರಿಗೆ ಇದು ಸಾಧ್ಯವಿಲ್ಲ ಎಂಬ ಉದ್ದೇಶದಿಂದ ಕೆಲಸ ನೀಡಿಲ್ಲ ಎಂದು ಕಂಪನಿ ಹೇಳಿಕೊಂಡಿತ್ತು. ಸಂಸ್ಥೆಯ ಈ ವಾದವನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಅರವಿಂದ್ ಕುಮಾರ್.. ಕೇವಲ ಮಹಿಳೆ ಎಂಬ ಕಾರಣಕ್ಕೆ ಉದ್ಯೋಗ ನಿರಾಕರಿಸುವುದು ನಾರಿ ಶಕ್ತಿಗೆ ಮಾಡುವ ಅಪಮಾನ. ಮನೆಯಲ್ಲಿ ಗಂಡಸರಿಲ್ಲದಿದ್ದಾಗ ಮಹಿಳೆಯರೇ ಸಿಲಿಂಡರ್ ಬದಲಾಯಿಸುವುದಿಲ್ಲವೇ? ಭಾರತದಲ್ಲಿ ಪ್ರತಿದಿನ ಮಹಿಳೆಯರನ್ನು ದೇವತೆ ಎಂದು ಪೂಜಿಸುತ್ತೇವೆ. ಆದರೆ ಕೇಂದ್ರ ಸರ್ಕಾರದ ಸಂಸ್ಥೆಯೊಂದೇ ಹೀಗೆ ತಾರತಮ್ಯ ಮಾಡಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದೀರ್ಘ ಕಾನೂನು ಹೋರಾಟದ ನಡುವೆಯೇ ಮಹಿಳೆಗೆ ಈಗಾಗಲೇ ನಿವೃತ್ತಿಯ ವಯಸ್ಸಾಗಿದೆ. ಹೀಗಾಗಿ ಈಗ ಉದ್ಯೋಗ ನೀಡಲು ಸಾಧ್ಯವಿಲ್ಲದ ಕಾರಣ ಅವರಿಗೆ ತಕ್ಷಣವೇ ₹12 ಲಕ್ಷ ಜಂಟಿ ಪರಿಹಾರ ಪಾವತಿಸುವಂತೆ ಕೋರ್ಟ್ ಸೂಚಿಸಿದೆ. ಮಹಿಳೆಯರು ಭಾರವಾದ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಎನ್ನುವ ಹಳೆಯ ಮಾನಸಿಕತೆಗೆ ಈ ತೀರ್ಪು ಕನ್ನಡಿ ಹಿಡಿದಿದೆ. ಅರ್ಹತೆ ಇದ್ದರೆ ಲಿಂಗದ ಆಧಾರದ ಮೇಲೆ ಕೆಲಸ ನಿರಾಕರಿಸುವುದು ಕಾನೂನುಬಾಹಿರ ಎಂಬುದನ್ನು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ.


