Waqf Amendment Act: ಕೇಂದ್ರ ಸರ್ಕಾರದ ಮಹತ್ವದ ವಕ್ಫ್ ತಿದ್ದುಪಡಿ ಕಾಯ್ದೆಯ ಕೆಲ ನಿಯಮಗಳಿಗೆ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು, ಹೀಗಾಗಿ ಕಾಯ್ದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸುವ ಅರ್ಜಿಗಳು ಇತ್ಯರ್ಥವಾಗುವವರೆಗೆ ಈ ಕಾಯ್ದೆಯ ಕೆಲ ನಿಬಂಧನೆಗಳನ್ನು ಸ್ಥಗಿತಗೊಳಿಸಲಾಗಿದೆ.
ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆಯ ಕೆಲ ನಿಯಮಗಳಿಗೆ ಸುಪ್ರೀಂಕೋರ್ಟ್ ತಡೆ
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವದ ವಕ್ಫ್ ತಿದ್ದುಪಡಿ ಕಾಯ್ದೆಯ ಕೆಲ ನಿಯಮಗಳಿಗೆ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು ತಡೆ ಹೇರಿದೆ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ವಕ್ಪ್ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ನಡೆದಿತ್ತು. ಈ ಪ್ರಕರಣಗಳ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇದರಲ್ಲಿರುವ ಕೆಲ ವಿಚಾರಗಳು ನಿರಂಕುಶ ಅಧಿಕಾರಕ್ಕೆ ಕಾರಣವಾಗುತ್ತವೆ ಎಂದು ಹೇಳಿ ಆಕ್ಷೇಪ ವ್ಯಕ್ತಪಡಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ. ಮಸಿಹ್ ಅವರ ಪೀಠವು, ಇಡೀ ಶಾಸನವನ್ನು ತಡೆಹಿಡಿಯಲು ಯಾವುದೇ ಪ್ರಕರಣ ಮಾಡಲಾಗಿಲ್ಲ, ಆದರೆ ಇದರ ಕೆಲ ವಿಭಾಗಗಳಿಗೆ ಸ್ವಲ್ಪ ರಕ್ಷಣೆ ಬೇಕು ಎಂದು ಹೇಳಿದರು. ಹೀಗಾಗಿ ಕಾಯ್ದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸುವ ಅರ್ಜಿಗಳು ಇತ್ಯರ್ಥವಾಗುವವರೆಗೆ ಈ ಕಾಯ್ದೆಯ ಕೆಲ ನಿಬಂಧನೆಗಳನ್ನು ಸ್ಥಗಿತಗೊಳಿಸಲಾಗಿದೆ.
ವಕ್ಫ್ ತಿದ್ದುಪಡಿ ಕಾಯ್ದೆಯ 3 ವಿವಾದಿತ ನಿಯಮಗಳಿಗೆ ಸುಪ್ರೀಂಕೋರ್ಟ್ ತಡೆ ನೀಡಿದ್ದು, ವಕ್ಫ್ ತಿದ್ದುಪಡಿ ಕಾಯ್ದೆಗೆ ಪೂರ್ಣ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿವಕ್ಫ್ ಕಾಯ್ದೆಗೆ ಸಂಬಂಧಿಸಿ ಮಧ್ಯಂತರ ಆದೇಶ ನೀಡಿದೆ. ಮೋದಿ ಸರ್ಕಾರ ಮಾಡಿದ್ದ 3 ವಿವಾದಿತ ಅಂಶಗಳಿಗೆ ಅಂತಿಮ ಆದೇಶ ಬರುವವರೆಗೆ ತಾತ್ಕಾಲಿಕವಾಗಿ ಕೋರ್ಟ್ ತಡೆ ನೀಡಿದೆ. ಆದರೆ ಇಡೀ ಕಾಯ್ದೆಗೆ ತಡೆ ನೀಡಬೇಕು ಎಂಬ ವಾದವನ್ನು ಸುಪ್ರೀಂಕೋರ್ಟ್ ಒಪ್ಪಿಲ್ಲ.
ಯಾವ ನಿಯಮಗಳಿಗೆ ಸುಪ್ರೀಂಕೋರ್ಟ್ ತಡೆ
- 1. ನೊಂದಣೆಯಿಲ್ಲದೇ ಬಳಕೆಯಿಂದಾಗಿ ವಕ್ಫ್ ಆದ ಆಸ್ತಿ ಡಿ ನೋಟಿಫಿಕೇಷನ್ ಮಾಡುವ ಅಧಿಕಾರ ಜಿಲ್ಲಾಧಿಕಾರಿಗೆ
- 2. ವಕ್ಫ್ಗೆ ಆಸ್ತಿ ದಾನ ಮಾಡಲು 5 ವರ್ಷ ಕಡ್ಡಾಯ ಇಸ್ಲಾಂ ಆಚರಣೆ ಮಾಡಿರಬೇಕು
- 3. ವಕ್ಫ್ ಬೋರ್ಡ್ ಸದಸ್ಯರಲ್ಲಿ ಮುಸ್ಲಿಮೇತರರಿಗೂ ಅವಕಾಶ
- ಈ ಮೂರು ನಿಯಮಗಳಿಗೆ ಸುಪ್ರೀಂಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
- ಸುಪ್ರೀಂ ಆದೇಶ ಏನು..?
- 1. ವಕ್ಫ್ ತಿದ್ದುಪಡಿ ಕಾಯ್ದೆಗೆ ಪೂರ್ಣ ತಡೆ ನೀಡಲು ಸುಪ್ರೀಂಕೋರ್ಟ್ ನಕಾರ
- 2. ವಕ್ಫ್ ಕಾಯ್ದೆಯ ವಿವಾದಿತ 3 ಅಂಶಗಳಿಗಷ್ಟೇ ತಡೆ ನೀಡಿದ ಸುಪ್ರೀಂಕೋರ್ಟ್
- 3. ರಾಜ್ಯದ ವಕ್ಫ್ ಬೋರ್ಡ್ನ 11 ಸದಸ್ಯರಲ್ಲಿ 3ಕ್ಕಿಂತ ಹೆಚ್ಚು ಮುಸ್ಲಿಮೇತರರು ಇರುವಂತಿಲ್ಲ
- 4. ಕೇಂದ್ರೀಯ ವಕ್ಫ್ ಬೋರ್ಡ್ನಲ್ಲಿ ನಾಲ್ವರಿಗಿಂತ ಹೆಚ್ಚು ಮುಸ್ಲಿಮೇತರರಿಗೆ ಅವಕಾಶ ಇಲ್ಲ
- 5. ವಕ್ಫ್ ಆಸ್ತಿಗಳ ಕಡ್ಡಾಯ ನೊಂದಣಿ ಮಾಡಿಕೊಳ್ಳಬೇಕೆಂಬ ನಿಯಮಕ್ಕೆ ತಡೆ ಇಲ್ಲ
- 6. ಇಸ್ಲಾಂ ಆಚರಿಸುವ ವ್ಯಕ್ತಿ ಯಾರೆಂದು ನಿರ್ಧರಿಸಲು ನಿಯಮ ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ
- 7. ಜಿಲ್ಲಾಧಿಕಾರಿಗಳಿಗೆ ವಕ್ಫ್ ಆಸ್ತಿ ಮಾಲೀಕತ್ವ ನಿರ್ಧರಿಸುವ ಅಧಿಕಾರ ಇಲ್ಲ
- 8. ವಕ್ಫ್ ಆಸ್ತಿ ವಿವಾದಗಳನ್ನು ಕೋರ್ಟ್ಗಳು ಮಾತ್ರ ಇತ್ಯರ್ಥಪಡಿಸಬೇಕು, ಅಧಿಕಾರಿಗಳಲ್ಲ
- 9. ವಿವಾದ ಇತ್ಯರ್ಥವಾಗುವವರೆಗೆ 3ನೇ ವ್ಯಕ್ತಿಗೆ ವಕ್ಫ್ ಆಸ್ತಿ ಹಕ್ಕು ವರ್ಗಾವಣೆಯಿಲ್ಲ
- 10. ವಕ್ಫ್ ಆಸ್ತಿಗಳ ನೊಂದಣಿಗೆ 6 ತಿಂಗಳ ಡೆಡ್ಲೈನ್ ವಿಸ್ತರಣೆ ಮಾಡಿ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಕೇಂದ್ರ ಸರ್ಕಾರದ ಹೊಸ ಕಾನೂನು, ವಕ್ಫ್ ಆಸ್ತಿ ಮಾಲೀಕತ್ವಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಜಿಲ್ಲಾಧಿಕಾರಿಗೆ ಅಂತಿಮ ಮಧ್ಯಸ್ಥಗಾರನ ಅಧಿಕಾರ ನೀಡಿತ್ತು. ಕಲೆಕ್ಟರ್ ತಮ್ಮ ವರದಿಯಲ್ಲಿ ಆಸ್ತಿ ಸಂಪೂರ್ಣವಾಗಿ ಅಥವಾ ಭಾಗಶಃ ವಿವಾದದಲ್ಲಿದೆ ಅಥವಾ ಸರ್ಕಾರಿ ಆಸ್ತಿಯಾಗಿದೆ ಎಂದು ಉಲ್ಲೇಖಿಸಿದರೆ, ಆಸ್ತಿಯ ಅಂತಹ ಭಾಗಕ್ಕೆ ಸಂಬಂಧಿಸಿದ ವಕ್ಫ್ ಅನ್ನು ನೋಂದಾಯಿಸಲಾಗುತ್ತಿರಲಿಲ್ಲ. ಈ ವಿವಾದವನ್ನು ಸಮರ್ಥ ನ್ಯಾಯಾಲಯ ನಿರ್ಧರಿಸದ ಹೊರತು ಜಿಲ್ಲಾಧಿಕಾರಿ ಇದರ ಬಗ್ಗೆ ಕ್ರಮ ಕೈಗೊಳ್ಳುವಂತಿಲ್ಲ ಎಂದು ಈಗ ಸುಪ್ರೀಂಕೋರ್ಟ್ ಆದೇಶ ನೀಡಿದೆ.
