ಹೂಡಿಕೆ ತಜ್ಞ ಹರ್ಷ್ ಗುಪ್ತಾ ಅವರು ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಕ್ಷೌರಿಕನೊಬ್ಬನ ಯಶೋಗಾಥೆಯನ್ನು ಹಂಚಿಕೊಂಡಿದ್ದಾರೆ. ತಿಂಗಳಿಗೆ ಲಕ್ಷಕ್ಕೂ ಹೆಚ್ಚು ಸಂಪಾದಿಸುವ ಈತ, ಸರ್ಕಾರಿ ಕೆಲಸಕ್ಕಿಂತ ತನ್ನ ವೃತ್ತಿಯ ಸ್ವಾತಂತ್ರ್ಯವೇ ಇಷ್ಟ ಎಂದಿದ್ದಾನೆ. ಈತನ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ನವದೆಹಲಿ: ಲೇಖಕ ಹಾಗೂ ಹೂಡಿಕೆ ತಜ್ಞ ಹರ್ಷ್ ಗುಪ್ತಾ ಅವರು ವಿಶೇಷ ಅನುಭವ ಒಂದನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಅವರ ಮನೆಗೆ ಹೇರ್‌ ಕಟಿಂಗ್‌ ಮಾಡಲು ಕ್ಷೌರಿಕನೊಬ್ಬ ಬಂದಿದ್ದ. ಆತನ ಜೀವನದ ಬಗ್ಗೆ ಹಂಚಿಕೊಂಡಿದ್ದು, ಸಖತ್‌ ಎಕ್ಸೈಟಿಂಗ್‌ ಆಗಿದೆ.

ಕತೆ ಹೀಗಿದೆ.. ಕ್ಷೌರಿಕ ಮೂಲತಃ ಉತ್ತರ ಪ್ರದೇಶದ ಅಜಂಗಢದವ. ಈತ ಸದ್ಯ ಮುಂಬೈನ ಅರ್ಬನ್ ಕಂಪನಿ’ (Urban Company) ಮೂಲಕ ಕ್ಷೌರಿಕನಾಗಿ ಕೆಲಸ ಮಾಡುತ್ತಿದ್ದಾನೆ. ದಿನಚರಿ ಹೇಗಿದೆ ಅಂದರೆ ವಾರದಲ್ಲಿ ಆರು ದಿನ ನಿರಂತರ ಕೆಲಸ. ಬೆಳಗ್ಗೆಯಿಂದ ರಾತ್ರಿಯವರೆಗೆ ಕಟಿಂಗ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಾರೆ. ದಿನ ನಿತ್ಯದ ಎಲ್ಲಾ ಖರ್ಚು, ವೆಚ್ಚಗಳನ್ನ ಕಳೆದರೆ ಅವರ ತಿಂಗಳ ಆದಾಯ ಒಂದು ಲಕ್ಷಕ್ಕೂ ಹೆಚ್ಚು! ಅವರ ಸಂಪಾದನೆ ಕೇಳಿದ ನೆಟ್ಟಿಗರು ದಂಗಾಗಿ ಹೋಗಿದ್ದಾರೆ.

ಈ ಸ್ಟೋರಿಯನ್ನ ಬರೆದು ಹರ್ಷ್‌ ಗುಪ್ತಾ ತಮ್ಮ ಮಾತನ್ನು ಮುಂದುವರಿಸಿದ್ದಾರೆ. ದೇಶದಲ್ಲಿ ಕೆಲಸಗಳಿಗೆ ಯಾವುದೇ ಕೊರತೆ ಇಲ್ಲ. ಕಷ್ಟಪಟ್ಟು ದುಡಿಯುವ ಮನಸ್ಸು ಇದ್ದರೆ ಯಾರು ಬೇಕಾದರೂ ಬೆಳೆಯಬಹುದು ಎಂದಿದ್ದಾರೆ. ಅಲ್ಲದೇ ಕ್ಷೌರಿಕ ಹೇಳಿರುವ ಮಾತು ಒಂದನ್ನು ಉಲ್ಲೇಖಿಸಿದ್ದಾರೆ. ನನಗೆ ಸರ್ಕಾರಿ ಕೆಲಸದ ಆಫರ್‌ ಬಂದರೂ ನಾನು ಅದನ್ನು ಒಪ್ಪಿಕೊಳ್ಳಲ್ಲ. ನನಗೆ ನನ್ನ ಕೆಲಸದಲ್ಲಿ ಸಿಗುವ ಸ್ವಾತಂತ್ರ್ಯವೇ ಇಷ್ಟ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ ಎಂದು ಅವರು ವಿವರಿಸಿದ್ದಾರೆ.

ಇದೇ ವೇಳೆ ಆತ ಉತ್ತರ ಪ್ರದೇಶದ ಮೂಲಸೌಕರ್ಯಗಳ ಬಗ್ಗೆಯೂ ಮಾತನ್ನಾಡಿದ್ದಾನಂತೆ. ಹಿಂದೆ ನಮ್ಮ ಊರಿನಿಂದ ಲಕ್ನೋಗೆ ಹೋಗಲು 7–8 ಗಂಟೆ ಬೇಕಾಗುತ್ತಿತ್ತು. ಈಗ ಅಷ್ಟೇ ಸಮಯದಲ್ಲಿ ಹೋಗಿ, ಊಟ-ಚಹಾ ಮುಗಿಸಿ ವಾಪಸ್ ಬರಬಹುದು. ರಸ್ತೆಗಳು ಎಷ್ಟು ಚೆನ್ನಾಗಿವೆ ಎಂದರೆ ಕೈಯಲ್ಲಿದ್ದ ಚಹಾ ಕೂಡ ಚೆಲ್ಲುವುದಿಲ್ಲ ಎಂದು ಬಣ್ಣಿಸಿದ್ದಾನೆ ಎಂದು ಹೇಳಿಕೊಂಡಿದ್ದಾರೆ.

ಪ್ರಾಮಾಣಿಕ ದುಡಿಮೆಗಾರ

ಇನ್ನು ಈ ಕ್ಷೌರಿಕ ತನ್ನ ಆದಾಯಕ್ಕೆ ಸರಿಯಾಗಿ ಟಿಡಿಎಸ್ (TDS) ಕಡಿತಗೊಳ್ಳುತ್ತದೆ. ನಿಯಮಿತವಾಗಿ ಐಟಿ ರಿಟರ್ನ್ಸ್ (ITR) ಸಲ್ಲಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳಿದ್ದಾನೆ. ತನ್ನ ಪುಟ್ಟ ಮಗನನ್ನು ಖಾಸಗಿ ಪ್ರೀ-ಸ್ಕೂಲ್‌ಗೆ ಸೇರಿಸಿದ್ದು, ಕುಟುಂಬ ಚೆನ್ನಾಗಿ ಬದುಕುತ್ತಿದೆ ಎಂದು ತಿಳಿಸಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಹರ್ಷ್‌ ಗುಪ್ತಾ ಅವರ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗ್ತಿದ್ದು, ಜೊತೆಗೆ ಬಿಸಿಬಿಸಿ ಚರ್ಚೆಗೂ ಕಾರಣವಾಗಿದೆ. ಅದಕ್ಕೆ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಒಂದು ಗುಂಪು ಕಾಮೆಂಟ್‌ ಮಾಡಿ.. ಸಾಮಾಜಿಕ ಜಾಲತಾಣಗಳಲ್ಲಿ ನಕಾರಾತ್ಮಕ ಸುದ್ದಿಗಳನ್ನು ಹರಡುವವರ ನಡುವೆ, ವಾಸ್ತವದಲ್ಲಿ ಭಾರತದ ಸಾಮಾನ್ಯ ಜನರ ಜೀವನ ಬದಲಾಗುತ್ತಿರುವುದಕ್ಕೆ ಈ ವ್ಯಕ್ತಿಯೇ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಗ್ರೂಪ್‌, ಆರ್ಥಿಕತೆ ಬೆಳೆಯುತ್ತಿರುವುದು ನಿಜ. ಆದರೆ ನಗರಗಳಲ್ಲಿ ಕೊಳೆಗೇರಿಗಳು ಮತ್ತು ಸ್ವಚ್ಛತೆಯ ಕೊರತೆ ಇನ್ನೂ ಹಾಗೇ ಇದೆ. ನಿಜವಾದ ಬದಲಾವಣೆ ಎಲ್ಲ ಕಡೆಯೂ ಕಾಣುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

Scroll to load tweet…