ಅಮೆರಿಕದ ತೆರಿಗೆಗೆ ಪ್ರತೀಕಾರವಾಗಿ ಭಾರತವು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಬದಲಾಗಿ, ಉಭಯ ದೇಶಗಳ ನಡುವೆ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆ ನಡೆಸಲಾಗುವುದು ಎಂದು ಸರ್ಕಾರ ಹೇಳಿದೆ.
ನವದೆಹಲಿ: ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ವಸ್ತುಗಳ ಆಮದಿನ ಮೇಲೆ ಶೇ.26 ರಷ್ಟು ಪ್ರತಿಸುಂಕ ವಿಧಿಸಿದ್ದಕ್ಕೆ ಭಾರತ ಪ್ರತೀಕಾರ ತೀರಿಸಿಕೊಳ್ಳಲು ಯೋಜಿಸಿಲ್ಲ’ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದರ ಬದಲು, ‘ಉಭಯ ದೇಶಗಳ ನಡುವೆ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆ ನಡೆಯುತ್ತಿದ್ದು, ಅದರತ್ತ ಗಮನ ಹರಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.‘ವಾಷಿಂಗ್ಟನ್ ಜೊತೆ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ಆರಂಭಿಸಿದ ಮೊದಲ ರಾಷ್ಟ್ರಗಳಲ್ಲಿ ಭಾರತವೂ ಒಂದು. ಇದು ಭಾರತಕ್ಕೆ ಅನುಕೂಲ ತರಲಿದೆ. ಹೀಗಾಗಿ ಈ ಹಂತದಲ್ಲಿ ಭಾರತವು ಅಮೆರಿಕ ವಸ್ತುಗಳ ಮೇಲೆ ಇನ್ನಷ್ಟು ತೆರಿಗೆ ಹೇರುವ ಚಿಂತನೆ ಮಾಡುವುದಿಲ್ಲ’ ಎಂದು ಅಧಿಕಾರಿ ಹೇಳಿದ್ದಾಗಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದೇ ವೇಳೆ, ‘ಅಮೆರಿಕದ ಹೆಚ್ಚಿನ ಸುಂಕಗಳಿಂದ ಹಾನಿಗೊಳಗಾದ ದೇಶಗಳೆಂದರೆ ಚೀನಾ, ವಿಯೆಟ್ನಾಂ ಮತ್ತು ಇಂಡೋನೇಷ್ಯಾ. ಅವುಗಳಿಗೆ ಹೋಲಿಸಿದರೆ ಭಾರತ ಉತ್ತಮ ಸ್ಥಾನದಲ್ಲಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.ಟ್ರಂಪ್ ಘೋಷಣೆ ಮಾಡಿದ್ದ ಪ್ರತಿತೆರಿಗೆ ಏ.9ರಿಂದ ಜಾರಿಗೆ ಬರಲಿದೆ.
ಇದನ್ನೂ ಓದಿ: ಪೆಟ್ರೋಲ್‌ನಿಂದ ಜನರ ಸುಡುತ್ತಿರುವ ಸರ್ಕಾರ, ಒಂದು ಲೀಟರ್‌ಗೆ ₹43 ಟ್ಯಾಕ್ಸ್, ರಾಜ್ಯಕ್ಕೆಷ್ಟು, ಕೇಂದ್ರಕ್ಕೆಷ್ಟು?
ಷೇರು ಮಾರುಕಟ್ಟೆ ಕುಸಿತ; ಮೋದಿ ವಿರುದ್ಧ ರಾಹುಲ್ ಗರಂ
ಅಮೆರಿಕ ಹೇರಿರುವ ಪ್ರತಿಸುಂಕದ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ನಿರಂತರ ಕುಸಿತ ಉಂಟಾಗುತ್ತಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
‘ಟ್ರಂಪ್ ಭ್ರಮೆಯ ಮುಚ್ಚಳವನ್ನು ತೆರೆದಿದ್ದಾರೆ. ಆದರೆ ವಾಸ್ತವವು ಬೇರೆಯೇ ಇದೆ. ಪ್ರಧಾನಿ ಮೋದಿ ಎಲ್ಲಿಯೂ ಕಾಣುತ್ತಿಲ್ಲ. ಭಾರತ ವಾಸ್ತವವನ್ನು ಒಪ್ಪಿಕೊಳ್ಳಬೇಕು. ಎಲ್ಲಾ ಭಾರತೀಯರಿಗೂ ಅನುಕೂಲ ಕಲ್ಪಿಸುವ ಉತ್ಪಾದನೆ ಆಧರಿತ ಆರ್ಥಿಕತೆಯನ್ನು ನಿರ್ಮಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಟ್ರಂಪ್ ತೆರಿಗೆ ನೀತಿಯಿಂದ ಭಾರತದ ಷೇರುಮಾರುಕಟ್ಟೆಯಲ್ಲಿ ತಲ್ಲಣ, 13 ಲಕ್ಷ ಕೋಟಿ ನಷ್ಟ
