ಒಂದೇ ದಿನಕ್ಕೆ ಹಲವು ಶ್ರೀಮಂತರನ್ನು ಸೂಪರ್ ಮಾರ್ಕೆಟ್ ಸುಮೇಶಣ್ಣ ಹಿಂದಿಕ್ಕಿದ್ದಾರೆ. ಖಾತೆಯಲ್ಲಿ ಬರೋಬ್ಬರಿ 3500 ಕೋಟಿ ರೂಪಾಯಿಯಿಂದ ಸುಮೇಶ್ ಒಂದೆ ರಾತ್ರಿಯಲ್ಲಿ ಬಿಲೇನಿಯರ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಕೊಚ್ಚಿ (ಅ.09) ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ಹಲವು ಏಷ್ಯಾದ ಶ್ರೀಮಂತರು ಭಾರತದಲ್ಲಿದ್ದಾರೆ. ಈ ದಿಗ್ಗಜರನ್ನು ಹೊರತುಪಡಿಸಿದರೆ 100ಕ್ಕೂ ಹೆಚ್ಚು ಬಿಲೇನಿಯರ್ಸ್ ಭಾರತದಲ್ಲಿದ್ದಾರೆ. ವಿಶೇಷ ಅಂದರೆ ಸೂಪರ್ ಮಾರ್ಕೆಟ್ ಮಾಲೀಕ ಸುಮೇಶ್ ಕುಮಾರ್ ಒಂದೇ ದಿನ ಹಲವು ಶ್ರೀಮಂತರ ಹಿಂದಿಕ್ಕಿ ಬಿಲೇನಿಯರ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸುಮೇಶ್ ಕುಮಾರ್ ಉಳಿತಾಯ ಬರೋಬ್ಬರಿ 3500 ಕೋಟಿ ರೂಪಾಯಿ. ಸುಮೇಶ್ ಕುಮಾರ್ ಇದೀಗ ಟಾಕ್ ಆಫ್ ದಿ ಟೌನ್ ಆಗಿ ಹೊರಹೊಮ್ಮಿದ್ದಾರೆ.

ಒಂದೇ ರಾತ್ರಿಯಲ್ಲಿ ಶ್ರೀಮಂತನಾದ ಸುಮೇಶ್ ಕುಮಾರ್

ಸುಮೇಶ್ ಕುಮಾರ್ ದರ್ಶನಾ ಸೂಪರ್ ಮಾರ್ಕೆಟ್ ಮಾಲೀಕ. ಕೊಚ್ಚಿ ಸಮೀಪದಲ್ಲಿರುವ ಈ ಸೂಪರ್ ಮಾರ್ಕೆಟ್ ಉತ್ತಮ ವ್ಯಾಪಾರ ವಹಿವಾಟಿನಿಂದ ಗುರುತಿಸಿಕೊಂಡಿದೆ. ಸುಮೇಶ್ ಕುಮಾರ್ ಮೊಬೈಲ್‌ಗೆ ಬ್ಯಾಂಕ್‌ನಿಂದ ಸಂದೇಶವೊಂದು ಬಂದಿದೆ. ಚೆಕ್ ಮಾಡಿದಾಗ ಅಚ್ಚರಿಯಾಗಿದೆ. 7 ಕೋಟಿ ರೂಪಾಯಿ ಕ್ರೆಡಿಟ್ ಆಗಿದೆ ಎಂಬ ಸಂದೇಶ. ಈ ಸಂದೇಶ ನೋಡಿದ ಬೆನ್ನಲ್ಲೇ ಇತರ ಕೆಲ ಸಂದೇಶಗಳು ಸುರೇಶ್ ಕುಮಾರ್‌ಗೆ ಆಘಾತ ನೀಡಿದೆ. 3.5 ಕೋಟಿ, 10 ಕೋಟಿ ರೂಪಾಯಿ ಸೇರಿದಂತೆ ಹಲವು ರೀತಿಯಲ್ಲಿ ಹಣ ಜಮೆಯಾಗಿದೆ. ಹೀಗಾಗಿ ಖಾತೆ ಬ್ಯಾಲೆನ್ಸ್ ನೋಡಿದ ಸುಮೇಶ್ ಕುಮಾರ್ ಕಂಗಾಲಾಗಿದ್ದಾರೆ. ಕಾರಣ ಖಾತೆಯಲ್ಲಿ 3500 ಕೋಟಿ ರೂಪಾಯಿ ತೋರಿಸಿದೆ.

ಏನಿದು 3500 ಕೋಟಿ ರೂ ಕತೆ?

ಸುಮೇಶ್ ಕುಮಾರ್ ಖಾತೆಯ 3500 ಕೋಟಿ ರೂಪಾಯಿ ಹಲವು ತಳಮಳ ಸೃಷ್ಟಿಸಿದೆ. ಹೀಗಾಗಿ ಸುಮೇಶ್ ಕುಮಾರ್ ತಕ್ಷಣವೇ ತನ್ನ ಬ್ಯಾಂಕ್ ಸಿಬ್ಬಂದಿಗಳ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಬಳಿಕ ನೇರವಾಗಿ ತಮ್ಮ ಬ್ಯಾಂಕ್ ಶಾಕೆಗೆ ತೆರಳಿದ್ದಾರೆ. ಸುಮೇಶ್ ಕುಮಾರ್ ಖಾತೆಯಲ್ಲಿನ ಕೋಟಿ ಕೋಟಿ ರೂಪಾಯಿ ಮಾಹಿತಿ ನೀಡಿದ್ದಾರೆ. ಈ ವೇಳೆ ಬ್ಯಾಂಕ್ ಸಿಬ್ಬಂದಿಗಳು ಪರಿಶೀಲಿಸಿ ತಾಂತ್ರಿಕ ಸಮಸ್ಯೆಯಿಂದ 3500 ಕೋಟಿ ರೂಪಾಯಿ ಖಾತೆಯಲ್ಲಿ ತೋರಿಸುತ್ತಿದೆ. ಕೆಲ ಹೊತ್ತಿನಲ್ಲೇ ಸರಿಪಡಿಸುವುದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲ ಕೆಲ ಹೊತ್ತು ಬ್ಯಾಂಕ್ ಖಾತೆ ಲಾಕ್ ಮಾಡುವುದಾಗಿ ಹೇಳಿದ್ದಾರೆ.

ಸಂಜೆ ವೇಳೆಗೆ ಬ್ಯಾಂಕ್ ಸಿಬ್ಬಂದಿಗಳು ಕರೆ ಮಾಡಿ ತಾಂತ್ರಿಕ ಸಮಸ್ಯೆ ಬಗೆಹರಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಸುಮೇಶ್ ಕುಮಾರ್ ತಮ್ಮ ಖಾತೆ ಪರಿಶೀಲಿಸಿದಾಗ ಕೋಟಿ ಕೋಟಿ ರೂಪಾಯಿ ಮಾಯವಾಗಿದೆ. ಆದರೆ ಸುಮೇಶ್ ಕುಮಾರ್ ಆತಂಕ ಇಲ್ಲಿಗೆ ಅಂತ್ಯಗೊಂಡಿಲ್ಲ. ಈಗಾಗಲೇ ತೆರಿಗೆ ಪಾವತಿಸುವ ಸುಮೇಶ್ ಕುಮಾರ್, ಇದೀಗ ದುಬಾರಿ ಟ್ರಾನ್ಸಾಕ್ಷನ್‌ನಿಂದ ಆದಾಯ ತೆರಿಗೆ ಇಲಾಖೆ ನೋಟಿಸ್ ಆತಂಕ ಎದುರಿಸುತ್ತಿದ್ದಾರೆ. ಈ ಕುರಿತು ಬ್ಯಾಂಕ್ ಸಿಬ್ಬಂದಿಗಳು ಯಾವುದೇ ಆತಂಕದ ಅವಶ್ಯಕತೆ ಇಲ್ಲ ಎಂದು ಭರವಸೆ ನೀಡಿದ್ದಾರೆ.