ಕನಾಟಕದಲ್ಲಿ ಪೆಟ್ರೋಲ್ ಬೆಲೆ 103.80 ರೂಪಾಯಿ ಇದ್ದು, ಇದರಲ್ಲಿ 43 ರೂಪಾಯಿ ತೆರಿಗೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಗಳು, ಮೂಲ ಬೆಲೆ, ಮತ್ತು ಡೀಲರ್ ಕಮಿಷನ್ ಸೇರಿದಂತೆ ಬೆಲೆಯ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರು (ಏ.7): ಬೆಲೆ ಏರಿಕೆ ಬಂದಾಗ ದೇಶದಲ್ಲಿ ಮೊದಲ ಬಾರಿಗೆ ಚರ್ಚೆಯಾಗುವ ವಿಚಾರ ಇಂಧನ ಬೆಲೆ. ದೇಶದಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆ ಆಗುತ್ತಿದ್ದಂತೆ ಉಳಿದೆಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತದೆ. ಆದರೆ, ಪೆಟ್ರೋಲ್‌ ಬೆಲೆ ಏರಿಕೆ ವಿಚಾರ ಬಂದಾಗ ರಾಜ್ಯ ಸರ್ಕಾರ ಕೇಂದ್ರದ ಮೇಲೆ, ಕೇಂದ್ರ ಸರ್ಕಾರ ರಾಜ್ಯದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತದೆ. ಹಾಗಿದ್ದರೆ, ಒಂದು ಲೀಟರ್‌ ಪೆಟ್ರೋಲ್‌ಅನ್ನು ಜನ ಖರೀದಿ ಮಾಡಿದರೆ, ಎಷ್ಟು ತೆರಿಗೆ ಕಟ್ಟುತ್ತಾರೆ ಅನ್ನೋದರ ವಿವರ ಇಲ್ಲಿದೆ.

ಕರ್ನಾಟಕದಲ್ಲಿ ಇಂದಿನ ಪೆಟ್ರೋಲ್‌ ಬೆಲೆ ಲೀಟರ್‌ಗೆ 103.80 ರೂಪಾಯಿ ಆಗಿದೆ. ಇದರಲ್ಲಿ 43 ರೂಪಾಯಿಯನ್ನು ಜನರು ತೆರಿಗೆ ರೂಪದಲ್ಲಿ ಕಟ್ಟುತ್ತಾರೆ. ಕೇಂದ್ರ ಸರ್ಕಾರ ಪೆಟ್ರೋಲ್‌ಗೆ ₹19.90 ತೆರಿಗೆ ಹಾಕಿದ್ದರೆ, ರಾಜ್ಯ ಸರ್ಕಾರ ₹23.10 ತೆರಿಗೆ ಹಾಕುತ್ತದೆ. ಮೂಲ ಬೆಲೆ, ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಇದರಲ್ಲಿ ಒಳಗೊಂಡಿದೆ.

ಮೂಲ ಬೆಲೆ: ಡೀಲರ್‌ಗಳಿಗೆ ವಿಧಿಸಲಾಗುವ ಬೆಲೆ ಲೀಟರ್‌ಗೆ ಸುಮಾರು ₹56.42 ರೂಪಾಯಿ. ಇದರಲ್ಲಿ ಕಚ್ಚಾ ತೈಲ, ಸಂಸ್ಕರಣೆ ಮತ್ತು ಸರಕು ಸಾಗಣೆಯ ವೆಚ್ಚವೂ ಸೇರಿದೆ. ಆ ಬಳಿಕ ಇದಕ್ಕೆ ತೆರಿಗೆಗಳು ಮತ್ತು ಸುಂಕಗಳನ್ನು ಹಾಕಲಾಗುತ್ತದೆ. ಕೇಂದ್ರ ಸರ್ಕಾರ ಅಬಕಾರಿ ಸುಂಕ ಎಂದು ಪ್ರತಿ ಲೀಟರ್‌ಗೆ 19.90 ರೂಪಾಯಿ ತೆರಿಗೆ ಹಾಕುತ್ತದೆ. ಇದಾದ ಇಂರ ರಾಜ್ಯ ಸರ್ಕಾರ ಪ್ರತಿ ಲೀಟರ್‌ಗೆ ₹23 ರೂಪಾಯಿ (ಡೀಲರ್‌ಗಳು ವಿಧಿಸುವ ಇಂಧನ ಬೆಲೆಯ 25.9%, ಡೀಲರ್‌ಗಳ ಸರಾಸರಿ ಕಮಿಷನ್ ಮತ್ತು ಅಬಕಾರಿ ಸುಂಕ) ತೆರಿಗೆ ಹಾಕುತ್ತದೆ.
ಆ ಬಳಿಕ ಇದಕ್ಕೆ ಡೀಲರ್ ಕಮಿಷನ್ ಇರುತ್ತದೆ. ದೇಶದಲ್ಲಿ ಸರಾಸರಿ ಡೀಲರ್ ಕಮಿಷನ್ ಲೀಟರ್‌ಗೆ ಸುಮಾರು ₹3.5 ರೂಪಾಯಿ ಆಗಿದೆ. ಇತ್ತೀಚೆಗೆ ಇದರಲ್ಲಿ ಕೆಲ ಬದಲಾವಣೆಯನ್ನೂ ಮಾಡಲಾಗಿದೆ.

ಇಷ್ಟೆಲ್ಲಾ ಆದರೂ ಕೆಲವು ದಿನಗಳಲ್ಲಿ ಪೆಟ್ರೋಲ್‌ ಬೆಲೆಯಲ್ಲಿ ಕೆಲ ಪೈಸೆಗಳಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ. ಇದಕ್ಕೆ ಕಾರಣ ಸಾಗಾಣೆ ವೆಚ್ಚ. ಪೆಟ್ರೋಲ್‌ ಸಾಗಾಣೆ ವೆಚ್ಚ ಎಂದು ಪ್ರತಿ ಲೀಟರ್‌ಗೆ 0.20 ಪೈಸೆ ತೆರಿಗೆ ಹಾಕಲಾಗುತ್ತದೆ. ಇದರಲ್ಲಿ ಪ್ರತಿ ದಿನ ಎನ್ನುವಂತೆ ಹೆಚ್ಚು ಕಡಿಮೆ ಆಗುತ್ತಲೇ ಇರುತ್ತದೆ.

ಆಂಧ್ರ-ತೆಲಂಗಾಣದಲ್ಲಿ ಗರಿಷ್ಠ, ಹಿಮಾಚಲದಲ್ಲಿ ಕನಿಷ್ಠ: ಒಟ್ಟಾರೆ ದೇಶದಲ್ಲಿ ಪೆಟ್ರೋಲ್‌ಗೆ ದಕ್ಷಿಣ ಭಾರತದಲ್ಲಿ ಹೆಚ್ಚಿನ ರೇಟ್‌ ಇದೆ. ಉತ್ತರ ಭಾರತದ ರಾಜ್ಯಗಳಲ್ಲಿ ಪೆಟ್ರೋಲ್‌ ದರ ಕಡಿಮೆ ಇದೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಆಂಧ್ರ ಪ್ರದೇಶ (109.69 ರೂಪಾಯಿ) ಹಾಗೂ ತೆಲಂಗಾಣ (107.49) ಪ್ರತಿ ಲೀಟರ್ ಪೆಟ್ರೋಲ್‌ ಮೇಲೆ 45 ರೂಪಾಯಿಗಿಂತ ಹೆಚ್ಚಿನ ತೆರಿಗೆ ವಸೂಲಿ ಮಾಡುತ್ತದೆ. ಉತ್ತರದಲ್ಲಿ ಹಿಮಾಚಲ ಪ್ರದೇಶದಲ್ಲಿ ದೇಶದಲ್ಲಿಯೇ ಅತ್ಯಂತ ಕಡಿಮೆ 93.09 ರೂಪಾಯಿ ದರವಿದೆ.

ದೇಶದಲ್ಲಿ ಇಂದು ಯಾವ ರಾಜ್ಯದಲ್ಲಿ ಎಷ್ಟು ಪೆಟ್ರೋಲ್‌ ದರ ಅನ್ನೋದರ ವಿವರ ಇಲ್ಲಿದೆ

  • ಆಂಧ್ರಪ್ರದೇಶ: ₹109.69
  • ಅರುಣಾಚಲ ಪ್ರದೇಶ: ₹92.53
  • ಅಸ್ಸಾಂ: ₹99.70
  • ಬಿಹಾರ: ₹106.93
  • ಚಂಡೀಗಢ: ₹94.30
  • ಛತ್ತೀಸ್‌ಗಢ: ₹100.90
  • ದೆಹಲಿ: ₹94.77
  • ಗೋವಾ: ₹96.59
  • ಗುಜರಾತ್: ₹95.35
  • ಹರಿಯಾಣ: ₹95.64
  • ಹಿಮಾಚಲ ಪ್ರದೇಶ: ₹93.09
  • ಜಮ್ಮು ಮತ್ತು ಕಾಶ್ಮೀರ: ₹98.05
  • ಜಾರ್ಖಂಡ್: ₹98.32
  • ಕರ್ನಾಟಕ: ₹103.80
  • ಕೇರಳ: ₹106.85
  • ಮಧ್ಯಪ್ರದೇಶ: ₹107.07
  • ಮಣಿಪುರ: ₹99.09
  • ಮೇಘಾಲಯ: ₹96.25
  • ಮಿಜೋರಾಂ: ₹99.55
  • ನಾಗಾಲ್ಯಾಂಡ್: ₹98.61
  • ಒಡಿಶಾ: ₹102.19
  • ಪುದುಚೇರಿ: ₹96.92
  • ಪಂಜಾಬ್: ₹97.37
  • ರಾಜಸ್ಥಾನ: ₹105.92
  • ಸಿಕ್ಕಿಂ: ₹101.90
  • ತಮಿಳುನಾಡು: ₹101.70
  • ತೆಲಂಗಾಣ: ₹107.49
  • ತ್ರಿಪುರಾ: ₹97.60
  • ಉತ್ತರ ಪ್ರದೇಶ: ₹95.55
  • ಉತ್ತರಾಖಂಡ: ₹94.77
  • ಪಶ್ಚಿಮ ಬಂಗಾಳ: ₹105.93