ಪ್ರಧಾನಿ ನರೇಂದ್ರ ಮೋದಿ ದಿಢೀರ್ ಆಗಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2023ರ ಗ್ರ್ಯಾಂಡ್ ಫಿನಾಲೆಯಲ್ಲಿ ಪಾಲ್ಗೊಂಡ ಯುವ ನವೋದ್ಯಮಿಗಳ ಜೊತೆ ಸಂವಾದ ನಡೆಸಿದ್ದಾರೆ. ಈ ವೇಳೆ ಸದ್ಯ ಎದುರಾಗುತ್ತಿರುವ ಡೀಪ್ ಫೇಕ್ ವಿಡಿಯೋ ಪತ್ತೆ ಹಚ್ಚಿ ನಿಯಂತ್ರಿಸಲು ಬೆಂಗಳೂರಿನ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಹೊಸ ಟಾಸ್ಕ್ ನೀಡಿದ್ದಾರೆ.
ನವದೆಹಲಿ(ಡಿ.19) ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2023ರ ಗ್ರ್ಯಾಂಡ್ ಫಿನಾಲೆ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದೆ. ದಿಡೀರ್ ಪ್ರಧಾನಿ ನರೇಂದ್ರ ಮೋದಿ ದೇಶದ 15,000 ಯುವಕರೊಂದಿಗೆ ಸಂವಾದ ನಡೆಸಿದ್ದಾರೆ. ಪ್ರತಿ ರಾಜ್ಯದ ವಿದ್ಯಾರ್ಥಿಗಳ ತಂಡದ ಜೊತೆ ಮೋದಿ ಸಂವಾದ ನಡೆಸಿ ಅವರ ಆವಿಷ್ಕಾರ ಕುರಿತು ಮಾಹಿತಿ ಪಡೆದಿದ್ದಾರೆ. ಇದೇ ವೇಳೆ ಯುವ ಸಮೂಹದ ಸಾಧನೆಯನ್ನು ಪ್ರಶಂಸಿದ್ದಾರೆ. ಆಯಾ ರಾಜ್ಯದ ವಿದ್ಯಾರ್ಥಿಗಳ ತಂಡ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, ಪವರ್ ಸೆಕ್ಟರ್, ಎನರ್ಜಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಂತ್ರಜ್ಞಾನ ಬಳಸಿ ಆವಿಷ್ಕಾರದ ಮಾಹಿತಿ ನೀಡಿದರು. ಹೀಗೆ ಬೆಂಗಳೂರಿನ ವಿದ್ಯಾರ್ಥಿಗಳು ಆರ್ಟಿಫೀಶಿಯಲ್ ಇಂಟಿಲಿಜೆನ್ಸ್ ಬಳಸಿ ಸೈಬರ್ ಸೆಕ್ಯೂರಿಟಿ ಮತ್ತಷ್ಟು ಪರಿಣಾಮಕಾರಿಯಾಗಿಸುವ ಆವಿಷ್ಕಾರದ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳ ಮಾತು ಕೇಳಿಸಿಕೊಂಡ ಮೋದಿ, ಸದ್ಯ ಎದುರಾಗಿರುವ ಡೀಪ್ ಫೇಕ್ ವಿಡಿಯೋಗಳ ಪತ್ತೆ ಹಚ್ಚುವುದು ಹಾಗೂ ನಿಯಂತ್ರಣಕ್ಕೆ ಹೊಸ ಆವಿಷ್ಕಾರದ ಅವಶ್ಯಕೆಯನ್ನು ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ಜೊತೆಗಿನ ಸಂವಾದ ಕಾರ್ಯಕ್ರಮಲ್ಲಿ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನ ಎಂಜಿನೀಯರಿಂಗ್ ವಿದ್ಯಾರ್ಥಿಗಳು, ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಹಾಗೂ ಮಶಿನ್ ಲರ್ನಿಂಗ್ ಮೂಲಕ, ಹ್ಯಾಕ್, ಸೈಬರ್ ದಾಳಿ, ಸೈಬರ್ ಸೆಕ್ಯೂರಿಟಿ ಕುರಿತು ಸಂವಾದ ನಡೆಸಿದ್ದಾರೆ. ವೈಯುಕ್ತಿ ದಾಖಲೆಗಳಾದ ಪಾಸ್‌ವರ್ಡ್, ಯೂಸರ್ ನೇಮ್ ಸೇರಿದಂತೆ ಹಲವು ಸೂಕ್ಷ್ಮ ಮಾಹಿತಿಗಳ ಕದಿಯುವಿಕೆ ಒಳಗೊಂಡ ಫಿಶಿಂಗ್ ಆ್ಯಟಾಕ್ ಪತ್ತೆ ಹಚ್ಚಿ ನಿಯಂತ್ರಣಕ್ಕೆ ಆರ್ಟಿಫೀಶಿಯಲ್ ಇಂಟಿಲಿಜೆನ್ಸ್ ಹಾಗೂ ಮಶಿನ್ ಲರ್ನಿಂಗ್ ಬಳಸಿಕೊಂಡಿದ್ದಾರೆ. ಈ ಕುರಿತು ವಿದ್ಯಾರ್ಥಿಗಳು ಪ್ರಧಾನಿ ಮೋದಿಗೆ ಮಾಹಿತಿ ನೀಡಿದ್ದಾರೆ.
ಈ ಮಾಹಿತಿ ಪಡೆದ ಪ್ರಧಾನಿ ಮೋದಿ, ಇದು ಡೈನಾಮಿಕ್ ಕ್ಷೇತ್ರವಾಗಿದೆ. ನೀವು ಸೈಬರ್ ಸೆಕ್ಯೂರಿಟಿ ನಿಯಂತ್ರಿಸಲು ಪತ್ತೆ ಹಚ್ಚಲು ಒಂದು ಮಾರ್ಗ ಕಂಡುಕೊಂಡರೆ, ಹ್ಯಾಕರ್ಸ್ ಮತ್ತೊಂದು ಮಾರ್ಗ ಹುಡುಕುತ್ತಾರೆ. ಹೀಗಾಗಿ ನೀವು ಸದಾ ಜಾಗರೂಕತೆಯಿಂದ ಆವಿಷ್ಕಾರ ಮಾಡುತ್ತಲೇ ಇರಬೇಕು. ಇಲ್ಲಿ ಪ್ರಮುಖ ವಿಚಾರ ಎಂದರೆ ನಿಮ್ಮ ಆವಿಷ್ಕಾರವನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಂಡರೆ ಒಳಿತು. ಆದರೆ ಹ್ಯಾಕಿಂಗ್ ಸೇರಿದಂತೆ ಸೈಬರ್ ಭದ್ರತೆಗೆ ಸವಾಲಾದರೆ ಅಪಾಯ. ನೀವು ಡೀಪ್ ಫೇಕ್ ವಿಡಿಯೋ ಕುರಿತು ಕೇಳಿರುತ್ತೀರಿ. ನೋಡುವರಿಗೆ ಇದು ಡೀಪ್ ಫೇಕ್ ಅನ್ನೋದು ಗೊತ್ತೆ ಆಗುವುದಿಲ್ಲ. ಎಲ್ಲವೂ ಅಸಲಿಯಾಗಿ ಕಾಣುತ್ತದೆ. ಹೀಗಾಗಿ ನಾವು ಯಾವುದೇ ವಿಡಿಯೋ ಹಾಗೂ ಫೋಟೋ ಮೇಲೆ ವಿಶ್ವಾಸವಿಡಲು, ಇದರು ಅಸಲಿಯೋ ನಕಲಿಯೋ ಅನ್ನೋದು ಗೊತ್ತಾಗಬೇಕು. ನೀವು ಈ ವಿಷಯವಾಗಿ ಈಗಾಗಲೇ ಕೆಲಸ ಮಾಡುತ್ತೀದ್ದೀರಿ. ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿ ಎಂದು ಮೋದಿ ಸೂಚಿಸಿದ್ದಾರೆ.
