ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿಲ್ಲ ಎಂದು ಕೇಂದ್ರದ ಕಿಡಿ  ಪದೇ ಪದೇ ಇಂಥ ಘಟನೆ ಏಕೆ?: ನೋಟಿಸ್‌ ಜಾರಿ ಸುರಕ್ಷಿತ, ಕಾರ್ಯಕ್ಷಮತೆಯ ಮತ್ತು ವಿಶ್ವಾಸಾರ್ಹದ  ಬಗ್ಗೆ ಪ್ರಶ್ನೆ

ನವದೆಹಲಿ (ಜು.7): ಕಳೆದ 18 ದಿನದಲ್ಲಿ ತಾಂತ್ರಿಕ ದೋಷದ 8 ಘಟನೆಗಳಿಗೆ ಸಾಕ್ಷಿಯಾದ ಸ್ಪೈಸ್‌ಜೆಟ್‌ ಕಂಪನಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಸರ್ಕಾರ, ಸಂಸ್ಥೆಯು ಸುರಕ್ಷಿತ, ಕಾರ್ಯಕ್ಷಮತೆಯ ಮತ್ತು ವಿಶ್ವಾಸಾರ್ಹ ವಿಮಾನಯಾನ ಸೇವೆಯನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದೆ. ಅಲ್ಲದೆ ಪದೇ ಪದೇ ಇಂಥ ಘಟನೆಗಳಿಗೆ ಕಾರಣವೇನು ಎಂದು ಪ್ರಶ್ನಿಸಿ ನೋಟಿಸ್‌ ಜಾರಿ ಮಾಡಿದ್ದು, ಉತ್ತರ ನೀಡಲು ಮೂರು ವಾರಗಳ ಗಡುವನ್ನು ನೀಡಿದೆ.

ಇದರ ಬೆನ್ನಲ್ಲೇ ಭದ್ರತೆ ಬಗ್ಗೆ ಭರವಸೆ ನೀಡಿರುವ ಸ್ಪೆಸ್‌ಜೆಟ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸಿಂಗ್‌, ‘ಮುಂದಿನ ದಿನಗಳಲ್ಲಿ ನಾವು ಸುರಕ್ಷತೆಗೆ ಇನ್ನಷ್ಟುಆಧ್ಯತೆ ನೀಡುತ್ತವೆ’ ಎಂದು ಹೇಳಿದ್ದಾರೆ.

ಮಂಗಳವಾರ ಚೀನಾಕ್ಕೆ ಹೊರಟಿದ್ದ ಸ್ಪೈಸ್‌ಜೆಟ್‌ನ ಸರಕು ವಿಮಾನವೊಂದು ತಾಂತ್ರಿಕ ಕಾರಣಗಳಿಂದಾಗಿ ಕೋಲ್ಕತಾಕ್ಕೆ ಮರಳಿತ್ತು. ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ನಾಗರಿಕ ವಿಮಾನಯಾನ ಪ್ರಾಧಿಕಾರ (ಡಿಜಿಸಿಎ), ‘ವಿಮಾನಯಾನ ಕಾಯ್ದೆಗಳ ಅನ್ವಯ ಸುರಕ್ಷಿತ, ಕಾರ್ಯಕ್ಷಮತೆಯ ಮತ್ತು ವಿಶ್ವಾಸಾರ್ಹ ವಿಮಾನಯಾನ ಸೇವೆಯನ್ನು ನೀಡುವಲ್ಲಿ ಸಂಸ್ಥೆ ವಿಫಲವಾಗಿದೆ. ಮೇಲ್ಕಂಡ ಘಟನೆಗಳ ಕುರಿತ ಪರಿಶೀಲನೆಯು, ಕಳಪೆ ಆಂತರಿಕ ಭದ್ರತಾ ಮೇಲ್ವಿಚಾರಣೆ ಮತ್ತು ಅಸರ್ಮಪಕ ನಿರ್ವಹಣೆಯಿಂದಾಗಿ ತಾಂತ್ರಿಕ ದೋಷ ಕಂಡುಬರುತ್ತಿದೆ ಎಂಬುದನ್ನು ಖಚಿತಪಡಿಸಿದೆ. ಪರಿಣಾಮ ವಿಮಾನಯಾನದ ಸುರಕ್ಷತಾ ಪ್ರಮಾಣ ಕುಂಠಿತವಾಗಿದೆ’ ಎಂದು ಹೇಳಿದೆ.

ಪಾಕಿಸ್ತಾನದಲ್ಲಿ ಲ್ಯಾಂಡ್‌ ಆದ ಸ್ಪೈಸ್‌ಜೆಟ್‌ ವಿಮಾನ, ಇಂಧನ ಸೋರಿಕೆ ಶಂಕೆ!

ಇನ್ನು ‘2021ರಲ್ಲಿ ಸಂಸ್ಥೆಯ ಹಣಕಾಸು ಪರಿಸ್ಥಿತಿ ಪರಿಶೀಲಿಸಿದ ವೇಳೆ, ಸಂಸ್ಥೆಯು ಕ್ಯಾಷ್‌ ಆ್ಯಂಡ್‌ ಕ್ಯಾರಿ (ನಿತ್ಯದ ಆದಾಯದಲ್ಲೇ ನಿರ್ವಹಣೆ) ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ಬಿಡಿಭಾಗ ಮತ್ತು ನೊಂದಾಯಿತ ಸೇವಾದಾರರಿಗೆ ನಿಯಮಿತವಾಗಿ ಹಣ ಪಾವತಿ ಮಾಡುವುದರಲ್ಲೂ ವಿಫಲವಾಗಿದ್ದು ಕಂಡುಬಂದಿದೆ. ಇದೆಲ್ಲದರ ಪರಿಣಾಮ ಪದೇ ಪದೇ ಕಂಪನಿ ಅಗತ್ಯ ಬಿಡಿಭಾಗಗಳ ಕೊರತೆ ಎದುರಿಸುತ್ತಿರುವುದು ಕಂಡುಬಂದಿದೆ’ ಎಂದು ನೋಟಿಸ್‌ನಲ್ಲಿ ಡಿಜಿಸಿಎ ಹೇಳಿದೆ.

ಭರವಸೆ: ಡಿಜಿಸಿಎ ನೋಟಿಸ್‌ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸ್ಪೈಸ್‌ಜೆಟ್‌ ಸಿಎಂಡಿ ಅಜಯ್‌ ಸಿಂಗ್‌, ‘ಮುಂದಿನ ದಿನಗಳಲ್ಲಿ ನಾವು ನಮ್ಮ ಎಚ್ಚರಿಕೆಯನ್ನು ದ್ವಿಗುಣಗೊಳಿಸುತ್ತೇವೆ ಮತ್ತು ಸಂಚಾರಕ್ಕೂ ಮುನ್ನ ವಿಮಾನಗಳ ಪರಿಶೀಲನೆಯನ್ನು ಕಠಿಣಗೊಳಿಸುತ್ತೇವೆ. ನಮ್ಮ ವ್ಯವಸ್ಥೆಯಲ್ಲಿ ಕೊರತೆ ಇದೆ ಎಂದು ಡಿಜಿಸಿಎ ಭಾವಿಸಿದರೆ ಅವರೊಂದಿಗೆ ಸೇರಿಕೊಂಡು ವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ. ಸುರಕ್ಷತೆಗಿಂತ ಮುಖ್ಯವಾದುದು ಯಾವುದೂ ಇಲ್ಲ’ ಎಂದು ಹೇಳಿದ್ದಾರೆ. ಜೊತೆಗೆ ಇತ್ತೀಚಿನ 8 ಘಟನೆಗಳಿಗೂ, ಬಿಡಿಭಾಗಗಳ ಕೊರತೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಯಾಣಿಕರ ಭದ್ರತೆಗೆ ನಮ್ಮ ಮೊದಲ ಆದ್ಯತೆ. ಭದ್ರತೆಯ ವಿಷಯದಲ್ಲಿ ಸಣ್ಣ ಲೋಪವನ್ನೂ ತನಿಖೆಗೆ ಮಾಡಲಾಗುವುದು ಮತ್ತು ಅದನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಜ್ಯೋತಿರಾದಿತ್ಯ ಸಿಂಧಿಯಾ, ವಿಮಾನಯಾನ ಸಚಿವ

ದೆಹಲಿಯಲ್ಲಿ ಇಳಿಯುತ್ತಿದ್ದಂತೆ ಕೆಟ್ಟವಿಸ್ತಾರ ವಿಮಾನದ ಎಂಜಿನ್‌
ಬ್ಯಾಂಕಾಕ್‌ಗೆ ಪ್ರಯಾಣ ಬೆಳೆಸಿದ್ದ ವಿಸ್ತಾರ ವಿಮಾನ ದೆಹಲಿಯಲ್ಲಿ ಇಳಿದ ಬಳಿಕ ಅದರ ಎಂಜಿನ್‌ನಲ್ಲಿ ದೋಷ ಕಾಣಿಸಿಕೊಂಡಿದೆ. ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಎಲ್ಲರನ್ನು ಸುರಕ್ಷಿತವಾಗಿ ವಿಮಾನದಿಂದ ಇಳಿಸಲಾಗಿದೆ ಎಂದು ಡಿಜಿಸಿಎ ಬುಧವಾರ ಹೇಳಿದೆ.

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ವಿಮಾನದ ಒಂದು ಎಂಜಿನ್‌ ವಿದ್ಯುತ್‌ ಸಮಸ್ಯೆಯಿಂದಾಗಿ ಕೆಟ್ಟುಹೋಯಿತು ಎಂದು ವಿಮಾನಯಾನ ಸಂಸ್ಥೆ ಹೇಳಿದೆ. ರನ್‌ವೇಯನ್ನು ತೊರೆಯುತ್ತಿದ್ದಂತೆ ವಿಮಾನ 2ನೇ ಎಂಜಿನ್‌ ಕೆಟ್ಟುಹೋಗಿದೆ. ಆದರೂ ಒಂದು ಎಂಜಿನ್‌ ಸಹಾಯದಿಂದ ವಿಮಾನವನ್ನು ಮುನ್ನಡೆಸಲು ಪೈಲಟ್‌ಗಳು ಪ್ರಯತ್ನಿಸಿದ್ದಾರೆ. ಅದು ಸಹ ಹಾಳಾದ್ದರಿಂದ, ಎಳೆದೊಯ್ಯುವ ವಾಹನವನ್ನು ತಂದು ವಿಮಾನವನ್ನು ಪಾರ್ಕ್ ಮಾಡಲಾಗಿದೆ ಎಂದು ಡಿಜಿಸಿಎ ಹೇಳಿದೆ.