* 2024ರವರೆಗೆ ಸೋನಿಯಾ ಮುಂದುವರಿಕೆ?* ಅಧ್ಯಕ್ಷೆಗೆ ಸಹಕರಿಸಲು 4 ಕಾರ್ಯಾಧ್ಯಕ್ಷರ ನೇಮಕ ಸಾಧ್ಯತೆ* ಸಚಿನ್‌ ಪೈಲಟ್‌, ಆಜಾದ್‌, ಸೆಲ್ಜಾ, ಚೆನ್ನಿತ್ತಲ ರೇಸ್‌ನಲ್ಲಿ* ತೆರೆಮರೆಯಲ್ಲಿ ರಾಹುಲ್‌ ಪ್ರಮುಖ ಪಾತ್ರ ಸಂಭವ

ನವದೆಹಲಿ(ಜು.22): ಕಾಂಗ್ರೆಸ್‌ ಶೀಘ್ರವೇ ಹೊಸ ಅಧ್ಯಕ್ಷರ ನೇಮಕದ ಸಾಧ್ಯತೆ ಬಹುತೇಕ ದೂರವಾಗಿದ್ದು, ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ 2024ರ ಲೋಕಸಭೆ ಚುನಾವಣೆವರೆಗೆ ಆ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ರಾಹುಲ್‌ ಗಾಂಧಿ ಅವರು ಪಕ್ಷದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇಲ್ಲ. ಆದರೆ ಅವರು ನಿರ್ಣಾಯಕ ಸಮಿತಿಯಲ್ಲಿದ್ದು, ತೆರೆಮರೆಯಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದೂ ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

ಕೊರೋನಾ ನಿರ್ವಹಣೆಯಲ್ಲಿ ವಿಫಲ: ಮೋದಿ ತಿವಿದ ಸೋನಿಯಾಗೆ, ಬಿಜೆಪಿ ಅಧ್ಯಕ್ಷನ ಗುದ್ದು!

ಆದರೆ, ಪಕ್ಷಕ್ಕೆ 4 ಕಾರ್ಯಾಧ್ಯಕ್ಷರನ್ನು ನೇಮಿಸಿ, ಸೋನಿಯಾ ಹಾಗೂ ರಾಹುಲ್‌ ಅವರಿಗೆ ಸಹಾಯ ಮಾಡಲು ನಿಯೋಜಿಸಲಾಗುತ್ತದೆ. ಈ ಸ್ಥಾನದ ರೇಸ್‌ನಲ್ಲಿ ಗುಲಾಂ ನಬಿ ಆಜಾದ್‌, ಸಚಿನ್‌ ಪೈಲಟ್‌, ಕುಮಾರಿ ಸೆಲ್ಜಾ ಹಾಗೂ ರಮೇಶ್‌ ಚೆನ್ನಿತ್ತಲ ಇದ್ದಾರೆ ಎಂದು ‘ಟೈಮ್ಸ್‌ ನೌ’ ವರದಿ ಹೇಳಿದೆ.

ಆದಾಗ್ಯೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸ್ಥಾನಮಾನ ಏನಾಗಿರಬಹುದು ಎಂಬ ಸ್ಪಷ್ಟತೆ ಇಲ್ಲ. ಅವರು ಈಗ ಉತ್ತರ ಪ್ರದೇಶ ಕಾಂಗ್ರೆಸ್‌ ಉಸ್ತುವಾರಿಯಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.

ಮಾಜಿ ಸಿಎಂಗೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಸ್ಥಾನ? ಸೋನಿಯಾ ಭೇಟಿ!

ಕಾಂಗ್ರೆಸ್‌ ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ರಾಹುಲ್‌ ನಿರ್ಗಮಿಸಿದ್ದರು. ಬಳಿಕ ಸೋನಿಯಾ ಅವರು 2 ವರ್ಷದಿಂದ ಮಧ್ಯಂತರ ಅಧ್ಯಕ್ಷೆಯಾಗಿದ್ದಾರೆ. ಕಳೆದ ವರ್ಷ ಅವರು 2021 ಮೇನಲ್ಲಿ ಹೊಸ ಅಧ್ಯಕ್ಷರ ನೇಮಕ್ಕೆ ಚುನಾವಣೆ ನಡೆಸಿ, ಪಕ್ಷದ ಸಂಪೂರ್ಣ ಮರುಸಂಘಟನೆ ನಡೆಯಬೇಕು ಎಂದು ಸೂಚಿಸಿದ್ದು ಇಲ್ಲಿ ಗಮನಾರ್ಹ. ಆದರೆ ಕೊರೋನಾ ಕಾರಣ ಆಂತರಿಕ ಚುನಾವಣೆ ತಡವಾಗಿದೆ.