ಆನ್‌ಲೈನ್‌ನಲ್ಲಿ ಜ್ಯುವೆಲ್ಲರಿ ಆರ್ಡರ್ ಮಾಡಿದ ಮಹಿಳೆಯೊಬ್ಬರಿಗೆ ಖಾಲಿ ಡಬ್ಬಿಯೊಂದು ಬಂದಿದೆ. ಆಕೆ ಈ ಘಟನೆಯನ್ನು ವಿಡಂಬನಾತ್ಮಕವಾಗಿ ವರ್ಣಿಸಿದ ರೀತಿ ನೆಟ್ಟಿಗರ ಮನ ಸೆಳೆದಿದೆ.
ಸಾಮಾಜಿಕ ಜಾಲತಾಣಗಳು, ಇಂಟರ್‌ನೆಟ್ ಹಾಗೂ ಆನ್‌ಲೈನ್ ಮಾರುಕಟ್ಟೆಗಳು ಜನರ ಬದುಕನ್ನು ಮತ್ತಷ್ಟು ಸರಳವಾಗಿಸಿವೆ. ಸೂಜಿದಾರದಿಂದ ಹಿಡಿದು, ತಿನ್ನುವ ಅನ್ನ, ಟಿವಿ ಫ್ರಿಡ್ಜ್‌ಗಳವರೆಗೆ ಇಂದು ಎಲ್ಲವನ್ನು ನೀವು ಕುಳಿತಲ್ಲಿಂದಲೇ ಖರೀದಿಸಬಹುದಾಗಿದೆ. ಮೊಬೈಲ್ ಫೋನ್, ಇಂಟರ್‌ನೆಟ್ ಜೊತೆ ಖಾತೆ ಫುಲ್ ಬ್ಯಾಂಕ್ ಬ್ಯಾಲೆನ್ಸ್ ಇದ್ರೆ ಬದುಕು ತುಂಬಾ ಸುಲಭ ಅನಿಸುತ್ತೆ. ಅಂಗಡಿಗೆ ಹೋಗಬೇಕಾದ ಉಸಬಾರಿಯೂ ಇರುವುದಿಲ್ಲ, ಕೋವಿಡ್ ನಂತರದ ವರ್ಷಗಳಲ್ಲಿ ಆನ್ಲೈನ್ ಮಾರುಕಟ್ಟೆ ಜಾಲ ವ್ಯಾಪಕವಾಗಿ ಹಬ್ಬಿದ್ದು ಮನೆಯ ದಿನಸಿಯಿಂದ ಹಿಡಿದು ಪ್ರತಿಯೊಂದಕ್ಕೂ ಮಹಾನಗರಿಗಳ ಜನ ಆನ್‌ಲೈನ್ ಮಾರುಕಟ್ಟೆಯನ್ನು ಅವಲಂಬಿಸಿದ್ದಾರೆ. ಆದರೆ ಯಾವುದೇ ಒಂದು ಯೋಜನೆಗೆ ಪಾಸಿಟಿವ್ ನೆಗೆಟೀವ್ ಮುಖಗಳಿರುವಂತೆ ಈ ಆನ್‌ಲೈನ್ ಮಾರುಕಟ್ಟೆಗೂ ಇದೆ. ಯಾವುದೂ ಆರ್ಡರ್ ಮಾಡಿದ್ರೆ ಇನ್ನಾವುದೋ ಬರುವುದು, ಲ್ಯಾಪ್‌ಟಾಪ್ ಬರೋ ಜಾಗದಲ್ಲಿ ಡಿಟರ್ಜೆಂಟ್ ಸೋಪು ಬರುವುದು ಹೀಗೆ ಆನ್‌ಲೈನ್ ಮಾರುಕಟ್ಟೆಯ ಅವಾಂತರಗಳು ಹಲವಷ್ಟು ಈಗಾಗಲೇ ನಡೆದಿವೆ. ಅದೇ ರೀತಿ ಆನ್‌ಲೈನ್‌ನಲ್ಲಿ ಜ್ಯುವೆಲ್ಲರಿ ಆರ್ಡರ್ ಮಾಡಿದ ಮಹಿಳೆಯೊಬ್ಬರಿಗೆ ಖಾಲಿ ಡಬ್ಬಿಯೊಂದು ಬಂದಿದ್ದು ಶಾಕ್ ಆಗಿದ್ದಾರೆ.
ಇನ್ಸ್ಟಾಗ್ರಾಮ್ ಬಳಕೆದಾರರಾದ ಇನ್‌ಫ್ಲುಯೆನ್ಸರ್ ಐಶ್ವರ್ಯ ಖಾಜುರಿಯಾ ಎಂಬುವವರು ಈ ವಿಚಾರವನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
ಕಂಟೆಂಟ್ ಕ್ರಿಯೇಟರ್ ಐಶ್ವರ್ಯಾ ಖಜುರಿಯಾ ಅವರು ಆನ್‌ಲೈನ್‌ನಲ್ಲಿ ಕಪ್ಪು ಬಣ್ಣದ ಬಟರ್‌ಫ್ಲೈ ಬ್ರೇಸ್‌ಲೆಟ್ ಆರ್ಡರ್ ಮಾಡಿದ್ದರು. ಮಾಮೂಲಿನಂತೆ ಅವರಿಗೆ ಕೊರಿಯರ್ ಬಂದು ತಲುಪಿದ್ದು, ಅದನ್ನು ತೆರೆದಾಗ ಆಘಾತಗೊಳ್ಳುವ ಸರದಿ ಅವರದಾಗಿತ್ತು. ಅಲ್ಲಿ ಬ್ರೇಸ್ಲೆಟ್ ಬದಲು ಕ್ರೀಮ್ ಒಂದರ ಖಾಲಿ ಡಬ್ಬಿ ಇತ್ತು. ಈ ಬಗ್ಗೆ ಅವರು ತಮಾಷೆಯಾಗಿ ವೀಡಿಯೋವೊಂದನ್ನು ಮಾಡಿ ಹಾಕಿದ್ದು, ವೈರಲ್ ಆಗಿದೆ.
ಸಿಲಿಕಾನ್ ಸಿಟಿ ಅಂದ್ರೆ ಸುಮ್ಮನೇನಾ? ಆನ್ ಲೈನ್ ಶಾಪಿಂಗ್ ನಲ್ಲೂ ಬೆಂಗಳೂರಿಗರು ಮುಂದಿಲ್ಲಅಂದ್ರೆ ಹೆಂಗೆ?
ಆಕೆ ಈ ಘಟನೆಯನ್ನು ವಿಡಂಬನಾತ್ಮಕವಾಗಿ ವರ್ಣಿಸಿದ ರೀತಿ ನೆಟ್ಟಿಗರ ಮನ ಸೆಳೆದಿದೆ. ಈ ಆಭರಣವನ್ನು ಪ್ಯಾಕಿಂಗ್ ಮಾಡಿದ ಆತ/ಅವಳು ಬಹುಶಃ ಸ್ಕೀನ್ ಕೇರ್ ಲೋಷನ್ ಬಳಸುತ್ತಿದ್ದಿರಬಹುದು, ಎಂದಿನಂತೆ ಕ್ರೀಮ್ ಹಚ್ಚಿ ಸಿದ್ದಗೊಂಡ ಆತ/ಅವಳು ಖಾಲಿ ಡಬ್ಬಿಯನ್ನು ಪ್ಯಾಕೇಜ್ ಒಳಗಿಟ್ಟು ಪ್ಯಾಕೇಜ್‌ನಲ್ಲಿದ್ದ ಆಭರಣವನ್ನು ಧರಿಸಿರಬೇಕು ಎಂದು ಹಾಸ್ಯ ಮಾಡಿದ್ದು, ವಿಡಿಯೋದ ಕೊನೆಯಲ್ಲಿ ಅವರು ತಾವು ಆರ್ಡರ್ ಮಾಡಿದ ಉತ್ಪನ್ನವನ್ನು ಹಿಂದಿರುಗಿಸುವುದಾಗಿ ಹೇಳಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಶೀರ್ಷಿಕೆಯಲ್ಲಿ, "ಓಕೆ ಮೀಶೋ ಐ ಸಿಯೂ, ನನಗೆ ಈ ಉತ್ಪನ್ನವನ್ನು ಮರಳಿಸಲು ನಾಚಿಕೆಯಾಗುತ್ತಿದೆ. ಡೆಲಿವರಿ ಮಾಡುವ ಸಹೋದರ ಈ ಸ್ಥಿತಿಯ ಬಗ್ಗೆ ಯೋಚಿಸಬಹುದು. ಇದಕ್ಕೂ ಮೊದಲು ನನಗೆ ಹೇರ್ ಕ್ಲಿಪ್ ಆರ್ಡರ್ ಮಾಡಿದ್ದಾಗ ಅದರ ಬದಲು ಟಮ್ಮಿ ಟಕ್ಕರ್ ಬಂದಿತ್ತು. ಅದನ್ನು ನಾನು ಖುಷಿಯಿಂದ ಇರಿಸಿಕೊಂಡೆ ಎಂದು ಬರೆದಿರುವ ಅವರು ತನಗೆ ಈ ರೀತಿ ತಪ್ಪಾದ ಆರ್ಡರ್ ತಲುಪುವುದು ಇದೇ ಮೊದಲಲ್ಲ ಎಂಬ ವಿಚಾರವನ್ನು ಹೇಳಿಕೊಂಡಿದ್ದಾರೆ.
ಈ ವೀಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಈ ಬಾಕ್ಸ್‌ನ್ನು ನೀವು ಏಕೆ ಮರಳಿಸುವಿರಿ, ಅಡುಗೆ ಮನೆಯಲ್ಲಿ ಜೀರಿಗೆ ಹಾಕಿಡಲು ಇದನ್ನು ಬಳಸಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋವನ್ನು ನಾನು ಮತ್ತೆ ಮತ್ತೆ ನೋಡುತ್ತಿದ್ದೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಬಹಳ ತಮಾಷೆಯಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ಅನುಭವ ನನಗೂ ಆಗಿತ್ತು ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿ ಸದ್ಯ ಅವರು ಬಳಸಿದ ಸಾಕ್ಸ್ ಕಳಿಸಿ ನಾವು ಪ್ರಜ್ಞೆ ತಪ್ಪಿ ಬೀಳುವಂತೆ ಮಾಡಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಧೋನಿ ವೈರಲ್ ವಿಡಿಯೋ ಬೆನ್ನಲ್ಲಿಯೇ ಮೂರೇ ಗಂಟೆಗಳಲ್ಲಿ 36 ಲಕ್ಷ ಕ್ಯಾಂಡಿ ಕ್ರಶ್ ಅಪ್ಲಿಕೇಶನ್ ಡೌನ್‌ಲೋಡ್!
