ಉದ್ಘಾಟನೆಗೂ ಮುನ್ನವೇ ವಿಶಾಖಪಟ್ಟಣದಲ್ಲಿ ವಂದೇ ಭಾರತ್ ರೈಲಿಗೆ ಕಲ್ಲೆಸೆದ ಕಿಡಿಗೇಡಿಗಳು..!
ಪ್ರಧಾನಿ ಮೋದಿ ಈ ರೈಲನ್ನು ಜನವರಿ 19 ರಂದು ಗ್ರೀನ್ ಸಿಗ್ನಲ್ ನೀಡಬೇಕಿತ್ತು. ಆದರೆ, ಉದ್ಘಾಟನೆಗೂ ಮುನ್ನವೇ ಈ ರೀತಿ ಕಿಡಿಗೇಡಿಗಳು ಕಲ್ಲೆಸೆದಿರುವ ಘಟನೆ ನಡೆದಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಮತ್ತೊಂದು ಕಡೆ ಕಲ್ಲೆಸೆತ ಬಿದ್ದಿದೆ. ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಬುಧವಾರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲೇಟು ಬಿದ್ದಿದ್ದು, ಬೋಗಿಗಳಿಗೆ ಹಾನಿಯಾಗಿದೆ. ಪ್ರಧಾನಿ ಮೋದಿ ಈ ರೈಲನ್ನು ಜನವರಿ 19 ರಂದು ಗ್ರೀನ್ ಸಿಗ್ನಲ್ ನೀಡಬೇಕಿತ್ತು. ಆದರೆ, ಉದ್ಘಾಟನೆಗೂ ಮುನ್ನವೇ ಈ ರೀತಿ ಕಿಡಿಗೇಡಿಗಳು ಕಲ್ಲೆಸೆದಿರುವ ಘಟನೆ ನಡೆದಿದೆ. ಟ್ರಯಲ್ ರನ್ ಮುಗಿಸಿ ಮರ್ರಿಪೇಲಂನಿಂದ ವಿಶಾಖಪಟ್ಟಣ ರೈಲ್ವೆ ಸ್ಟೇಷನ್‌ಗೆ ವಂದೇ ಭಾರತ್ ಟ್ರೈನ್ ಹೋಗುವಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಘಟನೆ ಬಳಿಕ ರೈಲಿನ ಒಂದು ಬೋಗಿಯ ಗಾಜಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.
ಈ ಘಟನೆ ಸಂಬಂಧ ಬುಧವಾರ ಮಾಹಿತಿ ನೀಡಿದ ವಿಭಾಗೀಯ ರೈಲ್ವೆ ಮ್ಯಾನೇಜರ್ (Divisional Railway Manager) ಅನೂಪ್ ಕುಮಾರ್ ಸೇತುಪತಿ (Anup Kumar Sethupathi), ಇಂದು ಸಂಜೆ 6.30 ರ ವೇಳೆಗೆ ವಿಶಾಖಪಟ್ಟಣ ರೈಲ್ವೆ ಸ್ಟೇಷನ್‌ನಿಂದ (Visakhapatnam Railway Station) ಕೋಚಿಂಗ್ ಕಾಂಪ್ಲೆಕ್ಸ್‌ಗೆ ವಂದೇ ಭಾರತ್ ರೈಲು (Vande Bharat Train) ಹೋಗುತ್ತಿದ್ದಾಗ ಅಪರಿಚಿತ ಸಮಾಜ ವಿರೋಧಿ ಕೆಲಸ ಮಾಡುವ ಕಿಡಿಗೇಡಿಗಳು ಕಲ್ಲು ಹೊಡೆಯುವ (Stones Pelting) ಮೂಲಕ ರೈಲಿಗೆ ಹಾನಿ ಮಾಡಿದ್ದಾರೆ. ಈ ಸಂಬಂಧ ರೈಲ್ವೆ ರಕ್ಷಣಾ ದಳ (Railway Protection Force) (ಆರ್‌ಪಿಎಫ್) (RPF) ಕೇಸ್ ದಾಖಲಿಸಿಕೊಂಡಿದ್ದು, ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ ಹಾಗೂ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದೂ ತಿಳಿಸಿದ್ದಾರೆ.
ಇದನ್ನು ಓದಿ: ವಂದೇ ಭಾರತ್‌ಗೆ ಕಲ್ಲೆಸೆದ ಮೂವರು ಬಾಲಕರ ಬಂಧನ
ನಿರ್ವಹಣೆ ಹಾಗೂ ಟ್ರಯಲ್ ರನ್‌ಗೆಂದು ವಿಶಾಖಪಟ್ಟಣ ರೈಲು ನಿಲ್ದಾಣದಲ್ಲಿದ್ದ ರೈಲಿಗೆ ಯಾರೋ ಕಲ್ಲು ಹೊಡೆದಿರುವ ಘಟನೆ ನಡೆದಿದೆ. ಚೆನ್ನೈನಿಂದ ಹೊಚ್ಚ ಹೊಸ ರೇಕ್ ಇಂದು ಆಗಮಿಸಿತ್ತು ಹಾಗೂ ಘಟನೆ ನಡೆದಾಗ ರೈಲಿನ ಟ್ರಯಲ್ ರನ್ ನಡೆಸಲಾಗುತ್ತಿತ್ತು. ಕತ್ತಲಾದ ಬಳಿಕ ಈ ಘಟನೆ ನಡೆದಿದೆ. ನಾವು ದುಷ್ಕರ್ಮಿಗಳನ್ನು ಪತ್ತೆಹಚ್ಚಲಾಗಿಲ್ಲ, ಆದರೆ ಈ ಘಟನೆ ಬಗ್ಗೆ ಸಿಸಿ ಕ್ಯಾಮರಾದಲ್ಲಿ ಪರಿಶೀಲಿಸುತ್ತಿದ್ದೇವೆ. ಅವರು ಈ ರೀತಿ ವರ್ತಿಸುತ್ತಿದ್ದರೆ ಇದು ದುರದೃಷ್ಟಕರ ಎಂದೂ ವಿಭಾಗೀಯ ರೈಲ್ವೆ ಮ್ಯಾನೇಜರ್ (ಡಿಆರ್‌ಎಂ) ಅನೂಪ್ ಕುಮಾರ್ ಸೇತುಪತಿ ಹೇಳಿದ್ದಾರೆ.
ಪ್ರಧಾನಿ ಮೋದಿ ಈ ರೈಲನ್ನು ಸಿಕಂದರಾಬಾದ್ ರೈಲು ನಿಲ್ದಾಣದಿಂದ ಉದ್ಘಾಟನೆ ಮಾಡಬೇಕಿತ್ತು. ಸಿಕಂದರಾಬಾದ್‌ನಿಂದ ವಿಶಾಖಪಟ್ಟಣದವರೆಗೆ ಹೊಸ ವಂದೇ ಭಾರತ್ ರೈಲು ಕಾರ್ಯಾರಂಭ ಮಾಡಲಾಗುತ್ತದೆ. ಈ ಪ್ರಯಾಣಕ್ಕೆ ಸುಮಾರು 8 ಗಂಟೆ ಸಮಯ ತಗುಲುತ್ತದೆ ಎಂದು ತಿಳಿದುಬಂದಿದ್ದು, ವಾರಂಗಲ್, ಖಮ್ಮಂ, ವಿಜಯವಾಡ ಹಾಗೂ ರಾಜಮುಂಡ್ರಿ ರೈಲು ನಿಲ್ದಾಣಗಳಲ್ಲಿ ಈ ರೈಲು ಸ್ಟಾಪ್‌ಗಳನ್ನು ನೀಡುತ್ತದೆ.
ಇದನ್ನೂ ಓದಿ: ಬರಲಿದೆ ಬೈಕ್‌ನಂತೆ ಬಾಗುವ ರೈಲು: 2025ಕ್ಕೆ ಟಿಲ್ಟಿಂಗ್ ರೈಲು ಆಗಮನ
ಕಳೆದ ವಾರ ಪಶ್ಚಿಮ ಬಂಗಾಳದಲ್ಲೂ ವಂದೇ ಭಾರತ್ ರೈಲೊಂದಕ್ಕೆ ಕಲ್ಲುಗಳನ್ನು ಎಸೆಯಲಾಗಿತ್ತು. ಹೌರಾದಿಂದ ನ್ಯೂ ಜಲ್ಪಾಯ್‌ಗುರಿಯನ್ನು ಸಂಪರ್ಕಿಸುವ ಈ ರೈಲು 4 ದಿನಗಳ ಹಿಂದಷ್ಟೇ ಹಸಿರು ನಿಶಾನೆ ಪಡೆದುಕೊಂಡಿತ್ತು. ಜನವರಿ 2 ರಂದು ಹೌರಾದಿಂದ ನ್ಯೂ ಜಲ್ಪಾಯ್‌ಗುರಿಗೆ ಹೋಗುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಮಾಲ್ಡಾ ಬಳಿ ದುಷ್ಕರ್ಮಿಗಳು ಕಲ್ಲುಗಳನ್ನು ಎಸೆದಿದ್ದು, ಈ ವೇಳೆ ರೈಲಿನ ಗಾಜಿನ ಕಿಟಕಿಗಳು ಮುರಿದುಹೋಗಿದ್ದವು. ಬಿಹಾರದಲ್ಲಿ ವಂದೇ ಭಾರತ್ ರೈಲಿಗೆ ಕಲ್ಲೊಡೆದ ಮೂವರು ಬಾಲಕರನ್ನು ಕಳೆದ ವಾರ ಬಂಧಿಸಲಾಗಿತ್ತು.
ಇದನ್ನೂ ಓದಿ: ವಂದೇ ಭಾರತ್ ರೈಲಿನ ಕಂಟಕ ನಿವಾರಿಸಲು 264 ಕೋಟಿ ರೂಪಾಯಿ ಖರ್ಚು!