ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಭದ್ರತಾ ಲೋಪ: ಮಾಜಿ ಡಿಸಿಎಂ ಸುಖ್ಬೀರ್ ಹತ್ಯೆಗೆ ಯತ್ನ
ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಅವರ ಮೇಲೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಸುಖ್‌ಬೀರ್ ಸಿಂಗ್ ಬಾದಲ್ ಅವರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ
ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಅವರ ಮೇಲೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಸುಖ್‌ಬೀರ್ ಸಿಂಗ್ ಬಾದಲ್ ಅವರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಸಿಖ್ ಸಮುದಾಯದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಪಂಜಾಬ್‌ನ ಗೋಲ್ಡನ್ ಟೆಂಪಲ್‌ನಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದ ಕೂಡಲೇ ಅಲ್ಲಿದ್ದ ಅನೇಕರು ದಾಳಿಕೋರನನ್ನು ಹಿಡಿದು ಹಲ್ಲೆ ನಡೆಸಿದ್ದಾರೆ.
62 ವರ್ಷದ ಸುಖ್ಬೀರ್ ಸಿಂಗ್ ಬಾದಲ್ ಪಂಜಾಬ್ ಮಾಜಿ ಉಪಮುಖ್ಯಮಂತ್ರಿಯಾಗಿದ್ದು, ಸಿಖ್ ಧರ್ಮ ಗ್ರಂಥ, 'ಗುರು ಗ್ರಂಥ ಸಾಹೀಬ್'ವನ್ನು ಅವಮಾನಿಸಿದ್ದ ವಿವಾದಿತ ಸಂತ ರಾಮ್ ರಹೀಂಗೆ ಕ್ಷಮೆ ನೀಡಿದ್ದ ಕಾರಣಕ್ಕೆ ಸಿಖ್ ಧಾರ್ಮಿಕ ಮಂಡಳಿ ಅಕಾಲ್ ತಖ್ತ್‌ನಿಂದ ಶಿಕ್ಷೆಗೊಳಗಾಗಿದ್ದರು. ಗೋಲ್ಡನ್ ಟೆಂಪಲ್ ಅವರಣದಲ್ಲಿ ಈ ಶಿಕ್ಷೆಯನ್ನು ಪೂರೈಸುತ್ತಿದ್ದ ವೇಳೆ ಈ ಅವಘಡ ನಡೆದಿದೆ. ದಾಳಿಯ ವೀಡಿಯೋ ಈಗ ವೈರಲ್ ಆಗಿದೆ. ದಾಳಿ ನಡೆಸಿದ ವ್ಯಕ್ತಿಯನ್ನು ನಾರಾಯಣ ಚೌರ ಎಂದು ಗುರುತಿಸಲಾಗಿದೆ.
ಸಿಖ್ ಧರ್ಮಗ್ರಂಥಕ್ಕೆ ಅವಮಾನ ಎಸಗಿದ್ದ ವಿವಾದಿತ ಸಂತ ರಾಮ್ ರಹೀಂಗೆ ಕ್ಷಮೆ ನೀಡಿದ್ದ ಕಾರಣಕ್ಕೆ ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿಯೂ ಆಗಿರುವ ಸುಖಬೀರ್ ಸಿಂಗ್ ಬಾದಲ್ ಅವರಿಗೆ ಸಿಖ್ ಧಾರ್ಮಿಕ ನ್ಯಾಯ ಮಂಡಳಿ ಅಕಾಲ್ ತಖ್ತ್ ಶಿಕ್ಷೆ ವಿಧಿಸಿತ್ತು. ಸಿಖ್ ಧಾರ್ಮಿಕ ಕ್ಷೇತ್ರವಾದ ಸ್ವರ್ಣಮಂದಿರದಲ್ಲಿ ಟಾಯ್ಲೆಟ್ ಸ್ವಚ್ಛಗೊಳಿಸಬೇಕು ಭೋಜನ ಶಾಲೆಯಾದ ಲಂಗರ್‌ನಲ್ಲಿ ಕೆಲಸ ಮಾಡಬೇಕು, ಕಾವಲುಗಾರನಾಗಿ ಸೇವೆ ಸಲ್ಲಿಸಬೇಕು ಎಂದು ಶಿಕ್ಷೆ ನೀಡಲಾಗಿತ್ತು. ಅದರಂತೆ ನಿನ್ನೆಯಿಂದ ಸುಖ್ಬೀರ್ ಸಿಂಗ್ ಬದಲು ಅವರು ಸ್ವರ್ಣಮಂದಿರದಲ್ಲಿ ಕಾವಲುಗಾರನಾಗಿ ಸೇವೆ ಸಲ್ಲಿಸಿ ಶಿಕ್ಷೆ ಅನುಭವಿಸಿದರು.
ಮಧ್ಯಾಹ್ನ 12 ಗಂಟೆಯಿಂದ 1 ತಾಸು ಸ್ವರ್ಣ ಮಂದಿರದ ಮುಖ್ಯದ್ವಾರದಲ್ಲಿ ಸೇವಕರ ಉಡುಪು ಧರಿಸಿ, ಕೈಯಲ್ಲಿ ಈಟಿ ಹಿಡಿದು, ಕತ್ತಿನಲ್ಲಿ ತಾವು ಮಾಡಿದ ತಪ್ಪು ಮುದ್ರಿತವಾಗಿದ್ದ ಫಲಕ ಹಾಕಿಕೊಂಡು ಗಾಲಿಕುರ್ಚಿಯಲ್ಲಿ ಕುಳಿತು ಶಿಕ್ಷೆ ಅನುಭವಿಸಿದರು. ಬಳಿಕ ಲಂಗರ್‌ನಲ್ಲಿ (ಭೋಜನ ಶಾಲೆ) ಊಟ ಮಾಡಿದ ತಟ್ಟೆಗಳನ್ನು ಸ್ವೀಕರಿಸಿ ಶುಚಿಗೊಳಿಸಲು ಸಹಕರಿಸಿದರು. ಕಾಲಿಗೆ ಪೆಟ್ಟಾಗಿದ್ದ ಕಾರಣ ಶೂ ಪಾಲಿಷ್ ಮಾಡಲಿಲ್ಲ ಹಾಗೂ ಟಾಯ್ಲೆಟ್ ತೊಳೆಯಲಿಲ್ಲ. ಇದೇ ವೇಳೆ, ಇವರ ಜತೆ ಶಿಕ್ಷೆಗೆ ಒಳಗಾಗಿದ ಆಕಾಲಿ ದಳದ ಮಾಜಿ ಸಚಿವರು ಸಹ ಕತ್ತಿಗೆಗೆ ಫಲಕ ಧರಿಸಿಕೊಂಡು, ಶೌಚಾಲಯ ಶುಚಿಗೊಳಿಸಿ, ಭಕ್ತರಿಗೆ ಊಟ ತಿಂಡಿಗಳನ್ನು ಬಡಿಸಿ ಪಾತ್ರೆ ತೊಳೆದು, ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದರು. ಜೊತೆಗೆ 1 ತಾಸು ಕೀರ್ತನೆಗಳನ್ನು ಆಲಿಸಿ, ಸಿಖ್ಖರ ಪ್ರಾರ್ಥನೆಗಳನ್ನು ಪಾಲಿಸುವ ಮೂಲಕ ತಮ್ಮ ಶಿಕ್ಷಾ ಅವಧಿಯನ್ನು ಪೂರ್ಣಗೊಳಿಸಿದರು. ಈ ನಡುವೆ ಅಕಾಲಿ ತಖ್ತ್ ನಿರ್ದೇಶನದಂತೆ ಆಕಾಲಿ ದಳಕ್ಕೆ ಹೊಸ ಅಧ್ಯಕ್ಷರ ಶೋಧ ಆರಂಭವಾಗಿದೆ.