ಇನ್ನು ಮುಂದೆ ಅಮೆರಿಕ ವೀಸಾ ಅರ್ಜಿ ಸಲ್ಲಿಕೆ ವೇಳೆ ಐದು ವರ್ಷಗಳಲ್ಲಿ ಬಳಸಿದ ಸಾಮಾಜಿಕ ಜಾಲತಾಣಗಳ ಯೂಸರ್‌ ನೇಮ್‌ ಅನ್ನು ಡಿಎಸ್‌-160 ಫಾರ್ಮ್‌ನಲ್ಲಿ ಬಹಿರಂಗಪಡಿಸುವುದು ಕಡ್ಡಾಯ.

ನವದೆಹಲಿ: ಇನ್ನು ಮುಂದೆ ಅಮೆರಿಕ ವೀಸಾ ಅರ್ಜಿ ಸಲ್ಲಿಕೆ ವೇಳೆ ಐದು ವರ್ಷಗಳಲ್ಲಿ ಬಳಸಿದ ಸಾಮಾಜಿಕ ಜಾಲತಾಣಗಳ ಯೂಸರ್‌ ನೇಮ್‌ ಅನ್ನು ಡಿಎಸ್‌-160 ಫಾರ್ಮ್‌ನಲ್ಲಿ ಬಹಿರಂಗಪಡಿಸುವುದು ಕಡ್ಡಾಯ. ಒಂದು ವೇಳೆ ಈ ರೀತಿ ಮಾಡದೇ ಹೋದರೆ ವೀಸಾ ನಿರಾಕರಿಸುವ ಮತ್ತು ಭವಿಷ್ಯದಲ್ಲಿ ವೀಸಾ ಸಿಗದೆ ಹೋಗುವ ಸಾಧ್ಯತೆ ಇದೆ ಎಂದು ದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಎಚ್ಚರಿಸಿದೆ.

ಪ್ರತಿ ವೀಸಾಗಳ ಕುರಿತು ತೆಗೆದುಕೊಳ್ಳುವ ನಿರ್ಧಾರವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ನಿರ್ಧಾರವಾಗಿರುತ್ತದೆ. ವೀಸಾಗಾಗಿ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಐದು ವರ್ಷಗಳಲ್ಲಿ ತಾವು ಬಳಸಿರುವ ಸಾಮಾಜಿಕ ಜಾಲತಾಣದ ಯೂಸರ್‌ಐಡಿ ನೀಡಬೇಕಿದೆ.

ಸಾಮಾಜಿಕ ಜಾಲತಾಣ ಬಳಕೆಯ ಮಾಹಿತಿಯನ್ನು ಕೈಬಿಡುವುದು ವೀಸಾ ನಿರಾಕರಣೆಗೆ ದಾರಿ ಮಾಡಿಕೊಡಬಹುದು. ಭವಿಷ್ಯದಲ್ಲಿ ವೀಸಾಗಾಗಿ ಅರ್ಜಿ ಸಲ್ಲಿಸಲು ಅರ್ಹತೆಯನ್ನೇ ಕಳೆದುಕೊಳ್ಳಬಹುದು ಎಂದು ಅಮೆರಿಕ ದೂತವಾಸ ಕಚೇರಿಯು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಜೂ.23ರಂದು ಅಮೆರಿಕ ರಾಯಭಾರ ಕಚೇರಿಯು ವಲಸೆಯ ಉದ್ದೇಶ ಇಲ್ಲದ ಎಫ್‌, ಎಂ ಅಥವಾ ಜೆ ವೀಸಾ ಕೋರಿ ಅರ್ಜಿ ಸಲ್ಲಿಸುವವರು ತಮ್ಮ ಸಾಮಾಜಿಕ ಜಾಲತಾಣಗಳ ಸೆಟ್ಟಿಂಗ್ಸ್‌ ಅನ್ನು ''''ಪ್ರೈವೇಟ್‌''''ನಿಂದ ''''ಪಬ್ಲಿಕ್‌ '''' ಗೆ ಬದಲಾವಣೆ ಮಾಡುವಂತೆ ಸೂಚಿಸಿತ್ತು. ಇದು ಅವರ ಗುರುತು ಖಚಿತಪಡಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಸೂಚಿಸಿತ್ತು.

ಡೊನಾಲ್ಡ್‌ ಟ್ರಂಪ್‌ ಅವರು ಅಧಿಕಾರಕ್ಕೆ ಬಂದ ಬಳಿಕ ಅಮೆರಿಕದಲ್ಲಿ ವಲಸೆ ನೀತಿ ಬಿಗಿಗೊಳಿಸಲಾಗಿದೆ. ವಲಸೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆರಂಭಿಸಿದೆ. ಅಮೆರಿಕದ ವೀಸಾವು ಸವಲತ್ತೇ ಹೊರತು ಹಕ್ಕಲ್ಲ ಎಂಬುದು ಅಮೆರಿಕ ಇದೀಗ ಸ್ಪಷ್ಟವಾಗಿ ಹೇಳುತ್ತಿದೆ.

  • ಸಾಮಾಜಿಕ ಜಾಲತಾಣಗಳ ಯೂಸರ್‌ ನೇಮ್‌ ಅನ್ನು ಡಿಎಸ್‌-160 ಫಾರ್ಮ್‌ನಲ್ಲಿ ಬಹಿರಂಗಪಡಿಸುವುದು ಕಡ್ಡಾಯ.
  • ಅಮೆರಿಕ ವೀಸಾ ಅರ್ಜಿ ಸಲ್ಲಿಕೆ ವೇಳೆ ಐದು ವರ್ಷಗಳಲ್ಲಿ ಬಳಸಿದ ಸಾಮಾಜಿಕ ಜಾಲತಾಣಗಳ ಮಾಹಿತಿ ಕಡ್ಡಾಯ
  • ಈ ರೀತಿ ಮಾಡದೇ ಹೋದರೆ ವೀಸಾ ನಿರಾಕರಿಸುವ ಮತ್ತು ಭವಿಷ್ಯದಲ್ಲಿ ವೀಸಾ ಸಿಗದೆ ಹೋಗುವ ಸಾಧ್ಯತೆ
  • ತಪ್ಪು ಮಾಹಿತಿ ನೀಡಿದ್ರೆ ವೀಸಾ ನಿರಾಕರಣೆ, ಮುಂದೆಯೂ ಅವಕಾಶ ತಪ್ಪಬಹುದು
  • ದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಎಚ್ಚರಿಕೆ