ಕ್ಯಾನ್ಸರ್ ಔಷಧಿಗಳ ಲಾಭಾಂಶವನ್ನು ಶೇ.30ಕ್ಕೆ ಮಿತಿಗೊಳಿಸಿರುವ ಕೇಂದ್ರದ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿದೆ. ತಯಾರಿಕಾ ವೆಚ್ಚಕ್ಕಿಂತ ನೂರಾರು ಪಟ್ಟು ಹೆಚ್ಚಿನ ದರಕ್ಕೆ ಔಷಧಗಳನ್ನು ಮಾರಾಟ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಇತರ ಎಲ್ಲಾ ಅಗತ್ಯ ಔಷಧಿಗಳ ದರಕ್ಕೂ ಏಕೆ ಮಿತಿ ಹೇರಬಾರದು ಎಂದು ಸರ್ಕಾರವನ್ನು ಪ್ರಶ್ನಿಸಿದೆ.

ನವದೆಹಲಿ: ಕ್ಯಾನ್ಸರ್‌ ಔಷಧಿಗಳ ವ್ಯಾಪಾರ ಲಾಭಾಂಶವನ್ನು ಗರಿಷ್ಠ ಚಿಲ್ಲರೆ ಬೆಲೆಯ (ಎಂಆರ್‌ಪಿ) ಶೇ.30ಕ್ಕೆ ಮಿತಿಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಸೋಮವಾರ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ‘ಇದರಲ್ಲಿ ಸಂತಸ ಪಡುವಂಥದ್ದೇನೂ ಇಲ್ಲ. ತಯಾರಿಕಾ ವೆಚ್ಚಕ್ಕಿಂತ ನೂರಾರು ಪಟ್ಟು ಹೆಚ್ಚಿನ ದರಕ್ಕೆ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಇದೇ ವೇಳೆ, ಇತರ ಎಲ್ಲಾ ಅಗತ್ಯ ಔಷಧಿಗಳ ದರ ಹಾಗೂ ಲಾಭಾಂಶಕ್ಕೂ ಏಕೆ ಮಿತಿ ಹೇರಬಾರದು ಎಂದು ಸರ್ಕಾರವನ್ನು ಪ್ರಶ್ನಿಸಿದೆ.

ನ್ಯಾ. ವಿಕ್ರಂನಾಥ್‌ ಮತ್ತು ನ್ಯಾ. ಸಂದೀಪ್‌ ಮೆಹ್ತಾ ಪೀಠ

ಈ ವಿಚಾರಣೆ ನಡೆಸಿದ ನ್ಯಾ. ವಿಕ್ರಂನಾಥ್‌ ಮತ್ತು ನ್ಯಾ. ಸಂದೀಪ್‌ ಮೆಹ್ತಾ ಅವರಿದ್ದ ಪೀಠ, ‘ಕೆಲ ಔಷಧಗಳನ್ನು ತಯಾರಿಕಾ ವೆಚ್ಚಕ್ಕಿಂತ ನೂರಾರು ಪಟ್ಟು ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕೇವಲ 11 ರು. ತಯಾರಿಕಾ ವೆಚ್ಚದ ಸಲೈನ್‌ ಬಾಟಲಿಯನ್ನು 270 ರು.ಗೆ ಮಾರಾಟ ಮಾಡಲಾಗುತ್ತಿದೆ. ಭಾರತದಲ್ಲೇ ತಯಾರಾಗುವ ಕಾರ್ಡಿಯಾಕ್ ಸ್ಟಂಟ್ ವೆಚ್ಚ 5,000 ರು. ಆಗಿದ್ದರೂ ಆಸ್ಪತ್ರೆಗಳು 25,000 ರು.ಗೂ ಹೆಚ್ಚು ದರಕ್ಕೆ ಮಾರಾಟ ಮಾಡುತ್ತಿವೆ. 28 ರು. ವೆಚ್ಚದ ಅಜಿಥ್ರೋಮೈಸಿನ್ ಆಂಟಿಬಯೋಟಿಕ್ ಮಾತ್ರೆಗಳನ್ನು 70 ರೂ.ಗೆ ಮಾರಲಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿತು.

ತಯಾರಿಕಾ ವೆಚ್ಚಕ್ಕಿಂತ 400 ಪಟ್ಟು ಹೆಚ್ಚು ದರಕ್ಕೆ ಮಾರಾಟ

ಇದೇ ವೇಳೆ, ‘ಸಾರಿಗೆ, ಕಚ್ಚಾವಸ್ತು ಹಾಗೂ ಸಂಶೋಧನಾ ವೆಚ್ಚಗಳು ಎಷ್ಟೇ ಇದ್ದರೂ ಅವು ಈಗಾಗಲೇ ಎಂಆರ್‌ಪಿಯಲ್ಲಿ ಸೇರಿರುತ್ತವೆ. ಹೀಗಿರುವಾಗ ತಯಾರಿಕಾ ವೆಚ್ಚಕ್ಕಿಂತ 400 ಪಟ್ಟು ಹೆಚ್ಚು ದರಕ್ಕೆ ಮಾರಾಟ ಮಾಡಲು ಹೇಗೆ ಅವಕಾಶ ನೀಡುತ್ತೀರಿ? ಕ್ಯಾನ್ಸರ್‌ ಔಷಧದಂತೆಯೇ ಇತರ ಎಲ್ಲಾ ಅಗತ್ಯ ಔಷಧಿಗಳ ದರಕ್ಕೂ ಏಕೆ ಮಿತಿ ಹೇರಬಾರದು?’ ಎಂದು ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿತು.