ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಗೆಲ್ಲಲು ಸಾಧ್ಯವಾಗಲಿಲ್ಲ. ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿನ ಹಿಂದೆ ಮಹಾಭಾರತದ ಪಾಂಡವರ ಕತೆಯೊಂದು ತೆರೆದುಕೊಳ್ಳುತ್ತಿದೆ. ಈ ಕುರಿತು ಸುಪ್ರೀಂ ಕೋರ್ಟ್ ನಿವೃತ್ತ ಜಡ್ಜ್ ಟ್ವೀಟ್ ವೈರಲ್ ಆಗಿದೆ.
ಲಖನೌ(ನ.20) ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ಸೋಲಿಗೆ ಒಬ್ಬೊಬ್ಬರು ಒಂದೊಂದು ಕಾರಣ ನೀಡುತ್ತಿದ್ದಾರೆ. ಕೆಲ ಆಟಗಾರರನ್ನು ತಂಡಕ್ಕೆ ಸೇರಿಸಿದ್ದು, ಕೆಲವರನ್ನು ಪ್ಲೇಯಿಂಗ್ 11ನಿಂದ ಹೊರಗಿಟ್ಟಿದ್ದು, ಪಿಚ್, ಟಾಸ್ ಸೇರಿದಂತೆ ಹಲವು ಕಾರಣಗಳನ್ನು ಬೊಟ್ಟು ಮಾಡುತ್ತಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ನೀಡಿದ ಕಾರಣ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಗೆಲುವಿಗೆ ಮಹಾಭಾರತದ ಪಾಂಡವರ ಶಸ್ತ್ರಾಸ್ತ್ರ ಕಾರಣ ಎಂದು ಟ್ವೀಟ್ ಮಾಡಿದ್ದಾರೆ. ಕ್ರಿಕೆಟ್ ದಿಗ್ಗಜರು, ಪಂಡಿತರು ಗೆಲುವು ಹಾಗೂ ಸೋಲಿನ ಕಾರಣಗಳನ್ನು ವಿವರಿಸಿದರೂ ಇದೀಗ ಕಾಟ್ಜು ಮಾಡಿರುವ ಒಂದು ಟ್ವೀಟ್ ಭಾರಿ ವೈರಲ್ ಆಗಿದೆ.
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಲು ಮಹಾಭಾರತ ಕಾಲದ ಪಾಂಡವರ ಶಸ್ತ್ರಾಸ್ತ್ರ ಕಾರಣ ಎಂದಿರುವ ಮಾರ್ಕಂಡೇಯ ಕಾಟ್ಜು ವಿವರಣೆಯನ್ನೂ ನೀಡಿದ್ದಾರೆ. ಆಸ್ಟ್ರೇಲಿಯಾ ಮಹಾಭಾರತ ಕಾಲದಲ್ಲಿ ಪಾಂಡವರ ಅಸ್ತ್ರಗಳನ್ನು ಶೇಖರಿಸುವ ಸ್ಥಳವಾಗಿತ್ತು. ಮಹಭಾರತ ಕಾಲದಲ್ಲಿ ಈ ಸ್ಥಳವನ್ನು ಅಸ್ತ್ರಾಲಯ ಎಂದು ಕರೆಯಲಾಗುತ್ತಿತ್ತು. ಇದು ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿಗೆ ನೈಜ ಕಾರಣ ಎಂದು ಮಾರ್ಕಂಡೇಯ ಕಾಟ್ಜು ಟ್ವೀಟ್ ಮಾಡಿದ್ದಾರೆ.
29 ಓವರಲ್ಲಿ 1 ಫೋರ್ ಹೊಡೆಯಲಾಗದ ಪಿಚ್ ಯಾಕೆ ಬೇಕಿತ್ತು? ಬಿಸಿಸಿಐ ವಿರುದ್ದ ನಟ ಕಿಶೋರ್ ಗರಂ!
ಈ ಟ್ವೀಟ್‌ಗೆ ಪರ ವಿರೋಧಗಳು ವ್ಯಕ್ತವಾಗಿದೆ. ಈ ರೀತಿಯ ಟ್ವೀಟ್ ಮೂಲಕ ಸೋಲಿನ ನೋವನ್ನು ಮರೆಯಲು ಸಹಾಯ ಮಾಡುತ್ತಿರುವ ಎಲ್ಲರಿಗೂ ಧನ್ಯವಾದ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು ಈ ವಿಚಾರ ಪ್ರಧಾನಿ ಮೋದಿಗೆ ತಿಳಿದರೆ ಸಾಕು, ಮತ್ತೆ ಅಸ್ತ್ರಾಲಯ ಎಂದು ಮರುನಾಮಕರಣ ಮಾಡುತ್ತಾರೆ ಎಂದಿದ್ದಾರೆ.
ಮಾರ್ಕಂಡೇಯ ಕಾಟ್ಜು ತಮ್ಮ ಭಿನ್ನ ಪ್ರತಿಕ್ರಿಯೆಗಳಿಂದಲೇ ಹಲವು ಬಾರಿ ಸುದ್ದಿಯಾಗಿದ್ದಾರೆ. ಸಾವಿರಾರು ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ನೀರವ್ ಮೋದಿ ಗಡೀಪಾರು ವಿಚಾರದಲ್ಲೂ ಮಹತ್ವದ ಹೇಳಿಕೆ ನೀಡಿದ್ದರು. ನೀರವ್ ಭಾರತಕ್ಕೆ ಗಡೀಪಾರು ಮಾಡಿದರೆ ಆತನ ವಿರುದ್ಧ ಭಾರತದಲ್ಲಿ ನ್ಯಾಯಯುತ ವಿಚಾರಣೆ ನಡೆಯಲ್ಲ ಎಂದಿದ್ದರು. ಇನ್ನು ಹಿಜಾಬ್ ನಿಷೇಧದಿಂದ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿದೆ ಅನ್ನೋ ಅಭಿಪ್ರಾಯವನ್ನೂ ಕಾಟ್ಜು ವ್ಯಕ್ತಪಡಿಸಿದ್ದರು.
ಸೋತರೂ ನಿಮ್ಮೊಂದಿಗಿದೆ ಭಾರತ: ಡ್ರೆಸ್ಸಿಂಗ್ ರೂಂಗೇ ಹೋಗಿ ಟೀಂ ಇಂಡಿಯಾ ಸಂತೈಸಿದ ಪ್ರಧಾನಿ ಮೋದಿ
ಪ್ರಸಕ್ತ ವಿದ್ಯಮಾನಗಳ ಕುರಿತು ಮಾರ್ಕಂಡೇಯ ಕಾಟ್ಜು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇದೀಗ ಐಸಿಸಿ ವಿಶ್ವಕಪ್ ಫೈನಲ್ ಕುರಿತು ನೀಡಿರುವ ಪ್ರತಿಕ್ರಿಯೆ ಹೊಸ ಅಲೆ ಸೃಷ್ಟಿಸಿದೆ.
