ರಾಜ್ ಠಾಕ್ರೆ ಬಿಜೆಪಿ ಮತ್ತು ಶಿಂಧೆ ಬಣದಿಂದ ದೂರವಿದ್ದರೆ ಉದ್ಧವ್ ಠಾಕ್ರೆ ಜೊತೆ ಮೈತ್ರಿ ಸಾಧ್ಯ ಎಂದು ಶಿವಸೇನೆ (ಯುಬಿಟಿ) ಪತ್ರಿಕೆ ಸಾಮ್ನಾ ಸೂಚಿಸಿದೆ. ಮರಾಠಿ ಅಸ್ಮಿತೆಗಾಗಿ ಇಬ್ಬರೂ ಒಂದಾಗಬೇಕೆಂಬ ಸುಳಿವು.  ರಾಜಕೀಯ ಭವಿಷ್ಯದ ಮೇಲೆ ಈ ಮೈತ್ರಿಯ ಪರಿಣಾಮವೇನು?

ಮುಂಬೈ: ಎಂಎನ್‌ಎಸ್‌ ಮುಖ್ಯಸ್ಥ ರಾಜ್ ಠಾಕ್ರೆಯವರು ಬಿಜೆಪಿ ಮತ್ತು ಏಕನಾಥ ಶಿಂಧೆಯವರ ಶಿವಸೇನೆಯಿಂದ ದೂರವಿದ್ದರೆ, ಅವರ ಮತ್ತು ಉದ್ಧವ್ ಠಾಕ್ರೆ ನಡುವೆ ಯಾವುದೇ ಸಮಸ್ಯೆ ಉದ್ಭವಿಸುವ ಪ್ರಶ್ನೆಯೇ ಇರುವುದಿಲ್ಲ ಎಂದು ಶಿವಸೇನೆ (ಯುಬಿಟಿ)ಯ ಮುಖವಾಣಿ ಸಾಮ್ನಾ ಪತ್ರಿಕೆ ಹೇಳಿದೆ. ಈ ಮೂಲಕ ಪತ್ರಿಕೆಯ ಮುಖಾಂತರ ರಾಜ್‌ಗೆ ಉದ್ಧವ್‌ ಷರತ್ತು ವಿಧಿಸಿದಂತಾಗಿದೆ.

2 ದಶಕಗಳ ಹಿಂದೆ ಬೇರೆಯಾಗಿದ್ದ ಸೋದರಸಂಬಂಧಿಗಳಾದ ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಮತ್ತೆ ಒಂದಾಗುತ್ತಾರೆ ಎಂಬ ಸುದ್ದಿ ಗಾಢವಾಗಿರುವ ನಡುವೆ ಸಾಮ್ನಾ ತನ್ನ ಸಂಪಾದಕೀಯದಲ್ಲಿ ಈ ರೀತಿ ಬರೆದಿರುವುದು ಪ್ರಾಮುಖ್ಯ ಪಡೆದುಕೊಂಡಿದೆ. ‘ರಾಜ್ ಠಾಕ್ರೆ ಮರಾಠಿ ಅಸ್ಮಿತೆ ಕುರಿತು ಮಾತಾಡುತ್ತಾರೆ. ಶಿವಸೇನೆ (ಅವಿಭಜಿತ) ಹುಟ್ಟಿಕೊಂಡಿದ್ದು ಸಹ ಅದೇ ಕಾರಣಕ್ಕಾಗಿ. ಅವರು ಪ್ರತ್ಯೇಕವಾಗಿದ್ದರೆ ಮರಾಠಿಗರಿಗೇ ಸಮಸ್ಯೆ’ ಎಂದಿರುವ ಅದು ರಾಜ್ ಮತ್ತು ಉದ್ಧವ್ ನಡುವಿನ ಮೈತ್ರಿ ಸಾಧ್ಯತೆಯ ಸುಳಿವು ನೀಡಿದೆ. ಇದೇ ವೇಳೆ, ‘ಬಿಜೆಪಿ ಮತ್ತು ಶಿಂಧೆ ಬಣ ಈ ಕುರಿತು ಮಾತಾಡಲು ಅಧಿಕಾರವಿಲ್ಲ’ ಎಂದು ಚಾಟಿ ಬೀಸಿದೆ.

ಇದನ್ನೂ ಓದಿ: ಬೇಡಿಕೆ ಈಡೇರಿಸದಿದ್ದರೆ ದೇಶಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ: ಎಲ್‌ಪಿಜಿ ವಿತರಕರ ಸಂಘ ಎಚ್ಚರಿಕೆ

ಬಂಗಾಳ ರಾಜ್ಯಪಾಲ ಬೋಸ್‌ಗೆ ಹೃದಯ ಸಮಸ್ಯೆ: ಆಸ್ಪತ್ರೆಗೆ ದಾಖಲು
ಕೋಲ್ಕತಾ: ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್‌ ಅವರ ಎದೆಯಲ್ಲಿ ಬ್ಲಾಕೇಜ್‌ಗಳು ಕಂಡುಬಂದಿದ್ದು, ಸೋಮವಾರ ಇಲ್ಲಿನ ಕಮಾಂಡ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.ಬೋಸ್‌ ತಮ್ಮ ಎಂದಿನಂತೆ ಆರೋಗ್ಯ ತಪಾಸಣೆಗೆ ಕಮಾಂಡ್‌ ಆಸ್ಪತ್ರೆಗೆ ಬಂದಿದ್ದರು. ತಪಾಸಣೆ ವೇಳೆ ಬೋಸ್‌ ಎದೆಯಲ್ಲಿ ಬ್ಲಾಕೇಜ್‌ ಕಂಡುಬಂದಿದೆ. ಪರಿಣಾಮ ವೈದ್ಯರು ಸಮಯ ವ್ಯರ್ಥ ಮಾಡದೆ ಬೋಸ್‌ ಅವರನ್ನು ದಾಖಲಿಸಿದ್ದಾರೆ.

ಬೋಸ್‌ ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಸ್ಪತ್ರೆಗೆ ಭೇಟಿ ನೀಡಿ, ರಾಜ್ಯಪಾಲರ ಆರೋಗ್ಯವನ್ನು ವಿಚಾರಿಸಿದ್ದಾರೆ. ಮತ್ತೆ ಮಂಗಳವಾರ ಭೇಟಿ ನೀಡಿವುದಾಗಿ ಮಮತಾ ಹೇಳಿದ್ದಾರೆ.ಬೋಸ್‌ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬಂಧುಗಳ ಜತೆ ಮಾತಿಗೆ ಅವಕಾಶ ಕೋರಿ ರಾಣಾ ಕೋರ್ಟ್‌ಗೆ
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ವಶದಲ್ಲಿರುವ 26/11 ಮುಂಬೈ ದಾಳಿಯ ಆರೋಪಿ ತಹಾವುರ್ ರಾಣಾ ತನ್ನ ಕುಟುಂಬಸ್ಥರೊಂದಿಗೆ ಮಾತನಾಡಲು ಅವಕಾಶ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದಾನೆ.ಏ.19ರಂದು ರಾಣಾ ತನ್ನ ವಕೀಲರ ಮೂಲಕ ವಿಶೇಷ ನ್ಯಾಯಾಧೀಶ ಹರ್ದೀಪ್ ಕೌರ್ ಅವರಿಗೆ ಅರ್ಜಿ ಸಲ್ಲಿಸಿದ್ದು, ಏ.23ರೊಳಗೆ ಉತ್ತರ ಸಲ್ಲಿಸುವಂತೆ ನ್ಯಾಯಾಧೀಶರು ಎನ್‌ಐಎಗೆ ನಿರ್ದೇಶನ ನೀಡಿದ್ದಾರೆ.ಏ.10ರಂದು ಆರೋಪಿಯನ್ನು 18 ದಿನ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿತ್ತು.

ಇದನ್ನೂ ಓದಿ: ವಿದೇಶಿ ನೆಲದಲ್ಲಿ ನಿಂತು ಮತ್ತೆ ಭಾರತದ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟೀಕೆ