Asianet Suvarna News Asianet Suvarna News

ಏಕರೂಪ ನಾಗರಿಕ ಸಂಹಿತೆಗೆ 46 ಲಕ್ಷ ಅಭಿಪ್ರಾಯ ಸಲ್ಲಿಕೆ: ಶುಕ್ರವಾರ ಕಡೆ ದಿನ

ಧರ್ಮಾತೀತವಾಗಿ ಎಲ್ಲರಿಗೂ ಒಂದೇ ರೀತಿಯ ವಿವಾಹ, ವಿಚ್ಛೇದನ, ಆಸ್ತಿ ಮೊದಲಾದ ಕಾನೂನು ಹೊಂದುವ ಪ್ರಸ್ತಾವಿತ ಏಕರೂಪ ನಾಗರಿಕ ಸಂಹಿತೆಗೆ ಇದುವರೆಗೆ 46 ಲಕ್ಷ ಅಭಿಪ್ರಾಯಗಳು ಸಲ್ಲಿಕೆಯಾಗಿವೆ.

So far 46 lakh opinions have been submitted for the proposed Uniform Civil Code bill, which would have the same laws for all irrespective of religion akb
Author
First Published Jul 12, 2023, 12:14 PM IST

ನವದೆಹಲಿ: ಧರ್ಮಾತೀತವಾಗಿ ಎಲ್ಲರಿಗೂ ಒಂದೇ ರೀತಿಯ ವಿವಾಹ, ವಿಚ್ಛೇದನ, ಆಸ್ತಿ ಮೊದಲಾದ ಕಾನೂನು ಹೊಂದುವ ಪ್ರಸ್ತಾವಿತ ಏಕರೂಪ ನಾಗರಿಕ ಸಂಹಿತೆಗೆ ಇದುವರೆಗೆ 46 ಲಕ್ಷ ಅಭಿಪ್ರಾಯಗಳು ಸಲ್ಲಿಕೆಯಾಗಿವೆ. ಕರಡು ವರದಿ ಬಿಡುಗಡೆಗೂ ಮುನ್ನ ಕೇಂದ್ರ ಕಾನೂನು ಆಯೋಗವು ಈ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಿತ್ತು. ಅದಕ್ಕೆ ಇದುವರೆಗೆ ದೇಶದ ಎಲ್ಲಾ ಭಾಗಗಳಿಂದ 46 ಲಕ್ಷ ಜನರು ಪ್ರತಿಕ್ರಿಯೆ ನೀಡಿದ್ದಾರೆ. ಜು.14 ಜನರಿಗೆ ಅಭಿಪ್ರಾಯ ಸಲ್ಲಿಕೆಗೆ ಇರುವ ಕಡೆಯ ದಿನವಾಗಿದೆ. ಬಳಿಕ ಇವುಗಳನ್ನು ಆಧರಿಸಿ ಆಯೋಗ ತನ್ನ ಕರಡು ವರದಿ ರೂಪಿಸಲಿದೆ.

ಏಕರೂಪ ಸಂಹಿತೆಗೆ ಬಿಜೆಪಿ ಮಿತ್ರ ಪಕ್ಷದಲ್ಲೇ ವಿರೋಧ

ಏಕರೂಪ ನಾಗರಿಕ ಸಂಹಿತೆ ಜಾರಿಯನ್ನು ಇದೀಗ ಬಿಜೆಪಿಯ ಮಿತ್ರ ಪಕ್ಷವೇ ವಿರೋಧಿಸಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಮೈತ್ರಿಕೂಟದಲ್ಲಿರುವ ಎಐಎಡಿಎಂಕೆ ಪಕ್ಷ ಏಕರೂಪ ಸಂಹಿತೆಗೆ ಸಂಬಂಧಿಸಿದಂತೆ ತನ್ನ ನಿಲುವಿಗೆ ಬದ್ಧವಾಗಿರುವುದಾಗಿ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಕ್ಷದ ಅಧ್ಯಕ್ಷ ಕೆ. ಪಳನಿಸ್ವಾಮಿ, ‘ನಾವು 2019ರ ನಮ್ಮ ಚುನಾವಣೆ ಪ್ರಣಾಳಿಕೆಯ ಬಿಡುಗಡೆ ಮಾಡುವ ಸಮಯದಲ್ಲೇ ಹೇಳಿದ್ದೇವೆ. ನಾವು ಜಾತ್ಯಾತೀತವಾಗಿದ್ದು, ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡದಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲಿದ್ದೇವೆ. ಒಂದು ವೇಳೆ ಅದನ್ನು ಜಾರಿ ಮಾಡಿದರೆ ಅದು ಧರ್ಮವಾರು ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕಿಗೆ ಪರೋಕ್ಷವಾಗಿ ಪರಿಣಾಮ ಬೀರಲಿದೆ’ ಎಂದು ಹೇಳಿದ್ದಾರೆ.

ಏಕರೂಪ ಸಂಹಿತೆಯಿಂದ ಅಲ್ಪಸಂಖ್ಯಾತರ ಹೊರಗಿಡಿ: ಮುಸ್ಲಿಂ ಬೋರ್ಡ್‌

ಏಕರೂಪ ಸಂಹಿತೆ ಕುರಿತ ತನ್ನ ನಿಲುವಿಗೆ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ. ಕೇವಲ ಬುಡಕಟ್ಟು ಜನಾಂಗ ಮಾತ್ರವಲ್ಲದೇ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರನ್ನು ಏಕರೂಪ ನಾಗರಿಕ ಸಂಹಿತೆಯಿಂದ ಹೊರಗಿಡಬೇಕು ಎಂದು ಮಂಡಳಿ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ವಕ್ತಾರ ಕಾಸಿಮ್‌ ರಸೂಲ್‌ ಇಲ್ಯಾಸ್‌ ಹೇಳಿದ್ದಾರೆ.

ಸಂವಿಧಾನವೇ ಏಕರೂಪವಲ್ಲ, ಯುನಿಫಾರ್ಮ್ ಸಿವಿಲ್ ಕೋಡ್‌ಗೆ ಮುಸ್ಲಿಂ ಲಾ ಬೋರ್ಡ್ ವಿರೋಧ!

ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮೊದಲಿನಿಂದಲೂ ಏಕರೂಪ ಸಂಹಿತೆಗೆ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಭಾರತ ಹಲವು ಧರ್ಮ ಹಾಗೂ ಸಂಸ್ಕೃತಿಗಳನ್ನು ಹೊಂದಿರುವ ದೇಶವಾಗಿದೆ. ಹಾಗಾಗಿ ಇಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವುದು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ರಸೂಲ್‌ ಹೇಳಿದ್ದಾರೆ. ಏಕರೂಪ ಸಂಹಿತೆಗೆ ಸಂಬಂಧಿಸಿದಂತೆ ಆಕ್ಷೇಪಗಳನ್ನು ಸಲ್ಲಿಸಲು ಕಾನೂನು ಆಯೋಗ ಜುಲೈ 14 ರವರೆಗೆ ಅವಕಾಶ ನೀಡಿದೆ. ಇದನ್ನು 6 ತಿಂಗಳಿಗೆ ವಿಸ್ತರಿಸುವಂತೆ ಈ ಮೊದಲು ಮುಸ್ಲಿಂ ಮಂಡಳಿ ಮನವಿ ಮಾಡಿತ್ತು.

ಏಕರೂಪ ನಾಗರಿಕ ಸಂಹಿತೆ ಬಗ್ಗೆ ನೆಹರೂ ಸಲಹೆ ಹಂಚಿಕೊಂಡ ಶಶಿ ತರೂರ್‌: ಕಾಂಗ್ರೆಸ್‌ ನಿಲುವು ಹೀಗಿದೆ..

Follow Us:
Download App:
  • android
  • ios