ಡೀಪ್‌ಫೇಕ್‌ ತಂತ್ರಜ್ಞಾನ ಬಳಸಿ ನಕಲಿ ಫೋಟೋ ಮತ್ತು ವಿಡಿಯೋ ರೂಪಿಸಿರುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣಗಳಿಗೆ ನೀಡಲಾಗಿದ್ದ ಸಲಹಾವಳಿಗಳ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಸಲಹಾವಳಿಗಳಿಗೆ ಕಾನೂನು ರೂಪ ನೀಡಿ ಇನ್ನೊಂದು ವಾರದಲ್ಲಿ ಕಠಿಣ ನಿಯಮ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ನವದೆಹಲಿ: ಡೀಪ್‌ಫೇಕ್‌ ತಂತ್ರಜ್ಞಾನ ಬಳಸಿ ನಕಲಿ ಫೋಟೋ ಮತ್ತು ವಿಡಿಯೋ ರೂಪಿಸಿರುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣಗಳಿಗೆ ನೀಡಲಾಗಿದ್ದ ಸಲಹಾವಳಿಗಳ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಸಲಹಾವಳಿಗಳಿಗೆ ಕಾನೂನು ರೂಪ ನೀಡಿ ಇನ್ನೊಂದು ವಾರದಲ್ಲಿ ಕಠಿಣ ನಿಯಮ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ಸೋಮವಾರವಷ್ಟೇ ಖ್ಯಾತ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಮತ್ತು ಅವರ ಪುತ್ರಿ ಸಾರಾ ಒಳಗೊಂಡ ಡೀಪ್‌ಫೇಕ್‌ ವಿಡಿಯೋವೊಂದು ವೈರಲ್‌ ಆಗಿತ್ತು. ಅದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಚಿವ ರಾಜೀವ್‌, ‘ಡೀಪ್‌ಫೇಕ್‌ ವಿಡಿಯೋಗಳ ಕುರಿತು ನಮ್ಮ ಸಲಹಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಈ ಹಿಂದೆಯೇ ಆನ್‌ಲೈನ್‌ ತಾಣಗಳು ಮತ್ತು ಸಾಮಾಜಿಕ ಜಾಲತಾಣಗಳಿಗೆ ಸೂಚಿಸಿದ್ದೆವು. ಆದರೆ ಸಲಹಾವಳಿ ಪಾಲನೆ ಸಂಬಂಧ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಸಲಹಾವಳಿ ಬಿಡುಗಡೆ ವೇಳೆಯೇ ನಾವು ಸ್ಪಷ್ಟಪಡಿಸಿದ್ದಂತೆ, ಇದೀಗ ಅದನ್ನೇ ಮಾಹಿತಿ ತಂತ್ರಜ್ಞಾನ ಕಾಯ್ದೆ ರೂಪದಲ್ಲಿ ಇನ್ನೊಂದು ವಾರದಲ್ಲಿ ಬಿಡುಗಡೆ ಮಾಡಲಿದ್ದೇವೆ’ ಎಂದು ತಿಳಿಸಿದ್ದಾರೆ.

ಡೀಪ್ ಫೇಕ್ ವಿಡಿಯೋ ಪತ್ತೆ - ನಿಯಂತ್ರಣಕ್ಕೆ ಬೆಂಗಳೂರು ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಟಾಸ್ಕ್!

ಸಚಿನ್‌ಗೂ ಡೀಪ್‌ ಫೇಕ್‌ ಕಾಟ

ನವದೆಹಲಿ: ದೇಶದ ಹಲವು ನಟಿಯರು ಸೇರಿದಂತೆ ಅನೇಕರ ನಿದ್ದೆಗೆಡಿಸಿದ್ದ ಡೀಪ್‌ ಫೇಕ್‌ ಹಾವಳಿ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಅವರನ್ನೂ ಕಾಡಿದೆ. ಈ ಕುರಿತು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿನ್‌, ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ. ‘ಸ್ಕೈವಾರ್ಡ್‌ ಏವಿಯೇಟರ್‌ ಕ್ವೆಸ್ಟ್‌’ ಹೆಸರಿನ ನಕಲಿ ಆ್ಯಪ್‌ಗೆ ಸಚಿನ್‌ರ ವಿಡಿಯೋ ಬಳಕೆಯಾಗಿದ್ದು, ಸುಲಭವಾಗಿ ಹಣ ಮಾಡುವ ಬಗ್ಗೆ ಆ್ಯಪ್‌ ಮೂಲಕ ಆಮಿಷವೊಡ್ಡಲಾಗಿದೆ. ವಿಡಿಯೋದಲ್ಲಿ ಸಚಿನ್‌ರ ಮುಖ ಬಳಕೆ ಮಾಡಲಾಗಿದ್ದು ‘ಹಣ ಗಳಿಸುವುದು ಇಷ್ಟು ಸುಲಭ ಎಂದು ನನಗೂ ಗೊತ್ತಿರಲಿಲ್ಲ. ನನ್ನ ಮಗಳೂ (ಸಾರಾ) ಈ ಆ್ಯಪ್‌ ಬಳಸುತ್ತಾಳೆ’ಎಂದು ಸಚಿನ್‌ರ ಧ್ವನಿಯಲ್ಲೇ ಹೇಳಲಾಗಿದೆ. ನಕಲಿ ಆ್ಯಪ್‌ಗಳನ್ನು ಬಳಸದಂತೆ ಸಚಿನ್‌ ಮನವಿ ಮಾಡಿದ್ದು, ಇಂತಹ ಪ್ರಕರಣಗಳಲ್ಲಿ ಸಾಮಾಜಿಕ ತಾಣಗಳು ಎಚ್ಚರಿಕೆ ವಹಿಸಬೇಕು ಮತ್ತು ದೂರುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.

ಸಚಿನ್‌ರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್‌ ಚಂದ್ರಶೇಖರ್‌, ‘ಈ ಪ್ರಕರಣವನ್ನು ನಮ್ಮ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದ. ಸದ್ಯದಲ್ಲೇ ಕಠಿಣ ನಿಯಮಗಳನ್ನು ಜಾರಿ ಮಾಡುತ್ತೇವೆ’ ಎಂದಿದ್ದಾರೆ.

ಸಚಿನ್ ಮಗಳು ಸಾರಾ ಆನ್ಲೈನ್ ಗೇಮ್ ಆ್ಯಪ್ ಮೂಲಕ ದಿನಕ್ಕೆ 18 ಲಕ್ಷ ರೂ. ಗಳಿಸುತ್ತಾಳೆಂಬ ವಿಡಿಯೋ ನಿಜವೋ ಫೇಕೋ?